ಮಸಬಿನಾಳ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ:

12ನೇ ಶತಮಾನದಲ್ಲಿ ಸಮಾನತೆ, ಅಕ್ಷರ ಕ್ರಾಂತಿ, ವಚನ ಕ್ರಾಂತಿ, ಅನ್ನದಾಸೋಹದಂತಹ ಕಾರ್ಯಕ್ರಮವನ್ನು ನೀಡುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣನವರು ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು‌

ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಾಷ್ಟ್ರೀಯ ಬಸವಸೈನ್ಯ ಮಸಬಿನಾಳ ಗ್ರಾಮ ಘಟಕ ಆಯೋಜಿಸಿದ್ದ ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಬಸವಣ್ಣನವರು ಅಸ್ಪ್ರಶ್ಯತೆಯ ಅನಿಷ್ಟ ಪದ್ಧತಿಯ ನಿರ್ಮೂಲನಕ್ಕೆ ನಾಂದಿ ಹಾಡಿದರು. ತಮ್ಮ ವಚನದ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದರು ಎಂದರು.

ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಜ್ಯೋತಿ ಬೆಳಗಿಸಿ ಮಾತನಾಡಿ, ಬಸವಣ್ಣನವರ ಪುತ್ಥಳಿ ಅನಾವರಣವಾಗಿರುವುದು ಸಂತಸದ ಸಂಗತಿ. ಬಸವಣ್ಣನವರ ಆಶಯದಂತೆ ಇಂದಿಗೂ ವಿವಿಧ ಮಠದಲ್ಲಿ ಸರ್ವರಿಗೂ ಶಿಕ್ಷಣ, ಅನ್ನ ದಾಸೋಹದಂತ ಕಾರ್ಯವನ್ನು ಮಠಾಧೀಶರು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿಸಿದರು.

ಇತ್ತೀಚೆಗೆ ರಾಜ್ಯ ಸರ್ಕಾರ ಕೂಡಾ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಬಸವಭಕ್ತರಿಗೆ ಸಂತೋಷ ತರುವುದರ ಜೊತೆಗೆ ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿದ್ದು, ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ಹೋರಾಟಕ್ಕೆ ಜಯ ದೊರಕಿದಂತಾಗಿದೆ.

ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದವು ಹಡಪದ ಅಪ್ಪಣ್ಣನವರ ಜನಿಸಿದ ಮಸಬಿನಾಳ ಗ್ರಾಮವನ್ನು ಸೇರಿಸಿ ಅಭಿವೃದ್ಧಿಪಡಿಸಬೇಕೆಂದು ಈ ವೇದಿಕೆಯ ಮುಖಾಂತರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.

ಸಾನಿದ್ಯ ವಹಿಸಿ ಮಾತನಾಡಿದ ಮಸಬಿನಾಳದ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ, ಬಸವಣ್ಣನವರ ಕೊಡುಗೆ ಸಮಾಜಕ್ಕ ಅಪಾರ. ವಚನ ಸಾಹಿತ್ಯದ ಮೂಲಕ ಲೋಕದ ಸತ್ಯವನ್ನು ಅರ್ಥವಾಗುವಂತೆ ತಿಳಿಸಿ ಹೊಸ ಶಕೆಗೆ ನಾಂದಿ ಹಾಡಿದರು. ಅವರ ನಡೆ-ನುಡಿ ಹಾಗೂ ಅವರು ತೋರಿದ ಹಾದಿಯನ್ನು ನಾವೆಲ್ಲರೂ ಅನುಸರಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ಪಾಟೀಲ, ಗ್ರಾಮ ಪಂಚಾಯತಿ ಅದ್ಯಕ್ಷಣಿ ರಮೀಜಾ ಮೈರಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಹಿರೇಮಠ, ಚಂದ್ರಶೇಖರ ಬೈಚಬಾಳ, ಅಶೋಕ ತೋಟದ, ಈರಣ್ಣ ಕೌಲಗಿ, ರವಿ ಬೈಚಬಾಳ, ರವಿ ಕತ್ನಳ್ಳಿ, ಮುದಕಪ್ಪ ಮಡಗೊಂಡ ಉಪಸ್ಥಿತರಿದ್ದರು.

ಸೋಮಶೇಖರ ಕಾರಜೋಳ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಬಸವಸೈನ್ಯದ ಮಸಬಿನಾಳ ಗ್ರಾಮ ಘಟಕದ ಅಧ್ಯಕ್ಷ ಪ್ರಶಾಂತ ಬೈಚಬಾಳ ಸ್ವಾಗತಿಸಿದರು. ಅಭಿಷೇಕ ಶಿಂದಗಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ಬಸವಣ್ಣನವರ ಪುತ್ಥಳಿಯ ಮೆರವಣಿಗೆಗೆ ಜವಳಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಚಾಲನೆ ನೀಡಿದರು.

Share This Article
Leave a comment

Leave a Reply

Your email address will not be published. Required fields are marked *