ನಮ್ಮ ಕಾಲದಲ್ಲಿಯೇ ಲಿಂಗಾಯತ ಧರ್ಮದ ಮಾನ್ಯತೆ ಬರುತ್ತದೆ: ವಿರತೀಶಾನಂದ ಶ್ರೀ

ಸಿಂಧನೂರು

ಎಲ್ಲಾ ಧರ್ಮದವರು ತಮ್ಮ ತಮ್ಮ ಧರ್ಮದ ಆಚರಣೆಗಳನ್ನು ತಪ್ಪದೇ ಆಚರಿಸುತ್ತಾರೆ. ಅವರಿಗಿರುವ ಧರ್ಮದ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಲಿಂಗಾಯತರು ಅನುಸರಿಬೇಕು, ಎಂದು ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಬಸವಪುರ (ಈಜೆ) ಗ್ರಾಮದ ಶರಣ ವೀರನಗೌಡ ಸಣ್ಣಗೌಡ್ರು ಮನೆಯಲ್ಲಿ ಜರುಗಿದ ಕುಮಾರ ಚನ್ನಬಸವ ಅವರ ಜನನ ಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಲಿಂಗಾಯತ ಧರ್ಮವನ್ನು ವೈಚಾರಿಕ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಬಸವ ತಂದೆಯವರು ರೂಪಿಸಿಕೊಟ್ಟಿದ್ದಾರೆ. ಸತತ 12 ವರ್ಷಗಳ ಕಾಲ ಸಂಶೋಧನೆ ಮಾಡಿ “ಇಷ್ಟಲಿಂಗ”ವನ್ನು ಕಂಡುಹಿಡಿದು, ಮೊದಲು ತಾವೇ ಅದನ್ನು ಧರಿಸಿಕೊಂಡು ಆನಂದಿಸಿಕೊಂಡರು.

ನಂತರ ತಮ್ಮ ಅಕ್ಕ ನಾಗಲಾಂಬಿಕೆ ತಾಯಿಯವರಿಗೆ ಇಷ್ಟಲಿಂಗ ದೀಕ್ಷೆಯನ್ನು ದಯಪಾಲಿಸಿದರು. ಅಕ್ಕ ನಾಗಮ್ಮ ತಾಯಿಯವರು ತಮ್ಮ ಪತಿಯಾದ ಶಿವದೇವರಿಗೆ ದೀಕ್ಷೆಯನ್ನು ನೀಡಿದರು. ಹೀಗೆ ಶರಣರು ಒಬ್ಬರಿಗೊಬ್ಬರು ಇಷ್ಟಲಿಂಗ ದೀಕ್ಷೆಯನ್ನು ಲಿಂಗಭೇದ-ಜಾತಿಭೇದ-ವರ್ಗಭೇಧವಿಲ್ಲದೆ ದಯಪಾಲಿಸುತ್ತ ಹೊರಟರು.

ಬಸವನೆಂಬ ಬಳ್ಳಿ ಹಬ್ಬಿತು. ಲಿಂಗವೆಂಬ ಗೊಂಚಲು ಎಲ್ಲಾ ಕಡೆ ಕಂಡು ಬಂದವು. ಇಂದು ನಮ್ಮ ನಾಡಿನಾದ್ಯಂತ ಲಿಂಗಾಯತ ಧರ್ಮದ ಆಚರಣೆಗಳು ಕಂಡುಬರುತ್ತಿವೆ. ನಮಗೆ ನಮ್ಮದೇ ಆದ ತತ್ವ, ಸಿದ್ಧಾಂತ ಇವೆ. ನಾವು ಅವುಗಳನ್ನು ಚಾಚು ತಪ್ಪದೇ ಪಾಲಿಸಿದ್ದೆಯಾದರೆ ನಾವು ಜೀವಂತವಾಗಿರುವುದರೊಳಗೆ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆ ಸಿಕ್ಕೇ ಸಿಗುತ್ತದೆ ಎಂದು ನುಡಿದರು.

