ಮಠ ಮಂದಿರಗಳಿಂದ ನೆಮ್ಮದಿ ಪ್ರಾಪ್ತಿ: ಕೋಡಿಹಳ್ಳಿ ಶ್ರೀಗಳು

ರಾಯಬಾಗ:

ಮಠ, ಮಂದಿರಗಳು ಮನುಷ್ಯನಿಗೆ ಶಾಂತಿ, ನೆಮ್ಮದಿ, ಐಕ್ಯತೆಯನ್ನು ನೀಡುತ್ತವೆ. ಭಕ್ತರಲ್ಲಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಪರಿಕಲ್ಪನೆಗಳನ್ನು ಬಿತ್ತುತ್ತವೆ. ಇದರಿಂದ ಭಕ್ತರ ಭಾವನೆಗಳು ಇಮ್ಮಡಿಗೊಂಡು ಸಮಾಜದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಆಗುತ್ತದೆ ಎಂದು ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀ ಡಾ. ಶಿವಾನಂದ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ಮಹಾ ಶಿವಯೋಗಿಗಳವರ 50ನೇ ‘ನಮ್ಮೂರು ಜಾತ್ರೆ’, ‘ವಚನ ರಥೋತ್ಸವ’ ನಿಮಿತ್ಯವಾಗಿ ನೂತನವಾಗಿ ನಿರ್ಮಿಸಿದ ಶ್ರೀಮಠದ ಗೋಪುರದ ಕಳಸಾರೋಹಣ ನೆರವೇರಿಸಿ ಮಾತನಾಡಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳು ಮಾತನಾಡಿ, ಮಠ -ಮಠಾಧೀಶರು ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಸಾಮರಸ್ಯದಿಂದ ಬದುಕಲು ಹೇಳಿದರೆ, ಬಸವಣ್ಣನವರ ಕಾಯಕ ದಾಸೋಹ ತತ್ವ, ಸಮಾನತೆಯನ್ನು ಹೇಳಿಕೊಡುತ್ತದೆ ಎಂದರು.

ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಮಾತನಾಡಿ, ಮಠಾಧಿಪತಿಗಳು ಮಠಕ್ಕೆ ಕಳಸವಾಗಬೇಕು. ಮನೆತನಕ್ಕೆ ಭಕ್ತರು ಕಳಶವಾಗಬೇಕು. ಮಠಾಧೀಶರು ಪಟ್ಟಾಭಿಷೇಕವಾಗುವ ಸಂದರ್ಭದಲ್ಲಿ ಅವರ ಬೆನ್ನಿಗೆ ಬಂಗಾರ, ಆಸ್ತಿ, ಹಣ ಕಟ್ಟುವುದಿಲ್ಲ, ಮಸ್ತಕಕ್ಕೆ ಜ್ಞಾನ ನೀಡುವ ಪುಸ್ತಕಗಳನ್ನು ಕಟ್ಟಿರುತ್ತಾರೆ. ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು ಲಿಂಗಾಯತ ಮಠಾಧಿಪತಿಗಳ ವಕ್ತಾರರಾಗಿ ಜ್ಞಾನದ ರತ್ನವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಚಿಮ್ಮಡ ಪ್ರಭು ಸ್ವಾಮಿಗಳು, ಬಂತನಾಳ ವಿರಕ್ತಮಠದ ವೃಷಭಲಿಂಗ ಸ್ವಾಮಿಗಳು, ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ಮಠದ ಶಿವಾನಂದ ಸ್ವಾಮಿಗಳು, ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗಿ ಸ್ವಾಮಿಗಳು, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ, ಚಿಂಚಣಿ ಸಿದ್ದ ಸಂಸ್ಥಾನ ಮಠದ ಶಿವಪ್ರಸಾದ ದೇವರು, ದಾಸೋಹ ಮಠ ಸೊನ್ನದ ಡಾ. ಶಿವಾನಂದ ಸ್ವಾಮಿಗಳು, ಶ್ರೀಶೈಲ ಸುಲಫಲ ಸಾರಂಗಮಠದ ಡಾ. ಸಾರಂಗದರ ಸ್ವಾಮಿಗಳು ಇದ್ದರು. ಶೇಗುಣಿಸಿ ಮಹಾಂತಪ್ರಭು ಸ್ವಾಮಿಗಳು ನಿರೂಪಿಸಿದರು.

ಶ್ರೀ ಸಿದ್ದೇಶ್ವರ ಮಠದಿಂದ ಶಿವಲಿಂಗೇಶ್ವರ ಗದ್ದುಗೆಯವರಿಗೆ ರಾತ್ರಿ 10 ಗಂಟೆಗೆ ಭವ್ಯ ರಥೋತ್ಸವ ಜರುಗಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *

ಶಿವಾಜಿ ಮೇತ್ರಿ, ಪಾಲಬಾವಿ, ರಾಯಬಾಗ