ಹುಬ್ಬಳ್ಳಿ
ಇಡೀ ವಿಶ್ವದ ಮಹಿಳೆಯರಿಗೆ ಶ್ರೀಗುರು ಬಸವಣ್ಣನವರ ಸ್ತ್ರೀಪರ ಹೋರಾಟದ ಕಾರಣದಿಂದಲೇ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ರಂಗಗಳಲ್ಲಿ ಸ್ವಾತಂತ್ರ್ಯ ಪ್ರಾಪ್ತವಾಯಿತು ಎಂದು ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ್ ಅಭಿಪ್ರಾಯಪಟ್ಟರು.
ಅವರು ನಗರದ ಗೋಕುಲ ರಸ್ತೆಯ ವೆಂಕಟಗಿರಿ ಲೇ ಔಟ್ ದಲ್ಲಿ ಲಿಂಗಾಯತ ಧರ್ಮ ಮಹಾಸಭೆಯ ಬಸವಾನುಭವ ಮಂಟಪದಲ್ಲಿ ರವಿವಾರ ಮುಂಜಾನೆ 11ಘಂಟೆಗೆ ಏರ್ಪಡಿಸಿದ್ದ “ಬಸವ ಪಂಚಮಿ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಪಾಲಕರು ಮಕ್ಕಳಿಗೆ ವಚನಗಳನ್ನು ಹೇಳಿಕೊಟ್ಟರೆ ಮಕ್ಕಳು ಕುಟುಂಬಕ್ಕೂ, ಸಮಾಜಕ್ಕೂ ಆಸ್ತಿಯಾಗುತ್ತಾರೆ ಎಂದರು.

ಹಿರಿಯ ಉದ್ಯಮಿ ಬಿ. ಜಿ. ಹೊಸಗೌಡರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹುಬ್ಬಳ್ಳಿಯ “ಚನ್ನಬಸವ ಸಾಗರ ಹೋರಾಟ ಸಮಿತಿ” ಮುಖಂಡ ಬಸವರಾಜ ಹುಲ್ಲೋಳಿ ಮಾತನಾಡಿ, “ಇಷ್ಟಲಿಂಗ ಪೂಜೆಯನ್ನು ಯಾವತ್ತೂ ಲಿಂಗಾಯತ ಧರ್ಮ ಭಾಂಧವರು ಮರೆಯಬಾರದು, ಮಕ್ಕಳಿಗೆ ಪೂಜಾ ಸಂಸ್ಕಾರ ಕಲಿಸಬೇಕು”ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಹುಬ್ಬಳ್ಳಿ ಘಟಕದ ಅಧ್ಯಕ್ಷ ಎಸ್. ಬಿ. ಜೋಡಳ್ಳಿ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು. ಸುನಿತಾ ಜೋಡಳ್ಳಿ ವಂದನಾರ್ಪಣೆ ಮಾಡಿದರು.
ಬಿ.ಬಿ. ಲಕ್ಷ್ಮೇಶ್ವರ, ಎಫ್. ಕೆ. ಬಣಕಾರ್, ಬಿ. ಸಿ. ಕೆಲಗೇರಿ, ಡಾ. ಬಸವರಾಜ ದೇಸಾಯಿ, ನೀಲಪ್ಪ ಹಿರೇಗುಂಜಾಳ್ ಉಪಸ್ಥಿತರಿದ್ದರು.