ಲಿಂಗಾಯತ ಮನೆಗಳಲ್ಲಿ ಮಕ್ಕಳಿಗೆ ತಾಯಂದಿರು ವಿಶೇಷವಾಗಿ ಸಂಸ್ಕಾರ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ವಚನ ಪಠಣ, ಲಿಂಗಪೂಜೆ, ಹಿರಿಯರಿಗೆ ಗೌರವ ಕೊಡುವುದು ಇವೆಲ್ಲವನ್ನು ಕಲಿಸಿಕೊಡಬೇಕು. ನಾವು ಗಟ್ಟಿಯಾಗಿ ನಿಂತು ಲಿಂಗಾಯತ ನಿಜಾ ಚರಣೆಗಳನ್ನು ಪಾಲಿಸಿದಾಗ ಒಂದಲ್ಲ ಒಂದು ದಿನ ನಮ್ಮ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗುತ್ತದೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಬಸವಲಿಂಗಪ್ಪ ಬಾದರ್ಲಿ ಮಾತನಾಡುತ್ತ, ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದು ಎಷ್ಟು ಮುಖ್ಯವೋ ಸಂಸ್ಕಾರವಂತರನ್ನಾಗಿ ಮಾಡುವುದು ಅಷ್ಟೇ ಮುಖ್ಯ. ಹುಟ್ಟು ಹಬ್ಬದ ನೆಪದಲ್ಲಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಇಂತಹ ವೇದಿಕೆಯಲ್ಲಿ ಶರಣರ ಚಿಂತನ-ಮಂಥನ ನಡೆಯಬೇಕು. ಇದರ ಸತ್ಪರಿಣಾಮ ಕುಟುಂಬದ ಹಾಗೂ ಗ್ರಾಮದ ಎಲ್ಲಾ ಸದಸ್ಯರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಜನನ ಜಾಗೃತಿ ಎಂದರೆ ನಾವು ಜನಿಸಿ ಇಷ್ಟು ವರ್ಷಗಳಾದವು ಏನನ್ನು ಸಾಧಿಸಿದ್ದೇವೆ ಮುಂದೆ ಏನು ಸಾಧಿಸಬೇಕಾಗಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂದು ನುಡಿದರು.

ಅನುಭಾವಿ ಶರಣ ಪಿ. ರುದ್ರಪ್ಪ ಅವರು ಮಾತನಾಡುತ್ತಾ, ನಾವು ದೇವರನ್ನು ಹುಡುಕುವುದಕ್ಕೆ ಎಲ್ಲೆಲ್ಲೋ ಹೋಗುತ್ತೇವೆ, ಸುತ್ತುತ್ತೇವೆ. ನಮ್ಮ ಅಂತರಂಗದಲ್ಲಿ ನೆಲೆನಿಂತಿರುವ ಪರಮಾತ್ಮನನ್ನು ಮರೆತಿದ್ದೇವೆ. ಮೊದಲು ನಮ್ಮನ್ನು ನಾವು ಅರಿಯಬೇಕಾಗಿದೆ ಆಗ ಮಾತ್ರ ಶಿವನ ನೆಲೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ನುಡಿದರು.

ವೇದಿಕೆಯಲ್ಲಿ ಶರಣ ಮುದ್ದನಗೌಡ ಪಾಟೀಲ, ಶಂಕರಗೌಡ ಮಿಟ್ಟಿಮನಿ, ಸಣ್ಣಗೌಡ್ರು ಕುಟುಂಬದ ಹಿರಿಯ ಚೇತನ ಆದಮ್ಮ ಸಣ್ಣಗೌಡರ ಉಪಸ್ಥಿತರಿದ್ದರು. ಶರಣೆ ಗಂಗಮ್ಮ ನವಲಿ ಕಾರ್ಯಕ್ರಮ ನಿರೂಪಿಸಿದರೆ, ಶರಣ ವೀರಭದ್ರಪ್ಪ ಬಾವಿತಾಳ ವಚನ ಪ್ರಾರ್ಥನೆ ನೆರವೇರಿಸಿಕೊಟ್ಟರು. ಶರಣ ಬಸವರಾಜಪ್ಪ ನಿಜಾಚರಣ ಕಾರ್ಯಕ್ರಮವನ್ನು ನೆರವೇರಿಸಿದರು. ನೂರಾರು ಜನ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೊದಲಿಗೆ ಸಾಮೂಹಿಕ ಶಿವಯೋಗ ಹಾಗೂ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *