ಸವದತ್ತಿ
ಶರಣ ಫ ಗು ಹಳಕಟ್ಟಿಯವರ ಸ್ಮರಣಾರ್ಥ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಎರಡನೇ ವರ್ಷದ ‘ಶಿವಯೋಗ ಸಾಧನಾಪಥ ಕಮ್ಮಟ’ ಜುಲೈ 12,13 ಹಾಗೂ 14ರ 3ದಿನ ಯಶಸ್ವಿಯಾಗಿ ನಡೆಯಿತು.
ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಹುಬ್ಬಳ್ಳಿ, ಮೈಸೂರು, ನಂಜನಗೂಡು, ಚಾಮರಾಜನಗರ, ಬೆಳಗಾವಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಸಿರುಗುಪ್ಪ, ಸಿಂಧನೂರು, ಕಂಪ್ಲಿ, ಇತರೆ ಭಾಗಗಳಿಂದ ಅಲ್ಲದೆ, ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ನಾಂದೇಡ್, ಲಾತುರ್ ಗಳಿಂದಲು ಸಹ, ಒಟ್ಟು 450 ರಿಂದ 500 ಜಿಜ್ಞಾಸುಗಳು ಭಾಗವಹಿಸಿ ಕಾರ್ಯಕ್ರಮವನ್ನು ಸವಿದರು.

12ರಂದು ಕಮ್ಮಟ ಕಾರ್ಯಕ್ರಮಕ್ಕೆ ಚಾಲನೆ:
ಬೆಳಿಗ್ಗೆ 9.30 ಕ್ಕೆ ಷಟ್ಸ್ಥಲ ಧ್ವಜಾರೋಹಣೆ ಮತ್ತು ಶರಣರ ನೆನಹು ಮೂಲಕ ಚಾಲನೆಗೊಂಡಿತು.
ಮೊದಲ ಗೋಷ್ಠಿ ಬೆಳಿಗ್ಗೆ 10 ರಿಂದ 12.30 ರ ವರೆಗೆ, “ಸೃಷ್ಟಿಯ ಮೂಲ ಸ್ವರೂಪ” ವಿಷಯವನ್ನು ಕುರಿತು ಚಿಕ್ಕಮಗಳೂರಿನ ನೀಲಾ ನಾಗಭೂಷಣ ಅವರು ವಿಷಯಕ್ಕೆ ಪ್ರಸ್ತಾವನೆ ನೀಡಿದರು. ಬೆಂಗಳೂರಿನ ಭಾರತೀ ಕೆಂಪಯ್ಯ ಅವರು ವಚನಾಧಾರಿತವಾಗಿ ಸೃಷ್ಟಿಯ ನೆಲೆಯನ್ನ ಸವಿಸ್ತಾರವಾಗಿ ವಿವರಿಸಿದರು. ನಂತರ ಈ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.
ಮಧ್ಯಾನ್ಹ 12.30 ರಿಂದ 2 ಗಂಟೆಯವರೆಗೆ ಎರಡನೇ ವಿಷಯ “ದೇವನ ನಿಜದ ನೆಲೆ” ವಿಷಯವಾಗಿ, ಬೆಂಗಳೂರಿನ ಶರಣ ರೇಣುಕಯ್ಯನವರು ವಿಷಯ ಪ್ರಸ್ತಾಪಿಸಿದರು. ಸಿಂಧನೂರಿನ ಪಿ. ರುದ್ರಪ್ಪ ಅವರು ವಚನಗಳಲ್ಲಿ ನಿರೂಪಿಸಿದ ದೇವಸ್ವರೂಪದ ಬಗ್ಗೆ ವಿವರಣೆ ನೀಡಿದರು. ನಂತರ ಈ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.
