“ಮುರುಘಾ ಮಠದಲ್ಲಿ ಹತ್ತುಸಾವಿರ ಜನರಿಂದ ವಚನ ಝೇಂಕಾರ”

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಸಂಸ್ಕೃತಿ ಉತ್ಸವ-೨೦೨೬

ಚಿತ್ರದುರ್ಗ:

ಶರಣ ಸಂಸ್ಕೃತಿ ಉತ್ಸವ-೨೦೨೬ ಅಂಗವಾಗಿ ಅನುಭವ ಮಂಟಪದಲ್ಲಿ ಏಕಕಾಲಕ್ಕೆ ೧೦೦೦೦ ಶ್ರೀಮಠದ ಭಕ್ತರಿಂದ ವಚನ ಝೇಂಕಾರ ಕಾರ್ಯಕ್ರಮ ನಡೆಯಿತು.

ಸಿ. ಅಶ್ವಥ್ ಅವರ ರಾಗ ಸಂಯೋಜನೆಯ ಅಯ್ಯಾ ನೀನು ನಿರಾಕಾರವಾದಲ್ಲಿ, ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ಲೇಸೆನಿಸಿಕೊಂಡು ಐದು ದಿನ ಬದುಕಿದರೇನು, ನೀನೊಲಿದರೆ ಕೊರಡು ಕೊನರುವುದಯ್ಯ, ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ, ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು, ನುಡಿದರೆ ಮುತ್ತಿನ ಹಾರದಂತಿರಬೇಕು, ನಿಮ್ಮ ಶರಣರಿಗೆ ಶರಣೆಂಬುದು ಕರುಣಿಸು ಕೂಡಲ ಸಂಗಮದೇವನಲ್ಲಿನ ಒಟ್ಟು ೩೬ ವಚನಗಳನ್ನು ೧೦೦೦೦ ಜನ ಏಕಕಾಲಕ್ಕೆ ಗಾಯನ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ವಚನ ಪಠಣವಾಗಬೇಕು. ವಚನಗಳು ಪಚನವಾಗಬೇಕು. ದಾವಣಗೆರೆಯಲ್ಲಿ ೩೬೦೦ಕ್ಕು ಹೆಚ್ಚಿನ ಜನ ಹಾಡಿದ್ದರು. ಇಲ್ಲಿ ವಚನ ಝೇಂಕಾರದಲ್ಲಿ ೧೦ ಸಾವಿರ ಜನರಿಂದ ಹಾಡಿಸುವ ಪ್ರಯತ್ನವಾಗಿದೆ. ಇದು ದಾಖಲೆಯಾಗಿದೆ.

ಪ್ರತಿಯೊಂದು ವಚನಗಳನ್ನು ಹಾಡುವಾಗ ಎಲ್ಲರಿಗೂ ಉತ್ಸಾಹ ಮೂಡುತ್ತದೆ. ಇದು ಬದುಕಿನಲ್ಲಿ ಸಾಕಾರವಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ದೇಶ ಕಲ್ಯಾಣವಾಗಲು ಸಾಧ್ಯವಾಗುತ್ತದೆ. ಅಂತರಂಗದ ಕತ್ತಲನ್ನು ಕಳೆದರೆ ಜ್ಞಾನ ಲಭ್ಯವಾಗುತ್ತದೆ.

ದೇಶ ಹಾಗೂ ನಾಡಿನಲ್ಲಿ ಪಾನಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಮದ್ಯವ್ಯಸನ ಮುಕ್ತರಾಗಬೇಕು. ನಾಳೆ ಮದ್ಯಪಾನ ನಿಯಂತ್ರಣ ಸಮಾಲೋಚನೆ ಕಾರ್ಯಕ್ರಮವು ಮದ್ಯವ್ಯಸನ ಮುಕ್ತರಾಗಲು ಸಹಾಯಕವಾಗಲಿದೆ ಎಂದು ನುಡಿದರು.

