ಚನ್ನಗಿರಿ
ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಬಸವ ಬಳಗ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ಧರ್ಮಗುರು ಬಸವಣ್ಣನವರ ಪುತ್ಥಳಿ ಸೋಮವಾರ ಲೋಕಾರ್ಪಣೆಗೊಂಡಿತು.
ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಪಾಂಡೋಮಟ್ಟಿ ವಿರಕ್ತ ಮಠದ ಪೂಜ್ಯ ಗುರುಬಸವ ಸ್ವಾಮೀಜಿ ಮಾತನಾಡುತ್ತ, ಬಸವ ಬಳಗ ಹಾಗೂ ಗ್ರಾಮಸ್ಥರ ಸಹಕಾರದಿಂದ ಅಮೃತಶಿಲೆಯ 5.5 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ಪಾಂಡೋಮಟ್ಟಿಯ ಬಸ್ ನಿಲ್ದಾಣದ ಬಳಿ ಅನಾವರಣಗೊಳಿಸಲಾಗಿದೆ. ಹೆದ್ದಾರಿಯಲ್ಲಿ ಹೋಗುವವರೆಲ್ಲ ಪುತ್ಥಳಿ ನೋಡಲಿ, ನೋಡಿ ಪ್ರಭಾವಿತರಾಗಲಿ ಎಂಬುದು ನಮ್ಮ ಉದ್ದೇಶ. ಬಸವಣ್ಣ ನಮಗೆಲ್ಲ ದಾರಿದೀಪ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಬದುಕು ರೂಪಿಸಿಕೊಳ್ಳಬೇಕಾಗಿದೆ ಎಂದರು.

ಮೌಢ್ಯ, ಕಂದಾಚಾರ ಧಿಕ್ಕರಿಸಿ, ಪ್ರಶ್ನೆ ಮಾಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದು 12ನೇ ಶತಮಾನದಲ್ಲಿ. ಜಲ, ಭೂಮಿ, ಬೆಂಕಿಗೆ ಇಲ್ಲದ ಭೇದ ಜನರಲ್ಲಿ ಏಕೆ ಬೇಕು? ಎಂದು ಕಾಯಕ, ದಾಸೋಹ ತತ್ವ, ಮಹಿಳಾ ಸ್ವಾತಂತ್ರ್ಯ ಜಾರಿಗೆ ತಂದವರು ಬಸವಣ್ಣನವರು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ಪುತ್ಥಳಿ ಸ್ಥಾಪಿಸಿ ಪುಷ್ಪ ಹಾಕಿ ಪ್ರಚಾರ ಪಡೆದರೆ ಸಾಲದು. ಬಸವಣ್ಣನವರ ಚಿಂತನೆ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗುವುದು ಎಂದು ಶಾಸಕ ಬಸವರಾಜು ಶಿವಗಂಗಾ ಹೇಳಿದರು.
ರಾಜ್ಯದಲ್ಲಿ ಹೆಚ್ಚು ಇರುವ ಲಿಂಗಾಯತ-ವೀರಶೈವರು ಜನಗಣತಿಯಲ್ಲಿ ಒಂದೇ ರೀತಿಯಾಗಿ ಬರೆಸಬೇಕು. ಮಠಾಧೀಶರು ಒಂದಾಗಿ ಒಂದೇ ಹೆಸರು ಬರೆಸಲು ಸೂಚಿಸಬೇಕೆಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನವಿ ಮಾಡಿದರು.

ಆರಂಭದಲ್ಲಿ ಬಸವೇಶ್ವರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.
ಸಮಾರಂಭದಲ್ಲಿ ಮಾಜಿ ಶಾಸಕ ಮಹಿಮಾ ಪಟೇಲ್, ತುಮಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ, ಆರ್. ಎಂ. ರವಿ, ಬಸವ ಬಳಗದ ಅಧ್ಯಕ್ಷ ಬಿ.ಸಿ. ಚಂದಪ್ಪ, ಗ್ರಾ.ಪಂ. ಅಧ್ಯಕ್ಷೆ ಬಿ. ಆರ್. ಚಂದ್ರಮ್ಮ ಮತ್ತಿತರರು ಇದ್ದರು. ಪಾಂಡೋಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶರಣ, ಶರಣೆಯರು, ಶ್ರೀ ಚನ್ನಬಸವ ಮಹಾಸ್ವಾಮಿ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.