ಮಧ್ಯಾನ್ಹ 3 ಗಂಟೆಯಿಂದ 4.30 ರವರೆಗೆ ಮೂರನೇ ಚಿಂತನಾಗೋಷ್ಠಿ “ಭಾರತದ ಯೋಗ ಪರಂಪರೆ ಮತ್ತು ಶಿವಯೋಗದ ಆಯಾಮಗಳು” ವಿಷಯದ ಬಗ್ಗೆ ಮಲ್ಲೂರಿನ ಶರಣ ರಾಯಪ್ಪ ಸಣ್ಣಮನಿಯವರು ಪ್ರಸ್ತಾವನೆ ಹಾಕಿ ಕೊಟ್ಟರು, ಚಿಕ್ಕೋಡಿಯ ವೈದ್ಯರಾದ ಡಾ. ದಯಾನಂದ ನೂಲಿಯವರು ಅನುಭಾವವನ್ನು ಪಿ ಪಿ ಟಿ ಮೂಲಕ ವಿವರಣೆ ನೀಡಿದರು. ನಂತರ ಈ ವಿಷಯದ ಬಗ್ಗೆ ಸಂವಾದ ನಡೆಯಿತು.

4.45 ರಿಂದ 6.15ರವರೆಗೆ ನಾಲ್ಕನೇ ಚಿಂತನಾ ಗೋಷ್ಠಿ “ಶರಣರು ಕಂಡುಕೊಂಡ ಶಿವಯೋಗ ಮಾರ್ಗ” ವಿಷಯವಾಗಿ ಹೊಸಪೇಟೆಯ ಶರಣ ಬಸವಕಿರಣ ಅವರು ಸವಿಸ್ತಾರವಾಗಿ ವಿಷಯ ಮಂಡಿಸಿದರು. ನಂತರ ವಿಷಯವಾಗಿ ಸಂವಾದ ನಡೆಯಿತು.
ಸಾಯಂಕಾಲ 7 ಗಂಟೆಯಿಂದ 8.30 ರವರೆಗೆ “ಭಾರತದ ಭಕ್ತಿ ಪರಂಪರೆ ಮತ್ತು ಶರಣರ ಭಕ್ತಿ ಮಾರ್ಗ-ವ್ಯತ್ಯಾಸಗಳು” ವಿಷಯದ ಬಗ್ಗೆ ಸಿಂಧನೂರಿನ ಪಿ. ರುದ್ರಪ್ಪನವರು ವಿಷಯ ಹಂಚಿಕೊಂಡರು.
13ರ ಕಮ್ಮಟ ಗೋಷ್ಠಿಗಳು
ಬೆಳಿಗ್ಗೆ 7.30 ಕ್ಕೆ ಇಷ್ಟಲಿಂಗ ಯೋಗ ಪ್ರಾತ್ಯಕ್ಷಿಕೆಯನ್ನು ಪಿ. ರುದ್ರಪ್ಪನವರು ನಡೆಸಿಕೊಟ್ಟರು. ಶಿವಯೋಗದಲ್ಲಿ ಮನಸ್ಸಿನ ಪಾತ್ರ ಕುರಿತು ವಿವರಣೆ ನೀಡಿ, ಅದನ್ನು ಶರಣರು ವಿವರಿಸಿದಂತೆ “ಕೋಲಿಗೆ ಸುತ್ತಿದ ನೋಲಿನಂತೆ”ಹೇಗೆ ಪ್ರಾಯೋಗಿಕವಾಗಿ ಕಾಯದೊಂದಿಗೆ ನಿಲಿಸಬಹುದು ಎನ್ನುವದರ ಬಗ್ಗೆ ವಿವರಣೆ ನೀಡಿದರು. ಮುಂದುವರೆದು ಇದು ಕೇವಲ ಪ್ರಾತ್ಯಕ್ಷಿಕೆಯೆ ಹೊರತು ಬೇರೇನೂ ಅಲ್ಲ. ಇದನ್ನು ವಯಕ್ತಿಕವಾಗಿ ಪೂಜೆ ಮಾಡಿಕೊಳ್ಳುವ ಸಂಧರ್ಭದಲ್ಲಿ ಪ್ರಯೋಗ ಮಾಡಿಕೊಂಡು ಅಂತಃಸಾಕ್ಷಿಯಂತೆ ಒಪ್ಪಿಕೊಳ್ಳಬೇಕು, ಅದಕ್ಕೆ ಒಪ್ಪಿಗೆ ಆಗದಿದ್ದರೆ ಸ್ವೀಕರಿಸುವ ಅಗತ್ಯ ಬರುವುದಿಲ್ಲ ಎಂದು ತಿಳಿಸಿದರು.
