ಗಂಗಾವತಿ
ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಮತ್ತು ನಂತರ ದಲಿತ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ, ಹಚ್ಚಿ ಹಲ್ಲೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 101 ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ.
ಸೋಮವಾರ ಈ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ ಆರೋಪ ಸಾಬೀತು ನಿರ್ಧಾರ ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಅ. 24ರಂದು ಪ್ರಕಟಿಸಲು ಕಾಯ್ದಿರಿಸಲಾಗಿದೆ.
ಅಸ್ಪೃಶ್ಯತೆ ಪ್ರಕರಣವೊಂದರಲ್ಲಿ ಇಷ್ಟೊಂದು ಜನರ ವಿರುದ್ಧ ಆರೋಪ ಸಾಬೀತಾಗಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಏನಿದು ಪ್ರಕರಣ:
ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ 2015ರಲ್ಲಿ ಕ್ಷೌರದಂಗಡಿಗೆ ಮತ್ತು ಹೋಟೆಲ್ ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಗಲಾಟೆಯಾಗಿತ್ತು. ಇದಾದ ಮೇಲೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದರು. ಆದರೆ ಅಂದೇ ರಾತ್ರಿಯ ವೇಳೆ ದಲಿತ ಕೇರಿಗೆ ಸರ್ವಣೀಯರು ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಆದರೆ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ.
ಇದಾದ ಮೇಲೆ ಗ್ರಾಮದ ಸುಮಾರು 117 ಜನರ ವಿರುದ್ಧ ಪ್ರಕರಣ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿನ ಆರೋಪಿಗಳಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಈ ಪೈಕಿ 101 ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿದೆ.
100 ಆರೋಪಿಗಳ ಬಂಧನ:
ಪ್ರಕರಣಕ್ಕೆ ಸಂಬಂಧಿಸಿದಂತೆ 100 ಜನರನ್ನು ಸೋಮವಾರ ಬಂಧಿಸಲಾಗಿದೆ. ವಿಚಾರಣೆಗೆ ಹಾಜರಾಗಿದ್ದವರನ್ನು ಆರೋಪ ಸಾಬೀತಾದ ಹಿನ್ನೆಲೆ ಬಂಧಿಸಲಾಗಿದೆ. ಇನ್ನೋರ್ವ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ಬಂಧಿಸಲು ಆಗಿಲ್ಲ, ಆತನ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ರಾಜ್ಯಾದ್ಯಂತ ಸದ್ದು:
ಮುರುಕುಂಬಿ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ದಲಿತ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಹಚ್ಚಿದ ಮೇಲೆ ಸುಮಾರು ಮೂರು ತಿಂಗಳ ಕಾಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಇದಾದ ಮೇಲೆ ಪ್ರಕರಣದ ವಿಚಾರಣೆ ಕಳೆದ 9 ವರ್ಷಗಳಿಂದ ನಡೆಯುತ್ತಿದ್ದು, ಈಗ ಆರೋಪ ಸಾಬೀತಾಗಿದೆ. ಅ. 24ರಂದು ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟ ಮಾಡಲಾಗುತ್ತದೆ. ಅಲ್ಲಿಯವರೆಗೂ ತೀರ್ಪು ಕಾಯ್ದಿರಿಸಲಾಗಿದೆ.