ನ್ಯಾಮತಿ
ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. 12ನೇ ಶತಮಾನದ ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿಯಿಂದ ಅವರನ್ನು ಗುರುತಿಸಬಹುದಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಜಿ. ಬಸವರಾಜಪ್ಪ ಹೇಳಿದರು.
ನ್ಯಾಮತಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ವತಿಯಿಂದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಲಿಂಗೈಕ್ಯ ಷಡಕ್ಷರಯ್ಯ ಮತ್ತು ಗೌರಮ್ಮ ಒಡನಾಳು ಅವರು ಸ್ಥಾಪಿಸಿದ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ ಭಕ್ತರಿಗೆ ಮಾದರಿಯಾಗಿದ್ದಾಳೆ.
ಶ್ರೀಶೈಲ ಚನ್ನಮಲ್ಲಿಕಾರ್ಜುನರನ್ನು ಪತಿ ಎಂದು ಸ್ವೀಕರಿಸಿ ಆಧ್ಯಾತ್ಮ ಸಾಧನೆ ಮಾಡುತ್ತ, ಆ ಸಾಧನೆಯನ್ನು ತಮ್ಮ ವಚನಗಳಲ್ಲಿ ತಿಳಿಸುತ್ತಾರೆ. ಚಿಕ್ಕವಯಸ್ಸಿನಲ್ಲೇ ಜನ್ಮಸ್ಥಳ, ತಂದೆ-ತಾಯಿ, ಲೌಕಿಕ ಗಂಡನನ್ನು ತ್ಯಜಿಸಿ ಅನುಭವ ಮಂಟಪ ತಲುಪಿ ಅಲ್ಲಿ ಅಲ್ಲಮ ಮತ್ತು ಇತರ ಶರಣರ ಪರೀಕ್ಷೆಗೆ ಒಳಪಟ್ಟು ಅತೀ ಚಿಕ್ಕ ವಯಸ್ಸಿನ ಮಹಾದೇವಿ, ಅಕ್ಕನ ಸ್ಥಾನವನ್ನು ಪಡೆಯುತ್ತಾರೆ.
ಅಲ್ಲಿಂದ ಶ್ರೀಶೈಲದ ಕದಳಿ ವನದವರೆಗೂ ಪಯಣಿಸಿ ತಮ್ಮ ದಿಟ್ಟತನ ತೋರಿರುವುದು ಇಂದಿನ ಮಹಿಳೆಯರಿಗೆ ಮಾದರಿ ಎಂದು ತಿಳಿಸಿದರು.

ಅಕ್ಕಮಹಾದೇವಿ ಪುತ್ಥಳಿ ಮುಂದೆ ಸಾಂಕೇತಿಕವಾಗಿ ತೊಟ್ಟಿಲು ಶಾಸ್ತ್ರ ನೆರವೇರಿಸಿ ವಚನಗಳನ್ನು ಹಾಡಲಾಯಿತು.
ನ್ಯಾಮತಿ ಕಲ್ಲು ಮಠದಲ್ಲಿ ಜರುಗಿದ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಕೇಂದ್ರದ ಸುಶ್ರೂಷಕಿ ಶರಣೆ ಮಂಜುಳಾ ಕಠಾರೆ ಗಜೇಂದ್ರಕುಮಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣ ಸಿ.ಕೆ. ಭೋಜರಾಜ್ ಮಾತನಾಡಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶರಣೆ ಅಂಬಿಕಾ ಸುಭಾಷಚಂದ್ರ ಬಿದರಗಡ್ಡೆ ಅಧ್ಯಕ್ಷತೆ ವಹಿಸಿದ್ದರು. ಶರಣೆ ಪುಷ್ಪಲತಾ ಈರಣ್ಣ ಚಿಲ್ರೋಣಿ ಗೌರವ ಉಪಸ್ಥಿತರಿದ್ದರು.
ಆರಂಭದಲ್ಲಿ ಶರಣೆ ಉಷಾ ದೇವರಾಜ್ ಪ್ರಾರ್ಥಿಸಿದರು. ಶರಣೆ ಭಾಗ್ಯ ಸ್ವಾಗತಿಸಿದರು. ಉಮಾದೇವಿ ಶರಣು ಸಮರ್ಪಿಸಿದರು. ಶರಣೆ ಸುಮಲತ ಕಾರ್ಯಕ್ರಮ ನಿರೂಪಿಸಿದರು.