ಸಾರಂಗ ಮಠ
ಹಿಂಸೆಯಿಂದ ಪಂಚಾಚಾರ್ಯರಲ್ಲಿ ಲೀನವಾದ ಸಾರಂಗ ಮಠಗಳು
ಶ್ರೀಶೈಲದ ಸಾರಂಗ ಮಠದ ಮೇಲೆ ನಡೆದ ದಾಳಿ
ನಾಥ ಜೋಗಿಗಳು, ಸಿದ್ದರು ವೀರಶೈವರಲ್ಲಿ ಲೀನವಾದರು
ರಂಭಾಪುರಿ, ಸಾರಂಗ ಮಠಗಳು ಮೂಲತಃ ನಾಥ ಪೀಠಗಳು. ಇವು 16ನೇ ಶತಮಾನದಲ್ಲಿ ನಾಥ-ಸಿದ್ದ ಗುರು ಕುಮಾರ ಚನ್ನಬಸವರ (ಕುಮಾರ ದೇವ) ಕಾಲದಲ್ಲಿ ಪಂಚಾಚಾರ್ಯರಲ್ಲಿ ಲೀನವಾಗಿರಬಹುದು.
ಬಾಳೆ ಹೊನ್ನೂರು ಪೀಠದ ಕುಮಾರ ಚನ್ನಬಸವರು ಬಸವ ಭಕ್ತರು. “ಬಸವ ಪುರಾಣದ ಪ್ರಾಚೀನ ಚರಿತ್ರೆ” ಎಂಬ ಗ್ರಂಥವನ್ನು ಅವರು ರಚಿಸಿದರು. ಅವರ ಕೃತಿಗಳಲ್ಲಿ ಅವರ ನಾಥ ಹಿನ್ನಲೆ ಕಾಣಿಸುತ್ತದೆ.
ಇವರು ನಂತರ ವೀರಶೈವಕ್ಕೆ ಮತಾಂತರವಾದ ಸೂಚನೆ ಕೆಲವು ಕೃತಿಗಳಲ್ಲಿ ಕಾಣಿಸುತ್ತದೆ. ಗುರುರಾಜ ಚಾರಿತ್ರದಲ್ಲಿ ಇವರು ಶಿವನ ಆಜ್ಞೆಯಂತೆ ಶ್ರೀಶೈಲಕ್ಕೆ ದಂಡೆತ್ತಿ ಹೋಗುತ್ತಾರೆ.
ಅಲ್ಲಿ ಸಾರಂಗ ಮಠದಲ್ಲಿದ್ದ ಜೋಗಿಗಳನ್ನು ಸಂಹರಿಸಿ ಮಹತ್ತಿನ ಸಿಂಹಾಸನ ಸ್ಥಾಪಿಸಿ, ‘ವೀರಮಾಹೇಶ್ವರ’ರನ್ನು ಮೆರೆಸುತ್ತಾರೆ. (ಮಹತ್ತು = ವೀರಾವೇಶದ ಸಂಚಾರಿ ಶೈವ ಪಡೆ)
ಗುರುಲಿಂಗಜಂಗಮ ಚಾರಿತ್ರದಲ್ಲಿ ಸಿದ್ದ ಗುರು ಪಡುವೀಡು ಸ್ವಾಮಿಯ ಮಹತ್ತಿನ ಜೊತೆ ಸೇರಿ ಸಂಚರಿಸುತ್ತಾರೆ. ಶ್ರೀಶೈಲಕ್ಕೆ ಹೋಗಿ ಜೋಗಿಗಳನ್ನು ನಾಶ ಮಾಡಿ, ಸಾರಂಗ ಮಠದವನ್ನು ವಶ ಪಡಿಸಿಕೊಳ್ಳುತ್ತಾರೆ.
ಇದು ನಾಥ ಜೋಗಿಗಳು, ನಾಥ ಸಿದ್ದರು ವೀರಶೈವರಲ್ಲಿ ಲೀನವಾಗಿದ್ದನ್ನು ಸೂಚಿಸುತ್ತದೆ. ಇದೆ ರೀತಿ ಹಲವಾರು ಮಠಗಳು, ಧಾರ್ಮಿಕ ಪರಂಪರೆಗಳು ಪಂಚಾಚಾರ್ಯರನ್ನು ಸೇರಿಕೊಂಡವು.
(‘ಚೌರಂಗಿ ಮಠ > ಸಾರಂಗ ಮಠ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 7)