ಮಕ್ಕಳಿಗೆ ಶರಣರ ಸಂಸ್ಕೃತಿ ಕಲಿಸಿ, ವಚನಗಳ ಅರಿವು ಮೂಡಿಸಿ: ನಾಗನೂರು ಶ್ರೀ

ವೃದ್ಧಾಶ್ರಮದಲ್ಲಿ ವಚನ ಜ್ಯೋತಿ ಕಾರ್ಯಕ್ರಮ

ಬೆಳಗಾವಿ

ಈ ದಿನಗಳ ವೈದಿಕ ಸಂಸ್ಕೃತಿ ಭರಾಟೆಯಲ್ಲಿ ಶರಣ ಸಂಸ್ಕೃತಿಯನ್ನು ಮರೆಮಾಚಲಾಗುತ್ತಿದೆ. ಮಕ್ಕಳಿಗೆ ಶರಣರ ಸಂಸ್ಕೃತಿ ಕಲಿಸಿ ವಚನಗಳ ಕುರಿತು ಅರಿವು ಮೂಡಿಸಿದರೆ ಸದ್ಗುಣಗಳ ಬೀಜ ಬಿತ್ತಿದಂತಾಗುತ್ತದೆ ಎಂದು ನಾಗನೂರು ಶ್ರೀ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಡಾವಣಿಯಲ್ಲಿರುವ ನಾಗನೂರು ಶಿವ ಬಸವೇಶ್ವರ ಟ್ರಸ್ಟನ ಶ್ರೀಮತಿ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದ ಸಭಾಭವನದಲ್ಲಿ ಆಯೋಜಿಸಿದ ಮಾಸಿಕ ವಚನ ಜ್ಯೋತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಚನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಮನುಷ್ಯರಾಗಿ ಬಾಳಲು ಸಾಧ್ಯ. ನಮ್ಮ ನಡೆ-ನುಡಿಗಳಲ್ಲಿ ಸಮಾನತೆ ಕಾಯ್ದುಕೊಳ್ಳಬೇಕಾಗಿದೆ ಎಂದರು. ಶರಣ ಸಂಸ್ಕೃತಿಯಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೀವನದುದ್ದಕ್ಕೂ ಕಾಯಕ ಮತ್ತು ದಾಸೋಹ ಸೇವೆಯಲ್ಲಿ ನಿರಂತರಾಗಿರುವ ಶರಣ ದಂಪತಿಗಳಾದ ಕೆಂಪಣ್ಣ ರಾಮಾಪುರೆ ಇವರ ಸೇವೆ ಸ್ಮರಿಸಿ, ಅವರ 43ನೇ ವಿವಾಹ ವಾರ್ಷಿಕೋತ್ಸವ ನಿಮಿತ್ಯ ಅವರಿಗೆ ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಶರಣ ಸಂಸ್ಕೃತಿಯ ಮಹತ್ವ ತಿಳಿಸಬೇಕು. ಲಿಂಗಾಯತ ಮಹಾಸಭೆ ವತಿಯಿಂದ ಶರಣ ಸಂಸ್ಕೃತಿ ಬೆಳೆಸಲು ವರ್ಷದುದ್ದಕ್ಕು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ, ವೃದ್ಧಾಶ್ರಮ ಸಂಯೋಜಕರಾದ ಎಂ. ಎಸ್. ಚೌಗಲಾ, ಸಂಚಾರಿ ಗುರುಬಸವ ಬಳಗದ ಮಹಾಂತೇಶ ತೋರಣಗಟ್ಟಿ, ಶಿವಾನಂದ ಸಂಗಿ, ಬಸವರಾಜ ಮತ್ತಿಕೊಪ್ಪ , ಮಹಾಸಭಾದ ಸುರೇಶ ನರಗುಂದ, ಬೂದಿಹಾಳ, ಕೆ.ಪಿ.ಎಸ್ ಯರಗಟ್ಟಿ ಶಾಲೆಯ ಪ್ರಾಚಾರ್ಯ ಕಿರಣ್ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾ ಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *