ಮೈಸೂರು ಪ್ರಾಂತ್ಯ ಬಸವತತ್ವದ ಪುಣ್ಯಭೂಮಿ: ಸಿದ್ದಲಿಂಗ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಮರಿಯಾಲ

ರಾಜ್ಯದಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ. ಮೈಸೂರು ಭಾಗದ ಮಠಗಳಂತೂ ಕಾಯಕ, ದಾಸೋಹ ಅಳವಡಿಸಿಕೊಂಡು ಜನರಲ್ಲಿ ಬಸವತತ್ವದ ಬಗ್ಗೆ ಅರಿವು ಮೂಡಿಸುತ್ತಿರುವುದು ಈ ಭಾಗದ ಪುಣ್ಯ ಎಂದು ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಮಂಗಳವಾರ ಹೇಳಿದರು.

ತಾಲೂಕಿನ ಮರಿಯಾಲ ಮಹಾಸಂಸ್ಥಾನ ಮಠದಲ್ಲಿ ಮುರುಘರಾಜೇಂದ್ರ ಸ್ವಾಮಿಗಳ 109ನೇ ವರ್ಷದ ಸ್ಮರಣೋತ್ಸವ, ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳ ಗುರುಪಟ್ಟಾಧಿಕಾರ ರಜತ ಮಹೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದರು.

ಮೈಸೂರು ಪ್ರಾಂತ್ಯ ಬಸವತತ್ವದ ಪುಣ್ಯಭೂಮಿ. ಯಡಿಯೂರು ಸಿದ್ದಲಿಂಗೇಶ್ವರರು, ಮಲೆ ಮಹಾದೇಶ್ವರರು, ಗುರುಮಲ್ಲೇಶ್ವರರು, ಮುರುಘರಾಜೇಂದ್ರ ಸ್ವಾಮಿಗಳು ನೆಲೆಸಿದ ಪುಣ್ಯಭೂಮಿ.

ಚಾಮರಾಜನಗರ ಜಿಲ್ಲೆಯಲ್ಲಿ ಗುರುಮಲ್ಲೇಶ್ವರರು, ಅವರ ಸಮಕಾಲೀನರಾದ ಮುರುಘ ರಾಜೇಂದ್ರ ಸ್ವಾಮಿಗಳು ನೆಲೆಸಿ, ದಾಸೋಹ, ಕಾಯಕ ತತ್ವವನ್ನು ಅಳವಡಿಸಿಕೊಂಡು ಬಸವ ತತ್ವವನ್ನು ಸಾರುತ್ತಾ ಮಠಗಳನ್ನು ಸ್ಥಾಪಿಸಿದರು. ಅಂತಹ ಮಠಗಳಲ್ಲಿ ಮರಿಯಾಲದ ಮುರುಘ ರಾಜೇಂದ್ರಸ್ವಾಮಿ ಮಠವು ಒಂದಾಗಿದೆ ಎಂದರು.

ಇಂತಹ ಮುಖ್ಯ ಮಠದ ಅಧಿಕಾರವಹಿಸಿಕೊಂಡು 24 ವರ್ಷ ಜನರಸೇವೆ ಮಾಡುತ್ತಾ, ಬಸವತತ್ವ ಪ್ರಚಾರದಲ್ಲಿ ತೊಡಗಿ, ತಮ್ಮ ಗುರುಗಳ ಆಜ್ಞೆ ಯನ್ನು ಪಾಲಿಸುತ್ತಾ ಮಠವನ್ನು ಮುನ್ನಡೆಸುತ್ತಿರುವ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ಸುವರ್ಣ ಮಹೋತ್ಸವ ಆಚರಿಸಲಿ. ಮಠದ ಗುರುಗಳು ಒಂದು ಕೈಯಲ್ಲಿ ಲಿಂಗಪೂಜೆ ಮಾಡುತ್ತಾ ಇನ್ನೊಂದು ಕೈಯಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಶರಣರ ಒಂದೊಂದು ವಚನದಲ್ಲೂ ಜೀವಾನಾಮೃತ ತುಂಬಿದೆ. ಇಂತಹ ಶರಣರ ವಚನಗಳಲ್ಲಿ ಒಂದು ವಚನವನ್ನಾದರೂ ಪಾಲಿಸಿದರೆ ನಮ್ಮ ಜೀವನ ಬದಲಾಯಿಸಿಕೊಳ್ಳಬಹುದು ಎಂದರು.

ಸಮಾರಂಭದಲ್ಲಿ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟಧಾರಣೆ ಮಾಡಿ ಮೆರವಣಿಗೆಯಲ್ಲಿ ಕರೆದೊಯ್ದು ಗೌರವ ಸಲ್ಲಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *