ಕೊಲ್ಹಾಪುರ (ಮಹಾರಾಷ್ಟ್ರ)
೧೨ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಸ್ಥಾಪಿಸಿದ ವಿಶ್ವದ ಪ್ರಪ್ರಥಮ ಸಂಸತ್ತು ಅನುಭವ ಮಂಟಪದ ಪ್ರಥಮ ಶೂನ್ಯ ಪೀಠಾಧೀಶರಾದ ಅಲ್ಲಮಪ್ರಭುದೇವರ ಜಯಂತಿಯನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಾತಕಣಂಗಲ್ ತಾಲೂಕಿನ ಅಲ್ಲಮಡೊಂಗರ್‌ನ ಅಳತೆ ಗ್ರಾಮದ ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಜರುಗಿತು.

ಬೆಂಗಳೂರಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಅಲ್ಲಮಪ್ರಭುದೇವರು ಹಾಗೂ ಸಿದ್ಧರಾಮೇಶ್ವರರು ಕಲ್ಯಾಣ ಕ್ರಾಂತಿಯ ನಂತರ ಬಸವಕಲ್ಯಾಣದಿಂದ ಹೊರಟು ಧರ್ಮಪ್ರಚಾರಕ್ಕಾಗಿ ನೇರವಾಗಿ ಅಳತೆ ಗ್ರಾಮದ ದೊಡ್ಡಬೆಟ್ಟದ ಮೇಲೆ ಬಂದಿರುವ ಪ್ರತೀತಿ ಇದೆ. ಉಭಯ ಶರಣರು ಇಷ್ಟಲಿಂಗ ಪೂಜೆ ಸಂದರ್ಭದಲ್ಲಿ ೯೦೦ ವರ್ಷಗಳ ಹಿಂದೆ ಹೊತ್ತಿಸಿರುವ ಜ್ಯೋತಿ ಇಂದಿಗೂ ಹಾಗೆಯೇ ಬೆಳಗುವಂತೆ ಇಲ್ಲಿಯ ಶರಣರು ನಡೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ.
ಶರಣೆ ಅಕ್ಕಮಹಾದೇವಿ ಸೇರಿದಂತೆ ಹಲವರ ಜನನ, ಮರಣ ಕುರಿತು ಉಲ್ಲೇಖವಿದೆ. ಆದರೆ ಅಲ್ಲಮಪ್ರಭುದೇವರ ಮರಣದ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ ಮಹಾರಾಷ್ಟ್ರದ ಇಲ್ಲಿಯ ಶರಣರು ತೋರುವ ಭಕ್ತಿ, ಹೊತ್ತಿಸಿರುವ ಜ್ಯೋತಿ, ಯುಗಾದಿಯಂದು ಆಚರಿಸುವ ಅಲ್ಲಮರ ಜಯಂತಿ ನೋಡಿದರೆ ಅಲ್ಲಮರು ಕೊನೆಗೆ ಇಲ್ಲಿಯೇ ಲಿಂಗೈಕ್ಯರಾಗಿರುವರೆಂಬುದು ಸಾಬೀತಾಗುತ್ತದೆ ಎಂದು ತಿಳಿಸಿದರು.

ಎರಡು ದಶಕಗಳ ಹಿಂದೆ ಪೂಜ್ಯ ಮಾತೆ ಮಹಾದೇವಿಯವರು ಅಲ್ಲಮಪ್ರಭುದೇವರ ಈ ಸ್ಥಾನ ಗುರುತಿಸಿ ಪ್ರಚಾರ, ಪ್ರಸಾರ ಮಾಡಬೇಕೆಂದು ಇಲ್ಲಿಯ ಶರಣರನ್ನು ಗಟ್ಟಿತನದಿಂದ ತಯಾರಿಸಿ, ಮುಂದೆ ಅಲ್ಲಮಪ್ರಭುದೇವರ ಜೀವನ ಸಾಧನೆ ಪ್ರಚಾರ ಮಾಡುವರೆಂಬ ಭರವಸೆಯಿಟ್ಟು ಗಣಮೇಳ ಆರಂಭ ಮಾಡಿದ್ದಾರೆ. ಅವರ ನಿಜವಾರಸುದಾರರಾದ ಸ್ವಾಭಿಮಾನಿ ಶರಣರು ನಮ್ಮ ನೇತೃತ್ವದಲ್ಲಿ ನಿರಂತರವಾಗಿ ಅಲ್ಲಮಗಿರಿಯಲ್ಲಿ ಅಲ್ಲಮಪ್ರಭುದೇವರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಅಲ್ಲಮಗಿರಿ ಎಂಬ ಈ ಅಲ್ಲಮಪ್ರಭುದೇವರ ಐಕ್ಯಕ್ಷೇತ್ರವೆಂಬ ಪವಿತ್ರ ತಾಣವು ಅಂತರಾಷ್ಟ್ರೀಯ ಕ್ಷೇತ್ರವಾಗಬೇಕು. ಮಹಾರಾಷ್ಟ್ರ ಸರ್ಕಾರ ಈ ಸ್ಥಳವನ್ನು ಐತಿಹಾಸಿಕ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಅಲ್ಲಮಗಿರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಸ್ಥಾಪನೆ ಮಾಡಬೇಕು. ಇದು ಲಿಂಗಾಯತ ಧರ್ಮ ಪ್ರಸಾರ ಕೇಂದ್ರವಾಗಬೇಕು. ಸರ್ಕಾರ ಇವೆಲ್ಲದಕ್ಕೂ ಅನುದಾನ ಮೀಸಲಿಡಬೇಕೆಂದು ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು. ಅಲ್ಲದೇ ಇಲ್ಲಿಯ ಅಭಿವೃದ್ಧಿ ಮಾಡಲು ನಾವು ಯಾವಾಗಲೂ ಕಂಕಣಬದ್ಧರಾಗಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.

ಸ್ಥಳೀಯ ಮುಖಂಡರಾದ ರಾಯಗೊಂಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಬೀದರನ ಡಾ. ಸುರೇಶ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಜಯ ಪಾಟೀಲ ಗೋಕಾಕ, ಬಸಯ್ಯ ಸ್ವಾಮಿ ಇಚಲಕರಂಜಿ, ಸಿದ್ಧರಾಮ ಕುಮಸಗಿ, ಪ್ರಭಾಕರ ಧಾಯಜೊಡೆ, ಗುಂಡಪ್ಪ ಮದ್ದೂರ ಸೇರಿದಂತೆ ಮೀರಜ್, ಸಾಂಗ್ಲಿ, ಇಚಲಕರಂಜಿ, ಕೊಲ್ಹಾಪುರ, ಖೋಜನವಾಡಿ, ಅಳತೆ, ಹಾತಕಣಂಗಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಶರಣ ಶರಣೆಯರು ಪಾಲ್ಗೊಂಡಿದ್ದರು.