ನಗೆಯ ಮಾರಿತಂದೆ ಉತ್ಸವ
ಬೀದರ:
ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ಬೇರೆಯವರ ನಗುವನ್ನು ಕೇಳಿಸಿಕೊಂಡು ನಗುವುದು ಅತಿಶಯವಾದ ಧರ್ಮ. ನಗುವುದರಿಂದ ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮುಂಡರಗಿ ತೋಂಟದಾರ್ಯಮಠ ಹಾಗೂ ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಶರಣ ಉದ್ಯಾನದಲ್ಲಿ ಜರುಗಿದ ಶರಣ ಸಂಗಮ, ನಗೆಮಾರಿ ತಂದೆಗಳ ಸ್ಮರಣೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.

ನಗೆಯ ಮಾರಿತಂದೆ ಶರಣರಲ್ಲಿ ವಿಶಿಷ್ಠರಾಗಿದ್ದರು. ಜೀವನದ ಕಷ್ಟಗಳನ್ನು ನಗೆಯ ಮೂಲಕ ಎದುರಿಸುವ ಕಾಯಕದ ಹಿರಿಮೆ ಸಾರಿದರು. ಮನುಷ್ಯರಿಗೆ ನಗುವು ಒಂದು ವಿಟಮಿನ್. ನಗು ಕೇವಲ ಸಂತೋಷ ವ್ಯಕ್ತಪಡಿಸುವ ಪರಿಭಾವವಲ್ಲ ಅದು ತೀವ್ರ ಒತ್ತಡದ ಸನ್ನಿವೇಶಗಳನ್ನು ತಿಳಿಗೊಳಿಸುವ ದಿವ್ಯ ಔಷಧವಾಗಿದೆ. ಇದು ಆರೋಗ್ಯದ ಮೇಲೆ ಸಕಾರಾತ್ಮ ಪರಿಣಾಮ ಬೀರುತ್ತದೆ. ಎಂದು ನುಡಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿಕೊಂಡು ಮಾತನಾಡಿ, ನಗಿಸುವುದು ಅಸಾಮಾನ್ಯ ಕಲೆ, ನಗುವ ಸಾಮರ್ಥ್ಯ ಇರುವುದು ಮನುಷ್ಯನಿಗೆ ಮಾತ್ರ, ೧೨ನೇ ಶತಮಾನದ ನಗೆಮಾರಿ ತಂದೆಯವರು ಜನರನ್ನು ನಗಿಸುತ್ತಲೇ ಸುಂದರ ಬದುಕಿನ ತತ್ವಗಳನ್ನು ಸಾರುವುದು ಕಾಯಕವಾಗಿಸಿಕೊಂಡಿದ್ದರು.
ಬಿಗುಮಾನ, ಅಹಂಕಾರ, ಇನ್ನೊಬ್ಬರ ಮನ ನೋಯಿಸದಂತೆ ಮನಸ್ಸು ಪೂರ್ತಿ ನಗುವುದರಿಂದ ಒತ್ತಡ ನಿವಾರಣೆಯಾಗಿ ಆನಂದ ಲಭಿಸುತ್ತದೆ ಎಂದರು.
೨೦೨೬ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬೆಂಗಳೂರು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಡಾ.ಎಸ್.ಜಿ.ಸುಶೀಲಮ್ಮ ಅಭಿನಂದನೆ ಸ್ವೀಕರಿಸಿ, ಆಸೆ, ಆಮಿಷ ಧಿಕ್ಕರಿಸುವ ಜತೆಗೆ ಸತ್ಯಶುದ್ಧ ಕಾಯಕವನ್ನು ಕೈಗೊಂಡು ದಾಸೋಹ ಮಾಡುತ್ತ ಬದುಕನ್ನು ನಡೆಸಿದವರು ವಚನಕಾರ್ತಿಯರು. ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡುವ ಗುಣ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯ ಎಂದರು.
ಬೀದರ ಮಹಾನಗರ ಪಾಲಿಕೆ ಉಪಮಹಾಪೌರರಾದ ಲಕ್ಷ್ಮಿಬಾಯಿ ಹಂಗರಗಿ ಉದ್ಘಾಟಿಸಿದರು, ಶರಣಬಸವ ಚಕುರ್ತೆ ಧ್ವಜಾರೋಹಣಗೈದರು, ದಶಪ್ಪ ಬೊರಗೊಂಡೆ ಉಪಸ್ಥಿತರಿದ್ದರು. ಅಲ್ಲಮಪ್ರಭು ಮಹಿಳಾ ಭಜನಾ ಮಂಡಳದವರು ವಚನ ಭಜನೆ ನಡೆಸಿಕೊಟ್ಟರು. ನಾಗೇಶ್ವರಿ ಮಾನಕಾರಿ ಭಕ್ತಿ ದಾಸೋಹಗೈದರು. ಶರಣಮ್ಮ ಪವಾಡಶೆಟ್ಟಿ ನಿರೂಪಿಸಿದರು.
ನಗೆಗಡಲಲ್ಲಿ ತೇಲಾಡಿದ ಸಭಿಕರು:
ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಹಾಗೂ ಪಾಪನಾಶ ನಗೆಕೂಟದವರು ಗಂಡ ಹೆಂಡತಿ, ಮಕ್ಕಳು, ಶಿಕ್ಷಕರು, ಗೆಳೆಯರ ಮಧ್ಯೆ ನಡೆಯುವ ಹಾಸ್ಯ ಪ್ರಸಂಗಗಳು ಹಾಗೂ ಮಿಮಿಕ್ರಿಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಾಡಿಸಿ, ಮನರಂಜಿಸಿದರು.
