“ಸಚಿವ ಎಂ.ಬಿ.ಪಾಟೀಲ ಸಿಎಂ ಆಗಲು ಪಂಚಪೀಠಗಳು ಕರುಣಿಸಬೇಕು.”
ವಿಜಯಪುರ
ಪಂಚಪೀಠದ ಗುರುಗಳು ಹಾಗೂ ವಿರಕ್ತಮಠದ ಸ್ವಾಮೀಜಿಗಳು ಒಂದಾಗಬೇಕು. ಸ್ವಾಮೀಜಿಗಳು ಒಂದಾದರೇ ನಾವೆಲ್ಲರೂ ಒಂದಾಗಿ ಬಿಡುತ್ತೇವೆ, ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶನಿವಾರ ಹೇಳಿದರು.
ನಗರದ ಸುರಭಿ ನಗರದಲ್ಲಿ ನಡೆದ ರಂಭಾಪುರಿ ಪೀಠದ ಶಾಖಾಮಠದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು, “ನಾನು ಈ ಹಿಂದೆ ಲಿಂಗಾಯತ ಧರ್ಮದ ಬಗ್ಗೆ ಹೋರಾಟ ಮಾಡಿದ್ದೇನೆ. ನಮ್ಮಲ್ಲಿ ಆಚರಣೆ ಬೇರೆ ಇರಬಹುದು. ಆದರೆ, ಉದ್ದೇಶ ಒಂದೇ ಇರುತ್ತದೆ.
ಒಬ್ಬರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ ಇನ್ನೊಬ್ಬರು ದಯವೇ ಧರ್ಮದ ಮೂಲ ಮತ್ತು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆಯನ್ನಿರಿಸಿದ್ದಾರೆ. ಹೀಗಾಗಿ ವ್ಯತ್ಯಾಸ ಏನೇ ಇದ್ದರೂ ಸಾಮಾನ್ಯ ತತ್ವದಡಿ ಪಂಚಪೀಠ ಹಾಗೂ ವಿರಕ್ತಮಠ ಎಲ್ಲವೂ ಒಂದಾಗಲಿ,” ಎಂದು ಮನವಿ ಮಾಡಿದರು.

ನಾನು ಯಾವುದೇ ರಾಜಕೀಯ ಉದ್ದೇಶದಿಂದ ರಂಭಾಪುರಿ ಪೀಠ ಶಾಖಾ ಮಠದ ಸ್ಥಾಪಿಸಲು ನೆರವಾಗಿಲ್ಲ. ನಾನು ಈ ಹಿಂದೆಯೇ ಮಾತುಕೊಟ್ಟಿದ್ದೆ. ಅದರಂತೆ ಮಾಡಿದ್ದೇನೆ. ವಿಜಯಪುರದಲ್ಲಿ ಸುಂದರವಾದ ಶಾಖಾ ಮಠ ನಿರ್ಮಾಣ ಮಾಡಲು ಸಹಕಾರ ಮಾಡುತ್ತೇನೆ,. ಈ ಐತಿಹಾಸಿಕ ಶಾಖಾ ಮಠವು ವಿಜಯಪುರ ಜಿಲ್ಲೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿಯಲಿದೆ, ಎಂದು ಹೇಳಿದರು.
ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಗುರುವಿರಕ್ತರ ಜೊತೆ ಒಂದಾಗಲು ರಂಭಾಪುರಿ ಪೀಠ ಮೊದಲ ಸ್ಥಾನದಲ್ಲಿ ಇರುತ್ತದೆ, ಎಂದು ಹೇಳಿದರು.
ಆಂತರಿಕವಾಗಿ ಸಮಸ್ಯೆ ಇದೆ ಎಂದು ಎಂ.ಬಿ. ಪಾಟೀಲ ಹೇಳಿರೋದು ಸತ್ಯ. ಗುರು ವಿರಕ್ತ ಒಂದಾಗಬೇಕು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಪಂಚಾಚಾರ್ಯರು ಹಾಗೂ ವಿರಕ್ತರನ್ನು ಒಂದಾಗಿಸುವ ಕೆಲಸ ಅವರು ಮಾಡಲಿ. ಆಚಾರ್ಯರು ಹಾಗೂ ಬಸವಾದಿ ಶರಣರು ಹೇಳಿರುವುದು ಒಂದೇ. ವೀರಶೈವ ಲಿಂಗಾಯತ ಒಂದಾಗಿ ಕೆಲಸ ಮಾಡಿದರೆ ನಮ್ಮ ಶಕ್ತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಈ ಭಾಗದಲ್ಲಿ ಮಠ ಬೇಕೆಂದು ಅಭಿಲಾಷೆ ಇತ್ತು. ಭಕ್ತರ ಅಭಿಲಾಷೆಯನ್ನು ಎಂ.ಬಿ.ಪಾಟೀಲರು ಮಾಡಿದ್ದಾರೆ. ಈ ಕಾರ್ಯಕ್ರಮ ಮಾಡಿರುವುದು ಭಕ್ತರಿಗೆ ಸಂತಸ ತಂದಿದೆ, ಎಂದರು.

ಎಂ.ಬಿ.ಪಾಟೀಲ ಸಿಎಂ
ಸಚಿವ ಎಂ.ಬಿ.ಪಾಟೀಲರಲ್ಲಿ ಸಿಎಂ ಆಗುವ ಸಾಮರ್ಥ್ಯವಿದೆ. ಅವರು ಸಿಎಂ ಆಗಲು ಪಂಚಪೀಠಗಳು ಕರುಣಿಸಬೇಕು ಎಂದು ವಿಜಯಪುರ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹಾಗೂ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚ೦ದ್ರ ಶೇಖರ ಶಿವಾಚಾರ್ಯರು ಮನವಿ ಮಾಡಿದರು.
ಪಂಚಮಸಾಲಿ ಸಮಾಜದ ಮಹಾದೇವ ಶಿವಾಚಾರ್ಯರು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಯರನಾಳದ ಸಂಗನಬಸವ ಸ್ವಾಮೀಜಿ, ಕೋಲ್ಹಾರದ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ರಾಜು ಆಲಗೂರ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಪೊಲೀಸ್ ಅಧಿಕಾರಿ ಚೌಕಿಮಠ, ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಬಿಎಲ್‌ಡಿಇ ಸಂಸ್ಥೆ ಕುಲಪತಿ ಬಸನಗೌಡ ಎಂ. ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.

ಬಾಳೆ ಹೊಣ್ಣೂರಿನ ರಂಭಾಪುರಿ ಪೀಠ ಸ್ಥಾಪನೆ ಕುರುಬರ ರೇವಣ ಸಿದ್ದರು ಸ್ಥಾಪಿಸಿದರು ಅನ್ನುತ್ತಾರೆ.
ಅದನ್ನು ಅದರ ಶಾಖೆಗಳನ್ನು ಹಾಲುಮತದವರಿಗೆ ಕೊಡಬೇಕಾಗಿ ಬಂದರೆ, ವೀರಶೈವರ ಸ್ಥಾನ ಎಲ್ಲಿದೆ?
ಎಂ ಬಿ ಪಾಟೀಲರು ತಪ್ಪು ಮಾಡಿದರು. ಅವರು ಬಸವಣ್ಣನವರನ್ನು ಧರ್ಮಗುರು ಅಂತ ಒಪ್ಪಲ್ಲ. ಗು-ವಿ ಒಂದಾಗಲ್ಲ.
ಪಂಚಪೀಠಗಳ ಸ್ವಾಮಿಗಳು ಬಸವಣ್ಣನವರು ಲಿಂಗಾಯತ ಧರ್ಮ ಸಂಸ್ಥಾಪಕರು ಎಂದು ಒಪ್ಪಿಕೊಂಡರೆ ಒಂದು ಆದಂತೆಯೆ, ಇದನ್ನು ಅರ್ಥ ಮಾಡಿಕೊಳ್ಳಬೇಕು
2017 ರಿಂದ ಇಲ್ಲಿಯವರೆಗೂ ಪಂಪೀಗಳು ಲಿಂಗಾಯತರ ವಿರುದ್ಧ ನಡೆದುಕೊಂಡೇ ಬಂದಿದ್ದಾರೆ ಬರುತ್ತಿದ್ದಾರೆ…ನಮ್ಮ ಗುರುಗಳು ಕಲ್ಲಿನಿಂದ ಎದ್ದು ನಿಂತು ಆಕಾಶ ಮಾರ್ಗವಾಗಿ ಎಲ್ಲೆಡೆ ಸಂಚರಿಸಿದ್ದಾರೆ ಎಂಬ ರೈಲು ರೀಲು ರೀಲಾಗಿ ಅಂದಿನಿಂದ ಇಂದಿನವರೆಗೂ ಓಡುತ್ತಲೇ ಇದೆ! ಬಸವಣ್ಣನನ್ನು ಗುರು ಎಂದು ಒಪ್ಪದ ಇವರಿಗೆ ವಿರಕ್ತರಲ್ಲಿ ಒಂದಾಗಿ ಬೆರೆಯುವ ರಕ್ತದ ಗುಣವೇ ಇಲ್ಲ. ತಾವು ಪಾತಾಳಕ್ಕೆ ಳಿದಿರುವಾಗ ಲಿಂಗಾಯತರ ಜುಟ್ಟು ಹಿಡಿದುಕೊಂಡು ಬದುಕುಳಿಯುವ ಹುನ್ನಾರ ಇವರದು ಎಂದು ಲಿಂಗಾಯತರಿಗೆ ಗೊತ್ತಿದೆ. ಹಿಡಿದ ದೊಣ್ಣೆ ಕಮಂಡಲಗಳನ್ನೆಲ್ಲ ಬಿಸಾಕಿ ನಿರ್ಮಲ ಭಾವದಿಂದ ಬಸವಣ್ಣನೇ ನಮ್ಮ ಧರ್ಮಗುರು..ಲಿಂಗಾಯತ ಕಾರ್ಯಕ ಪಂಗಡಗಳಲ್ಲಿ ತಟ್ಟೆ ಹಿಡಿದು ಗಂಟೆ ಬಾರಿಸುವ ನಾವು ಬಸವಣ್ಣನನ್ನು ಬೆಳಗಿಸುವವರು ಎಂದು ಕೇವಲ ನಾಲಿಗೆಯಿಂದಲ್ಲ…. ಹ್ರುದಯಾಂತರಾಳದಿಂದ ನುಡಿದುವಿರಕ್ತರ ಪಾದ ಹಿಡಿದು ಬಸವ ಕೃಪೆಗಾಗಿ ಭಿನ್ನವಿಸಲಿ! ಅಣ್ಣ ಒಪ್ಪುತ್ತಾನೋ ಬಿಡುತ್ತಾನೋ ಆನಂತರದ ಮಾತು ಅಷ್ಟೇ!