ಹುಬ್ಬಳ್ಳಿ
“ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಆಹಾರಕ್ಕೆ ವಿಷ ಬೆರೆಸಿ ಅವರನ್ನು ಮುಗಿಸಬೇಕೆಂದು ಯೋಚನೆ ಮಾಡಿದ್ದಾರೆ” ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ ಸೋಮವಾರ ಆರೋಪಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಶ್ರೀಗಳಿಗೆ ಫುಡ್ ಪಾಯಿಸನ್ ಆಗಿದೆ ಅಂತ ಗೊತ್ತಿತ್ತು. ಮಠದ ಹೊರಗಡೆ ಯುವಕರಿಬ್ಬರು ಇದ್ದಾರೆ. ಆ ಇಬ್ಬರು ಮಠಕ್ಕೆ ಯಾರು ಬರ್ತಾರೆ ಯಾರು ಹೋಗುತ್ತಾರೆ ಅಂತ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವೀಡಿಯೊ ಸಹ ಮಾಡಿಕೊಳ್ಳುತ್ತಿದ್ದಾರೆ ಅಂತ ಭಕ್ತರು ನನಗೆ ಹೇಳಿದ್ದಾರೆ. ಅದೇ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೇ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಶ್ರೀಗಳು ಈ ಬಗ್ಗೆ ನನಗೆ ಮುಂದೆ ಹೇಳಿಕೊಂಡಿದ್ದಾರೆ. ಶ್ರೀಗಳು ತಮಗೆ ವಿಷಪ್ರಾಶನ ಆಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ,” ಎಂದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಿದರೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಯ ಹೋರಾಟ ಅಂತ್ಯವಾಗಲಿದೆ ಎಂದು ಕಾಂಗ್ರೆಸ್ ಸರಕಾರ ಭಾವಿಸಿದಂತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಸ್ವಾಮೀಜಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಲಿಂಗಾಯತ ಪಂಚಮಸಾಲಿ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸ್ವಾಮೀಜಿಗೆ ತೊಂದರೆ ಕೊಟ್ಟು, ಹೋರಾಟ ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಅದು ಅಸಾಧ್ಯವಾಗಿದ್ದು, ಸೂಕ್ತ ಸಮಯದಲ್ಲಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಯಾವ ಪಕ್ಷಕ್ಕೂ, ಮಠಕ್ಕೂ ಸೀಮಿತವಾಗಿಲ್ಲ. ಅವರು ಸಮಾಜದ ಅಭ್ಯುದಯಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಿಂದೆ ನಮ್ಮ ಬಿಜೆಪಿ ಸರಕಾರ 2ಎ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಈಗಿನ ಕಾಂಗ್ರೆಸ್ ಸರಕಾರ ಅದನ್ನು ಜಾರಿಗೆ ತರುತ್ತಿಲ್ಲ ಎಂದು ಬೆಲ್ಲದ್ ಆರೋಪಿಸಿದರು.
ಕಾಶಪ್ಪನವರ್ ಪ್ರತಿಕ್ರಿಯೆ
‘ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಆಹಾರದಲ್ಲಿ ವಿಷಪ್ರಾಶನ ಆರೋಪ ಕುರಿತು ತನಿಖೆ ನಡೆಯಲಿ’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಒತ್ತಾಯಿಸಿದರು.
‘ಸ್ವಾಮೀಜಿ ಅವರ ಊಟದಲ್ಲಿ ವಿಷ ಬೆರೆಸಿರುವ ಶಂಕೆ ಇದೆ’ ಎಂದು ಶಾಸಕ ಅರವಿಂದ ಬೆಲ್ಲದ ಮಾಡಿರುವ ಆರೋಪಕ್ಕೆ ಸೋಮವಾರ ಪ್ರತಿಕ್ರಿಯಿಸಿದರು.
‘ಬೆಲ್ಲದ ಅವರು ಆಸ್ಪತ್ರೆಗೆ ಭೇಟಿ ನೀಡಿ ಸ್ವಾಮೀಜಿ ಆರೋಗ್ಯ ವಿಚಾರಿಸಿದಾಗಲೂ ಇಂತಹ ಮಾತು ಆಡಿರಲಿಲ್ಲ. ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ, ಸಿ.ಸಿ. ಪಾಟೀಲ ಅವರಿಗೆ ಬೇರೊಬ್ಬರ ಮೇಲೆ ಆರೋಪ ಮಾಡದೇ ಇದ್ದರೆ ತಿಂದಿದ್ದು ಜೀರ್ಣವಾಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸ್ವಾಮೀಜಿ ಮಠದಲ್ಲಿ ಪೂಜೆ ಮಾಡುತ್ತಾರೆಯೇ ಹೊರತು ರಸ್ತೆಯಲ್ಲಿ ಅಲ್ಲ. ಗುರುಗಳು ಮಠದಲ್ಲಿ ಇದ್ದರೆ ಒಳ್ಳೆಯದು, ಇಲ್ಲದೇ ಇದ್ದರೆ ಹೊಸ ಗುರುಗಳು ಬರಲಿದ್ದಾರೆ’ ಎಂದರು.