ರಾಮದುರ್ಗಾ
“ದ್ವೇಷವನ್ನು ಪ್ರೀತಿಯಿಂದಲೇ ಗೆಲ್ಲಬೇಕು. ಅವರು ನಮ್ಮನ್ನ ಹೊಡ್ಯಾಕ್ ಬಡ್ಯಾಕ್ ಬಂದ್ರೂಂತ ನಾವೇನು ಅವರನ್ನ ದ್ವೇಷ ಮಾಡೋದಿಲ್ಲ, ಪ್ರೀತೀನೆ ಮಾಡ್ತೀವಿ,”
ತಾಲೂಕಿನ ಹಿರಿಯ ಪೊಲೀಸ್ ಅಧಿಕಾರಿಗಳು ನಾಗನೂರಿನ ಗುರುಬಸವ ಮಠಕ್ಕೆ ಹೋಗಿ ನಿವೇದಿತಾ, ತಂದೆ, ತಾಯಿ ಭೇಟಿ ನೀಡಿದ್ದಾರೆ.
ವಚನ ದರ್ಶನ ಪುಸ್ತಕ ವಿರುದ್ಧ ಮಾತನಾಡಿದ್ದಕ್ಕೆ 30 ಜನರ ಗುಂಪು ಗುರುಬಸವ ಮಠಕ್ಕೆ ನುಗ್ಗಿ ನಿವೇದಿತಾ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ನೀಡಿದ್ದರು ಎಂದು ಬಸವ ಮೀಡಿಯಾ ಸೆಪ್ಟೆಂಬರ್ 20ರಂದು ವರದಿ ಮಾಡಿತ್ತು.
ಅದೇ ದಿನ ಸಂಜೆ ರಾಮದುರ್ಗಾ ತಾಲೂಕಿಗೆ ಹೊಸದಾಗಿ ಬಂದಿರುವ DYSP ಚಿದಂಬರ ಮಡಿವಾಳರ್, ಸರ್ಕಲ್ ಇನ್ಸ್ಪೆಕ್ಟರ್ I R ಪಟ್ಟಣಶೆಟ್ಟಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ನಾಯಕ್ ಮಠಕ್ಕೆ ಹೋಗಿ ಕುಟುಂಬಕ್ಕೆ ಎಲ್ಲಾ ರೀತಿಯಲ್ಲೂ ರಕ್ಷಣೆ ನೀಡುತ್ತೇವೆ, ಯಾವಾಗ ಬೇಕಾದರೂ ಕರೆ ಮಾಡಿ ಎಂದು ಧೈರ್ಯ ತುಂಬಿದರು.
ಮಠಕ್ಕೆ ನುಗ್ಗಿ ಗಲಾಟೆ ಮಾಡಿ, ಜೀವ ಬೆದರಿಕೆ ಒಡ್ಡಿದವರ ಮೇಲೆ ಒಂದು ಕಂಪ್ಲೇಂಟ್ ಕೊಡಿ ಎಂದು ಮಡಿವಾಳರ್ ಸೂಚಿಸಿದರು. ಅದಕ್ಕೆ ನಿವೇದಿತಾರ ತಂದೆ ಪೂಜ್ಯ ಬಸವ ಪ್ರಕಾಶ ಸ್ವಾಮೀಜಿ, “ದ್ವೇಷವನ್ನು ಪ್ರೀತಿಯಿಂದಲೇ ಗೆಲ್ಲಬೇಕು. ಅವರು ನಮ್ಮನ್ನ ಹೊಡ್ಯಾಕ್ ಬಡ್ಯಾಕ್ ಬಂದ್ರೂಂತ ನಾವೇನು ಅವರನ್ನ ದ್ವೇಷ ಮಾಡೋದಿಲ್ಲ, ಪ್ರೀತೀನೆ ಮಾಡ್ತೀವಿ,” ಎಂದರು.
ಮಠಕ್ಕೆ ಬಂದು ಗಲಾಟೆ ಮಾಡಿದ ಹುಡುಗರ ಬಗ್ಗೆ ಮಾತನಾಡುತ್ತ ಅಧಿಕಾರಿಗಳು, “ನೀವು ಎರಡೂ ಕಡೆ ಅಧ್ಯಯನ ಮಾಡಿದ್ದೀರಾ. ಆದರೆ ಆ ಹುಡುಗರು ಕುರುಡು ನಂಬಿಕೆಯಲ್ಲಿ ಇದ್ದಾರೆ. ನೀವು ಹೇಳಿದ್ದರಿಂದ ಅವರ ನಂಬಿಕೆಗಳಿಗೆ ಧಕ್ಕೆ ಬಂದಿದೆ ಅಂತ ಈ ರೀತಿ ಮಾಡಿದ್ದಾರೆ,” ಎಂದು ನಿವೇದಿತಾ ಅವರಿಗೆ ಹೇಳಿದರು.
ಸಂಜೆ 6.30 ಗಂಟೆಗೆ ಮಠಕ್ಕೆ ಹೋದ ಅಧಿಕಾರಿಗಳು 7.45ರವರೆಗೆ ಕುಳಿತು ಮಾತನಾಡಿದರು.
ನಿವೇದಿತಾ ಕುಟುಂಬದ ಮೇಲೆ ನಡೆದ ದಾಳಿಯ ಬಗ್ಗೆ ಬಸವ ಮೀಡಿಯಾದಲ್ಲಿ ಬಂದಿದ್ದ ವರದಿಗಳು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅವರ ಸೂಚನೆಯ ಮೇರೆಗೆ ಸ್ಥಳೀಯ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿದರು ಎಂದು ತಿಳಿದು ಬಂದಿದೆ.
Fine