ದಿನದ ಮೊದಲ ಗೋಷ್ಠಿಯ ವಿಷಯ “ಲಿಂಗಾನುಸಂಧಾನದ ಕ್ರಮ”ದ ಪ್ರಾಸ್ತಾವಿಕ ನುಡಿಯನ್ನು ಬಸವಪುರದ ಶರಣ ಮುದ್ದನಗೌಡರು ನಡೆಸಿಕೊಟ್ಟರು. ವಿಷಯವನ್ನು ಪಿ ಪಿ ಟಿ ಮೂಲಕ ಚಿಕ್ಕೋಡಿಯ ಕಮಲ ಆಸ್ಪತ್ರೆ ಸರ್ಜನ್ ಡಾ. ದಯಾನಂದ ನೂಲಿಯವರು ವಿವರಿಸಿದರು.
ಎರಡನೇ ವಿಷಯ “ಶರಣರು ಅರುಹಿದಂತೆ ನೂರೊಂದು ಸ್ಥಲಗಳು” ಈ ಬಗ್ಗೆ ದಾವಣಗೆರೆಯ ಶರಣೆ ಭುವನೇಶ್ವರಿ ತಾಯಿಯವರು ಪ್ರಸ್ತಾಪನೆ ಮಾಡಿದರು. ಬೆಂಗಳೂರಿನ ಭಾರತೀ ಕೆಂಪಯ್ಯನವರು ಒಂದೊಂದು ಸ್ಥಲಗಳಲ್ಲಿ ಇರುವ ಸಾಧಕನ ಅಸ್ತಿತ್ವವನ್ನು ತಿಳಿಸಿದರು.

ಸಾಯಂಕಾಲ 3. 00 ರಿಂದ 4.30 ರವರೆಗೆ ” ಆದಿ -ಅನಾದಿ ಸಂಬಂಧ ” ದ ಬಗ್ಗೆ ಸೊಲ್ಲಪುರದ ಶರಣೆ ಮಹಾದೇವಿ ತೇಲಿಯವರು ಪ್ರಾರಂಭಿಕ ನುಡಿಗಳನ್ನು ನುಡಿದರು. ಬೈಲಹೊಂಗಲದ ಶರಣ ಶಿವಾನಂದ ಅರಭಾವಿ ಸೃಷ್ಟಿಯಲ್ಲಿನ ಈ ಎರಡು ತತ್ವಗಳ ಪರಸ್ಪರ ಸಂಬಂಧವನ್ನು, ಅವುಗಳು ಸೃಷ್ಟಿಕರ್ತನ ಜೊತೆ ಹೊಂದಿರುವ ನಿಲುಗಡೆಯನ್ನು ತಿಳಿಸಿದರು.
4.45 ರಿಂದ 6.15 ರವರೆಗೆ “ಇಷ್ಟಲಿಂಗದ ಸ್ವರೂಪ ” ಕುರಿತು ಪ್ರಾಸ್ತಾವಿಕ ನುಡಿಯನ್ನು ಹಾವೇರಿಯ ಸಿದ್ದಲಿಂಗೇಶ ನಾಸಿಯವರು ನುಡಿದರು, ಮುಖ್ಯ ವಿಷಯ ನಿರೂಪಕರಾಗಿ ನೇಗಿನಹಾಳದ ಮಂಜುನಾಥ ಮಡಿವಾಳರ ವಿಷಯವನ್ನು ಅರ್ಥಪೂರ್ಣವಾಗಿ ವಿವರಿಸಿದರು. ಅನುಭಾವದ ನುಡಿಯನ್ನು ಸಭಿಕರು ಸವಿದರು.
ಸಾಯಂಕಾಲ 7 ರಿಂದ 9 ಗಂಟೆಯವರೆಗೆ ವಿಷಯ ” ಲಿಂಗಾಂಗಯೋಗದಲ್ಲಿ ನೋಟ ಕೂಟ ಸಂಬಂಧ “ದ ಕುರಿತು ನೇಗಿನಾಳದ ಮಂಜುನಾಥ ಅವರು ಪ್ರಾಸ್ತಾವಿಕ ನುಡಿಗಳನ್ನು ಸಮರ್ಪಿಸಿದರು. ಪಿ. ರುದ್ರಪ್ಪನವರು ಮುಖ್ಯ ವಿಷಯ ನಿರೂಪಕರಾಗಿ ಅನುಭಾವ ನೀಡಿದರು.
14ರ ಕಮ್ಮಟ ಗೋಷ್ಠಿಗಳು
ಬೆಳಿಗ್ಗೆ 7.30ರಿಂದ ಶಿವಯೋಗ ಪ್ರಾತ್ಯಕ್ಷಿಕೆಯ ಪ್ರಸ್ತಾವಿಕ ನುಡಿಗಳನ್ನು ಶರಣ ಶಿವಪ್ಪ ಕೋರಿಕೊಪ್ಪ ಅವರು ವಿವರಿಸಿ, ತಮ್ಮ ಪಾರ್ಶ್ವವಾಯು ರೋಗ ಶಿವಯೋಗದ ಸಹಾಯದಿಂದ ಹೇಗೆ ಗುಣಪಡಿಸಿಕೊಂಡೆ ಎನ್ನುವದನ್ನು ತಿಳಿಸಿದರು. ಶಿವಯೋಗ ಪ್ರಾತ್ಯಕ್ಷಿಕೆಯನ್ನು ಪಿ. ರುದ್ರಪ್ಪನವರು ನಡೆಸಿಕೊಟ್ಟರು. ಶಿವಯೋಗ ಹೇಗೆ ಅನ್ಯ ಸಾಧನಾ ಮಾರ್ಗಗಳಿಗಿಂತ ಭಿನ್ನವಾಗಿದೆ, ಅದನ್ನ ಸಾಧಿಸುವುದರ ಪರಿಣಾಮಗಳೇನು ಎಂದು ತಿಳಿಸಿ, ಶಿವಯೋಗ ಸಾಧನೆಗೆ ಪೂರಕವಾದ ಅಂಶಗಳನ್ನು ವಿವರಿಸಿದರು.

ಬೆಳಿಗ್ಗೆ 10ರಿಂದ 12.30ರವರೆಗೆ ವಿಷಯ ” ವಚನಗಳಲ್ಲಿ ಸಕೀಲ ಸಂಬಂಧಗಳು” ಕುರಿತು ರಾಣೆಬೆನ್ನುರಿನ ಶರಣೆ ಸುಧಾ ನಂದಿಹಳ್ಳಿ ಪ್ರಸ್ತಾವನೆಯನ್ನು ಮಂಡಿಸಿದರು. ಶರಣೆ ಭಾರತೀ ಕೆಂಪಯ್ಯನವರು ಮುಖ್ಯ ವಿಷಯ ವಿವರಿಸಿ, ದೇವನೊಡನೆ ಜೀವನು( ಮಾನವ) ಹೊಂದುವ ಸಂಬಂಧವೆ ಸಕೀಲಗಳು ಎಂದು ತಿಳಿಸಿದರು. ಅಂತಿಮವಾಗಿ ಜ್ಞಾನ ಶೂನ್ಯ ಸ್ಥಲ ತಲುಪುವುದರ ಮೂಲಕ ಭಕ್ತ ಶಿವನಾಗುವ ನೆಲೆಯನ್ನು ವಿವರಿಸಿದರು.
12 ರಿಂದ 1.30ರವರೆಗೆ “ಸೃಷ್ಟಿಯಲ್ಲಿ ಮಂತ್ರದ ಸ್ವರೂಪ” ಕುರಿತು ದಾವಣಗೆರೆಯ ಶರಣೆ ಅಮರಕಲಾ ಹಿರೇಮಠ ಸಂಕ್ಷಿಪ್ತವಾಗಿ ತಿಳಿಸಿದರು. ಪಿ ರುದ್ರಪ್ಪನವರು ಮಂತ್ರದ ಅಖಂಡ ಸ್ವರೂಪವನ್ನು ವಚನಗಳ ಸಾಕ್ಷಿ ನೀಡಿ ವಿವರಿಸಿದರು. ಈ ಗೋಷ್ಠಿ ಸಮಾರೋಪ ಸಮಾರಂಭದ ಜೊತೆ ಜೋಡಿಸಲ್ಪಟ್ಟಿದ್ದರಿಂದ ಬೈಲಹೊಂಗಲದ ಶಾಸಕರಾದ ಶರಣ ಮಹಾಂತೇಶ ಕೌಜಲಗಿ ಅವರು, ಶಾಂತರಾಗಿ ಕುಳಿತು ಅನುಭಾವವನ್ನು ಆಲಿಸಿದರು.
ಕೊನೆಗೆ ಶಾಸಕರು ಮಾತನಾಡಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳು ಕೆಲವು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಾಯಂಕಾಲ 3 ರಿಂದ 5 ಗಂಟೆಯವರೆಗೆ ಪುಂಡಲೀಕ ಇಂಗಳಗಿ, ರಾಯಪ್ಪ ಸಣ್ಣಮನಿ ಮಲ್ಲೂರು, ಈರಣ್ಣ ಬಾನಿ ಮಲ್ಲೂರು ಭಾಗವಹಿಸಿ ಮಾತನಾಡಿದರು.
ಮೂರು ದಿನದ ಕಮ್ಮಟದಲ್ಲಿ ನೇಗಿನಹಾಳದ ಶರಣ ಮಂಜುನಾಥ ಮತ್ತು ಇತರರು ಸಂಗೀತ ಸೇವೆ ನೀಡಿದರು. ಮಲ್ಲೂರಿನ ಯುವಕರು ಪ್ರಸಾದ ತಯಾರಿಸಿ, ವಿತರಿಸುವುದರಲ್ಲಿ ತೋರಿದ ಶಿಸ್ತು, ಆದರ್ಶಪ್ರಾಯವಾಗಿತ್ತು.
ಅನುಭಾವಿಗಳೆಲ್ಲ ಶರಣ ಶರಣೆಯರ ಜೊತೆ ಸಾಲಿನಲ್ಲಿ ನಿಂತು ಪ್ರಸಾದ ಪಡೆದು, ಎಲ್ಲರೊಡನೆ ಸೇರಿ ಪ್ರಸಾದ ಸ್ವೀಕರಿಸಿದ್ದು ಶರಣರ ಸಮಾನತಾ ತತ್ವದ ದ್ಯೋತ್ಯಕ ಇಲ್ಲಿ ಬಿಂಬಿತವಾಯಿತು.
ಕಮ್ಮಟದಲ್ಲಿ ಚಿಂತನೆಗೊಳಪಟ್ಟ ವಿಷಯಗಳು ಪ್ರಾರಂಭದಿಂದ ಅಧ್ಯಂತಿಕ ಸ್ವರೂಪ ಮುಟ್ಟಲು ತಿಳಿಸಿದ ಉನ್ನತ ವಿಚಾರಗಳ ನೆಲೆಯಂತೆ ಕಂಡು ಬಂದಿತು. ಶರಣತತ್ವ ಕೇವಲ ಸಾಮಾಜಿಕ ವಿಷಯಗಳನ್ನು ಮಾತ್ರ ಒಳಗೊಂಡಿಲ್ಲ, ಜೊತೆಗೆ ಸೃಷ್ಟಿ ರಹಸ್ಯ ಭೇದಿಸಿ ಸೃಷ್ಟಿಕರ್ತನೊಡನೆ ಕೂಡುವ ನೆಲೆಗಳನ್ನು ಸಹ ತಿಳಿಸಿವೆ, ಎನ್ನುವ ಸತ್ಯವನ್ನು ಸಾಧಕ ಜಿಜ್ಞಾಸುಗಳು ಅರಿತು ಸಂತಸಪಟ್ಟರು.