ಚಿನ್ಮೂಲಾದ್ರಿಯ ಚಿದ್ಭನ ಕೃತಿಯನ್ನು ಬಿಡುಗಡೆ ಮಾಡಿದ ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ ಬಿ. ಪಾಟೀಲ ಮಾತನಾಡಿ, ವಚನ ಝೇಂಕಾರ ಕಾರ್ಯಕ್ರಮ ಹೃದಯಸ್ಪರ್ಶಿಯ ಕಾರ್ಯಕ್ರಮವಾಗಿದೆ. ಇದು ಎಲ್ಲರ ಹೃದಯ ಮುಟ್ಟುವಂತಹ ಕಾರ್ಯಕ್ರಮವಾಗಿದೆ. ದಾಖಲೆಯ ಕಾರ್ಯಕ್ರಮ ಇದಾಗಿದ್ದು, ಸಂಘಟಕರ ಕೆಲಸ ಅಭಿನಂದನೀಯ.

ಶ್ರೀಮಠದಿಂದ ಅನೇಕ ಕೃತಿಗಳು ಹೊರಬರುತ್ತಿವೆ. ಮುಂದಿನ ದಿನಗಳಲ್ಲಿ ಶರಣ ಸಾಂಸ್ಕೃತಿಕ ಉತ್ಸವವನ್ನು ಸಾಹಿತ್ಯ ಉತ್ಸವವನ್ನಾಗಿ ಮಾಡಿ. ಶ್ರೀಮಠ ಅನ್ನ, ಆಶ್ರಯ, ಆಧ್ಯಾತ್ಮದ ಸಂಘಟನೆಯ ಮಠವಾಗಿದೆ. ಇಂತಹ ಕೃತಿಗಳನ್ನು ಬಿಡುಗಡೆ ಮಾಡಿರುವುದು ನನ್ನ ಪುಣ್ಯದ ಕೆಲಸ. ಜೀವನ ಮೌಲ್ಯದಲ್ಲಿನ ಹಲವು ಪ್ರಶ್ನೆಗಳಿಗೆ ಭಾರತ ಮಾತ್ರ ಉತ್ತರವಾಗಿದೆ.

೪ ರೀತಿಯ ಪುಸ್ತಕ ಕೊಳ್ಳುವ ವರ್ಗವಿದೆ. ಕೆಲವರು ಪುಸ್ತಕಗಳನ್ನು ಕೊಳ್ಳುತ್ತಾರೆ. ಕೆಲವರು ಪುಸ್ತಕ ಕೊಳ್ಳುವುದಿಲ್ಲ. ೩ನೇ ವರ್ಗ ಕೊಂಡು ಓದಿ ತಿಳಿದುಕೊಳ್ಳುತ್ತಾರೆ. ೪ನೆ ವರ್ಗ ಕೊಂಡು ಓದಿ ಬೇರೆಯವರಿಗೆ ಮಾಹಿತಿ ವಿಷಯ ತಿಳಿಸುವ ವರ್ಗವಾಗಿದೆ.

ನೀರಿನಲ್ಲಿ ಮಿಂದವರು ಬಟ್ಟೆ ಬದಲಾಯಿಸುತ್ತಾರೆ. ಬೆವರಿನಲ್ಲಿ ಮಿಂದವರು ಶ್ರೇಷ್ಠರಾಗುತ್ತಾರೆ. ಜೀವನದಲ್ಲಿ ಮಿಂದವರು ಮಹಾತ್ಮರಾಗುತ್ತಾರೆ. ಪುಸ್ತಕಗಳು ಉತ್ತಮ ಸಾಧನಗಳಾಗಿವೆ. ಮಠಗಳು ಹಸಿದವರಿಗೆ ಅನ್ನ ನೀಡಿದಾಗ ಪ್ರಸಾದ, ಬಾಯಾರಿದಾಗ ಕೊಡುವ ನೀರು ತೀರ್ಥ ಸಮಾನ.

ಲೋಕಾರ್ಪಣೆ ಮಾಡಿರುವ ಪುಸ್ತಕಗಳು ಓದುಗರ ಹೃದಯ ಮುಟ್ಟಿ ಜ್ಞಾನವನ್ನು ಹೆಚ್ಚಿಸುವಂತಾಗಲಿ ಎಂದು ನುಡಿದರು.

ಚಿನ್ಮೂಲಾದ್ರಿಯ ಚಿನ್ಮಯ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಮಾತನಾಡಿ, ವಚನಗಳು ಜೀವನದಲ್ಲಿ ಪಾಲಿಸಬೇಕಾದ ಮೌಲ್ಯಗಳನ್ನು ಒಳಗೊಂಡಿವೆ. ಯಾರು ದೇವರನ್ನು ನೋಡಲು ಸಾಧ್ಯವಿಲ್ಲ. ಆದರೆ ದೇವರ ಸ್ವರೂಪದ ತಂದೆತಾಯಿಗಳನ್ನು ನೋಡಬೇಕು. ತಾಯಿ ಕುಟುಂಬಕ್ಕಾಗಿ ಶ್ರಮಿಸುತ್ತಾಳೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರು ತಾಯಿಯನ್ನು ಮರೆಯಬಾರದು. ವಿವಿಧ ಧರ್ಮಿಯರು ಇಲ್ಲಿ ಬಾಗವಹಿಸಿರುವುದು ವಿಶೇಷ. ಜಾತಿರಹಿತ ಸಮಸಮಾಜದ ಸ್ಥಾಪನೆ ಶ್ರೀಮಠದ ಮೂಲಕ ನಡೆಯುತ್ತಿದೆ. ಯುವಜನತೆ ವಚನಗಳನ್ನು ಅರ್ಥೈಸಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸಂಸ್ಥಾನಮಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ವಚನಗಳು ಸುಮ್ಮನೆ ರೂಪಿಸಿಕೊಂಡ ಪದಗಳಲ್ಲ. ಅವು ಸತ್ಯದ ನುಡಿಗಳು. ವಚನಗಳನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು. ವಚನಗಳು ನಮ್ಮಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತವೆ. ವಚನಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮುರುಘಾಮಠ ಮಾಡುತ್ತಿದೆ ಎಂದು ತಿಳಿಸಿದರು.

ಪಂಚಮಸಾಲಿ ಜಗದ್ಗುರು ಗುರುಪೀಠದ ಶ್ರೀ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ವಚನಗಳನ್ನು ಹಾಡುತ್ತ ಬಸವತತ್ವ ಬೆಳೆಯುತ್ತಿದೆ. ಇದಕ್ಕೆ ವಚನ ಗಾಯನವೇ ಕಾರಣ. ಹನ್ನರಡನೆಯ ಶತಮಾನದಲ್ಲಿ ವಚನ ಝೇಂಕಾರವು ೭೭೦ ಅಮರಗಣಂಗಳಿಂದ ಮೋಕ್ಷ ಪಡೆದಿತ್ತು. ಈಗ ಇದು ಮರುಕಳಿಸಿದೆ ಎಂದು ನುಡಿದರು.

ಚಿಗರಳ್ಳಿ ಶ್ರೀ ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು ಮಾತನಾಡಿ, ವಚನಗಳನ್ನು ಹೇಳುವಾಗ ಕಣ್ಣುಗಳು ತುಂಬಿ ಬಂದವು. ಈ ಕಾರ್ಯಕ್ರಮ ಆಯೋಜಿಸಿರುವ ಬಸವಕುಮಾರ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ. ವಚನಗಳನ್ನು ಹಾಡುವುದಷ್ಟೇ ಮುಖ್ಯವಲ್ಲ. ಅವುಗಳನ್ನು ತಮ್ಮ ಅಂತರಂಗಕ್ಕೆ ತೆಗೆದುಕೊಳ್ಳುವುದು ಅತಿ ಅಗತ್ಯ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ವಚನ ಗಾಯನ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಶ್ರೀ ಮರುಳಸಿದ್ಧ ಸ್ವಾಮಿಗಳು ಸಾವಿರ ಜನರಿಂದ ಪ್ರಾರಂಭಿಸಿದರು. ಸಾಣೇಹಳ್ಳಿ ಶಿವಚಾರ್ಯ ಸ್ವಾಮಿಗಳು ಈ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಯೋಜಿಸಿದ್ದರು. ಈಗ ಮುರುಘಾಮಠದಲ್ಲಿ ೧೦ ಸಾವಿರ ಜನರಿಂದ ವಚನ ಝೇಂಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ವಿಶ್ವ ದಾಖಲೆಯ ಕಾರ್ಯಕ್ರಮವಾಗಿದೆ.

ವಚನಗಳನ್ನು ಹೇಳಿದರೆ ಸಾಲದು. ವಚನಗಳಲ್ಲಿನ ಮಹತ್ವವನ್ನು ತಿಳಿದುಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಪಿ.ಎಸ್. ಶಂಕರ ಮಾತನಾಡಿ, ನಾನು ನನ್ನ ಪ್ರಾಥಮಿಕ, ಫ್ರೌಢ ಶಿಕ್ಷಣ ಹಾಗೂ ಇಂಟರ್ ಮೀಡಿಯಟ್ ಶಿಕ್ಷಣವನ್ನು ಇಲ್ಲಿಯೇ ಪಡೆದಿದ್ದೇನೆ. ನಾನು ಚಿತ್ರದುರ್ಗದವನು. ಜಾಫರ್ ಷರೀಪ್ ನನ್ನ ಸ್ನೇಹಿತರಾಗಿದ್ದರು.

ವಚನಗಳು ನಮ್ಮ ಬದುಕಿನ ಬಹು ಮುಖ್ಯ ಭಾಗವಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ವಚನ ಪ್ರಾರ್ಥನೆ ಮಾಡಬೇಕು. ವಚನಗಳನ್ನು ಹೇಳುವುದರ ಜೊತೆಗೆ ಆಚರಣೆಗೆ ತರಬೇಕು.

ಜಯದೇವ ಜಗದ್ಗುರುಗಳು ನನಗೆ ಆರೋಗ್ಯ ಸರಿಯಿಲ್ಲದಾಗ ಬಂದು ವಿಚಾರಿಸಿದಾಗ ನನಗೆ ವಚನಗಳನ್ನು ಹಾಗೂ ಪುಸ್ತಕಗಳನ್ನು ರಚಿಸುವ ಆಸಕ್ತಿ ಉಂಟಾಯಿತು ಎಂದು ತಿಳಿಸಿದರು.

