“ಇನ್ನೂ ಮುಂದೆ ಸಮಾಜ, ಪೀಠ ಎರಡೂ ಕಟ್ಟುವ ಕಾರ್ಯ ಮಾಡುತ್ತೆನೆ.”
ಕೂಡಲಸಂಗಮ
ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ವಿವಾದಕ್ಕೆ ತೆರೆ ಬಿದ್ದಿದೆ. ಮಂಗಳವಾರ ಸಂಜೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಆಗಮಿಸಿ ಎಂದಿನಂತೆ ಮಠಕ್ಕೆ ಆಗಮಿಸಿದ ಭಕ್ತರಿಗೆ ಆಶಿರ್ವಾದ ಮಾಡಿದರು.
ಹುನಗುಂದ ಬಸವ ಮಂಟಪದಲ್ಲಿ ಸಮಾಜ ಮುಖಂಡರ ಸಭೆ ಮುಗಿಸಿ ನೇರವಾಗಿ ಬಸವಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬರುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಜಯಘೋಷಗಳನ್ನು ಕೂಗಿದರು. ನಂತರ ಗುರುಪೂರ್ಣಿಮೆ ಆಚರಿಸಿದರು. ಮಠದ ಮುಂದೆ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರು.
ಸಮಾಜದ ಮುಖಂಡರು ಸ್ವಾಮೀಜಿಗಳು ಪೀಠದ ಅಭಿವೃದ್ಧಿಯ ಕಡೆ ಗಮನ ಹರಿಸಬೇಕು, ವಾರದಲ್ಲಿ ಮೂರು ದಿನಗಳ ಕಾಲ ಪೀಠದಲ್ಲಿಯೇ ಇರಬೇಕು, ನಿರಂತರ ದಾಸೋಹ ಏರ್ಪಡಿಸಬೇಕು ಎಂದು ಹೇಳಿದರು.
ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸದ್ಯ ಮಠ ಇರುವ ಆಸ್ತಿ ಪೀಠದ ಹೆಸರಿನಲ್ಲಿ ಇರಲಿಲ್ಲ, ಪೀಠದ ಹೆಸರಿನಲ್ಲಿ ಆದ ನಂತರ ಮಠ ಕಟ್ಟುವ ಕಾರ್ಯ ಮಾಡಿ ಎಂದು ಸಮಾಜದ ಮುಖಂಡರೆ ಹೇಳಿದ್ದರು. ಪೀಠ ಕಟ್ಟದೇ ಸಮಾಜ ಕಟ್ಟುವ ಕಾರ್ಯ ಮಾಡಿದ್ದೆನೆ. ಇನ್ನೂ ಮುಂದೆ ಸಮಾಜ, ಪೀಠ ಕಟ್ಟುವ ಕಾರ್ಯ ಮಾಡುತ್ತೆನೆ. ಎಲ್ಲ ಭಕ್ತರು ಸಹಕಾರ ಕೊಡಬೇಕು. ಕಟ್ಟಡ ಸಮಿತಿ ರಚನೆ ಮಾಡಿ, ಮಠದ ಯೋಜನಾ ನಕ್ಷೆ ಇದೆ, ಕಟ್ಟಡಕ್ಕೆ ಅಗತ್ಯವಾದ ಹಣವನ್ನು ಭಕ್ತರಿಂದ ದೇಣಿಗೆ ಪಡೆದು ತರುತ್ತೆನೆ. ಮಠ ಕಟ್ಟುವ ಕಾರ್ಯ ಭಕ್ತರು ಮಾಡಲಿ, ಅದಕ್ಕೆ ಬೇಕಾದ ಹಣ ತರುವ ಕಾರ್ಯ ನಾನು ಮಾಡುತ್ತೆನೆ. ಸಮಾಜ ಸಂಘಟನೆ, ಮಠ ನಿರ್ಮಾಣ ಕಾರ್ಯವನ್ನು ಎಲ್ಲರೂ ಕೂಡಿಯೇ ಮಾಡೋಣ. ಇನ್ನೊಮ್ಮೆ ಇಂತಹ ಘಟನೆ ಆಗದಂತೆ ಮುಖಂಡರು ನೋಡಿಕೊಳ್ಳಬೇಕು. ಈ ಘಟನೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ನನಗೆ ಎಷ್ಟೇ ನೋವು ಕೊಟ್ಟರು ಸಹಿಸಿಕೊಳ್ಳುತ್ತೆನೆ. ಸಮಾಜದ ಜನರಿಗೆ ನೋವು ಕೊಡುವ ಘಟನಗಳು ಆಗಬಾರದು ಎಂದರು.
ಇದಕ್ಕೆ ಮುನ್ನ ಹುನಗುಂದದಲ್ಲಿ ಮಾತನಾಡಿದ ಅವರು, ‘ಪೀಠದ ಬಗ್ಗೆ ಅಪಪ್ರಚಾರ ನಿಲ್ಲಲಿ. ಮಠಕ್ಕೆ ಬೀಗ ಪರಿಹಾರವಲ್ಲ. ಭಕ್ತರ ಮನೆಗಳೇ ನನ್ನ ಪೀಠ. ನಾಲ್ಕು ಗೋಡೆಗಳ ಮಠ ಕಟ್ಟಿರುವೆ. ಅಲ್ಲೇ ನನ್ನ ಉಳಿವು, ಅಳಿವು. ಅಂತ್ಯವೂ ಅಲ್ಲಿಯೇ ಆಗಲಿ’ ಎಂದು ಹೇಳಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟಿನ ಟ್ರಸ್ಟಿಗಳಾದ ಎಲ್.ಎಂ. ಪಾಟೀಲ, ಜಿ.ಜಿ. ಬಾಗೇವಾಡಿ, ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ಸಮಾಜದ ಮುಖಂಡರಾದ ಎಂ.ಎಸ್. ಪಾಟೀಲ, ಮಹಾಂತಗೌಡ ಪಾಟೀಲ, ಬಸವರಾಜ ಕಡಪಟ್ಟಿ, ರಾಜಕುಮಾರ ಬಾದವಾಡಗಿ, ಶೇಖಪ್ಪ ದೇಶಿ, ಬಸವರಾಜ ಗೌಡರ, ಮಹಾಂತೇಶ ನರಗುಂದ ಮುಂತಾದವರು ಇದ್ದರು.
ಸಿ.ಸಿ. ಕ್ಯಾಮೆರಾ ಅಳವಡಿಕೆ, ಪೊಲೀಸ್ ಸಿಬ್ಬಂದಿ ಬಿಡಾರ
ಪಂಚಮಸಾಲಿ ಪೀಠಕ್ಕೆ ಬೆಳಿಗ್ಗೆ ೧೨ ಗಂಟೆಯ ಸುಮಾರಿಗೆ ಎಲ್ಲ ದಿಕ್ಕುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರು. ಹುನಗುಂದ ಪೊಲೀಸ್ ಠಾಣೆಯ ಸಿಬ್ಬಂದಿ ಮಠದ ಮುಂದೆ ಸಿಬ್ಬಂದಿಯೊಂದಿಗೆ ಬಿಡಾರ ಹೂಡಿದ್ದರು.
ಪೀಠ ಸ್ವಾಮಿಗಳದ್ದು ಅಲ್ಲ, ಅದೇ ರೀತಿ ಸಮಾಜದ ಒಬ್ಬರು ಇಬ್ಬರೋ ವ್ಯಕ್ತಿಗಳದ್ದು ಅಲ್ಲ. ಹಿಂದೂ ಧರ್ಮದ ಪೀಠವೂ ಅಲ್ಲ.
ಪೀಠ ಪಂಚಮಸಾಲಿ ಪಂಗಡದ ಜನರದು. ಲಿಂಗಾಯತ ಧರ್ಮದ್ದು.
ಪೀಠದಲ್ಲಿ ಸ್ವಾಮಿಗಳು ವಾಸ ಆಗಿಲ್ಲ. ಕರ್ನಾಟಕದ ಪಂಚಮಸಾಲಿ ಜನರ ಮನದಲ್ಲಿ ಮನೆ ಕಟ್ಟಿದ್ದಾರೆ. ಜನರ ಮನಸ್ಸೆ ಅವರ ಮಠ. ಇನ್ನೂ ಒಂದು ಕಟ್ಟಡ ಕಟ್ಟುವುದು ಲಿಂಗಾಯತ ಧರ್ಮಕ್ಕೆ ದೊಡ್ಡ / ಕಠಿಣ ಕಾರ್ಯ ಅಲ್ಲ.