ಎಸ್.ಜೆ.ಎಂ.ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ. ಗುಡಸಿ ಮಾತನಾಡಿ, ವಚನಗಳನ್ನು ಕಲಿಯುವುದು, ಹೇಳುವುದು ಮುಖ್ಯ. ಮುಂದಿನ ಪೀಳಿಗೆಗೆ ವಚನಗಳನ್ನು ತಲುಪಿಸುವ ಕೆಲಸ ಇಲ್ಲಿ ಆಗುತ್ತಿದೆ. ಆ ಕಾರ್ಯವನ್ನು ಶ್ರೀಗಳು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾಧಾರ ಚೆನ್ನಯ್ಯ, ಶ್ರೀ ಸೇವಾಲಾಲ್ ಬಂಜಾರ ಗುರುಪೀಠದ ಶ್ರೀ ಬಸವ ಸರ್ದಾರ ಸೇವಾಲಾಲ ಮಹಾಸ್ವಾಮಿಗಳು, ಶ್ರೀ ಮೇದಾರ ಕೇತೇಶ್ವರ ಗುರುಪೀಠದ ಇಮ್ಮಡಿ ಬಸವಕೇತೇಶ್ವರ ಮಹಾಸ್ವಾಮಿಗಳು, ಶ್ರೀ ಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಮಹಾಸ್ವಾಮಿಗಳು, ಬೀರವಳ್ಳಿ ಶ್ರೀ ಗುರುದೇವ ತಪೋವನ ನಂದತಾಯಿ, ಕೊಲ್ಲಾಪುರದ ಶ್ರೀ ಶಿವಾನಂದ ಮಹಾಸ್ವಾಮಿಗಳು, ತೆಲಸಂಗ ಕುಂಬಾರ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ತಂಗಡಗಿ ಹಡಪದ ಅಪ್ಪಣ್ಣದೇವರು ಗುರುಪೀಠದ ಶ್ರೀ ಅನ್ನದಾನಿಭಾರತಿ ಬಸವಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳು, ಯೋಗಗುರು ಶ್ರೀ ಚನ್ನಬಸವಣ್ಣ, ಗಂಗಾಪುರ ಶ್ರೀ ಸಿದ್ಧಾರೂಢ ಆಶ್ರಮದ ಸದ್ಗುರು ಶ್ರೀ ಮರುಳಶಂಕರ ಮಹಾಸ್ವಾಮಿಗಳು, ಶಿರುಗುಪ್ಪ ಶ್ರೀ ಗುರುಬಸವ ಮಠದ ಶ್ರೀ ಬಸವಭೂಷಣ ಮಹಾಸ್ವಾಮಿಗಳು, ಬಸವಕಲ್ಯಾಣ ಬಸವ ಮಹಾಮನೆಯ ಸತ್ಯಕ್ಕನವರು, ಚೊಂಡಿ ಬಸವ ಮಂಟಪದ ವಚನ ಸಂಸ್ಕೃತಿ, ಲಾಳನಹಳ್ಳಿ ಶ್ರೀ ಗುರುಮಲ್ಲೇಶ್ವರ ದಾಸೋಹಮಠದ ಜಯದೇವಿ, ಕಲ್ಯಾಣಪುರದ ಶ್ರೀ ಕಲ್ಯಾಣ ಬಸವೇಶ್ವರ ಮಠದ ಚಿನ್ಮಯಿ ತಾಯಿ, ಉಳವಿ ಶ್ರೀ ಚನ್ನಬಸವೇಶ್ವರ ಮಠದ ಶ್ರೀ ಬಸವಲಿಂಗಮೂರ್ತಿ ಮಹಾಸ್ವಾಮಿಗಳು, ಹೊಳಲ್ಕೆರೆಯ ಶ್ರೀ ತಿಪ್ಪೇರುದ್ರ ಮಹಾಸ್ವಾಮಿಗಳು, ಮಲ್ಲೂರಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಠದ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು, ಗೊಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀವರದಾನೇಶ್ವರ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಚಿತ್ರದುರ್ಗದ ವೀರಶೈವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ಭೀಮಸಮುದ್ರದ ವಾಣಿಜ್ಯೋದ್ಯಮಿಗಳಾದ ಜಿ.ಎಸ್. ಅನಿತಕುಮಾರ, ಹೊಸದುರ್ಗ ಬಿಜೆಪಿ ಮುಖಂಡರಾದ ಲಿಂಗಮೂರ್ತಿ, ಸಿದ್ಧಾರ್ಥ ಗುಂಡಾರ್ಪಿ, ಜಾಗತಿಕ ಲಿಂಗಾಯತ ಮಹಾಸಭಾ ಜೆ. ಮಲ್ಲೇಶ, ಹನುಮಂತೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಮಾರಸ್ವಾಮಿ ಕೆ.ಟಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರೊ. ಲಕ್ಷ್ಮಣ ತೆಲಗಾವಿ ಸಂಪಾದಕತ್ವ ಹಾಗೂ ಪ್ರಕಾಶ ಗಿರಿಮಲ್ಲಣ್ಣನವರ ಉಪಸಂಪಾದಕತ್ವದ- ಮೂಲಕರ್ತೃ ಮುರಿಗಾಶಾಂತವೀರ ಸ್ವಾಮಿಗಳ ಸಮಗ್ರ ಕೃತಿ “ಚಿನ್ಮೂಲಾದ್ರಿಯ ಚಿದ್ಭನ”ಕೃತಿ ಹಾಗೂ ಶಿವಯೋಗಿ ಸಿ. ಕಳಸದರವರ ಸಂಪಾದಕತ್ವದ ಅಥಣಿ ಮುರುಘೇಂದ್ರ ಶಿವಯೋಗಿಗಳ ಕುರಿತ ಸಮಗ್ರ ಬರಹಗಳು – “ಲೋಕ ಜಂಗಮ”ಕೃತಿ, ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳವರ “ಚಿನ್ಮೂಲಾದ್ರಿಯ ಚಿನ್ಮಯ”ಕೃತಿಯನ್ನು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರು ಹಾಗೂ ನಾಡೋಜ ಡಾ. ಪಿ.ಎಸ್ ಶಂಕರ್‌ರವರು ರಚಿಸಿರುವ “ಕತ್ತಲನ್ನು ಕಳೆಯುವ ಬೆಳಕು”ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಗಣ್ಯರಿಂದ ಬಾಲ್ಯವಿವಾಹ ಕಾನೂನು ರೀತಿ ಅಪರಾಧ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ಸ್ವಾಗತಿಸಿ, ಡಾ.ಬಸವ ಮರುಳ ಸಿದ್ದಸ್ವಾಮಿಗಳು ನಿರೂಪಿಸಿ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *