ಚಿಕ್ಕಮಗಳೂರು/ಪಾಂಡೋಮಟ್ಟಿ
ಬಸವಕೇಂದ್ರದ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹಾಗೂ ಪಾಂಡೋಮಟ್ಟಿಯ ಪೂಜ್ಯ ಡಾ. ಗುರುಬಸವ ಮಹಾ ಸ್ವಾಮಿಗಳು ಪ್ರತ್ಯೇಕ ಹೇಳಿಕೆ ನೀಡಿ ಕನ್ನೇರಿ ಶ್ರೀಗಳನ್ನು ಖಂಡಿಸಿದ್ದಾರೆ.
ತಮ್ಮೊಳಗಿನ ವಿಷ ಕಾರಿಕೊಂಡಿದ್ದಾರೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ
ಬಸವ ಸಂಸ್ಕೃತಿ ಅಭಿಯಾನ ಬಸವ ಭಕ್ತರ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಇದು ನಾಡಿನ ಬಹುತೇಕರಿಗೆ ಸಂತಸ ಉಂಟುಮಾಡಿದ್ದರೂ, ಕನ್ನೇರಿಯ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳವರಿಗೆ ಏಕೋ ಏನೋ ಅತೀವ ಬಾಧೆಯುಂಟು ಮಾಡಿದೆ.
ನಮಗಂತೂ ಬಸವ ಸಂಸ್ಕೃತಿ ಅಭಿಯಾನದ ಕುರಿತು ಅವರು ಆಡಿರುವ ಮಾತುಗಳನ್ನು ಕೇಳಿ, ವೀಡಿಯೋ ಮೂಲಕ ನೋಡಿ ಸಖೇದಾಶ್ಚರ್ಯ ಉಂಟಾಯಿತು. ಮಠಾಧಿಪತಿಗಳೆಂದರೆ ಸುಸಂಸ್ಕೃತ ನಡೆ ನುಡಿಯವರೆಂದೇ ಭಾವಿಸುವ, ಭಕ್ತಿ ಗೌರವಗಳನ್ನು ಅರ್ಪಿಸುವ ಜನಸಾಮಾನ್ಯರು ಕೂಡಾ ಬಳಸಲು ಹಿಂದೆಮುಂದೆ ಯೋಚಿಸುವಂತಹ ಅವಾಚ್ಯ ಶಬ್ದಗಳನ್ನು ಸ್ವಾಮಿಗಳಾಗಿರುವವರು ಬಳಸಿರುವುದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ! ಅವರು ತಮ್ಮೊಳಗಿನ ವಿಷ ಕಾರಿಕೊಂಡಿದ್ದಾರೆ.
ಇದು ಬಸವ ಸಂಸ್ಕೃತಿ ಅಭಿಯಾನವು ಅವರಲ್ಲಿ ಉಂಟುಮಾಡಿರುವ ಹತಾಶೆ ಯಾವ ಮಟ್ಟದ್ದೆಂಬುದನ್ನು ತೋರಿಸಿಕೊಡುತ್ತಿದೆ. ಹತಾಶೆಯು ಮತಿ ವಿಕಲತೆಯ ಮಟ್ಟಕ್ಕೆ ಏರಿರುವುದು ಕಂಡು ನಮಗಂತೂ ಅತೀವ ನೋವುಂಟಾಗಿದೆ.
ಇನ್ನು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳವರಿಗೆ, ಅಭಿಯಾನದ ಯಾವುದೇ ವಿಚಾರಗಳ ಕುರಿತಾಗಿ ಅನುಮಾನ, ಅಸಮಧಾನಗಳಿದ್ದರೆ ಅವುಗಳನ್ನು ಸಭ್ಯರೀತಿಯಲ್ಲಿ ಕೇಳುವ ಅಥವಾ ಅವುಗಳ ಬಗೆಗೆ ದನಿಯೆತ್ತುವ ಅವಕಾಶ ಬೇಕಾದಷ್ಟಿತ್ತು. ಅದರ ಬದಲು ಅಸಭ್ಯ ಪದಬಳಸಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲವೆಂದು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ.
ಬಸವ ಸಂಸ್ಕೃತಿಯವರು ಎಂದೆಂದಿಗೂ ಸಂವಾದದಲ್ಲಿ ನಂಬಿಕೆಯಿಟ್ಟವರು. ಪರ ವಿರೋಧ ವಿಚಾರಗಳನ್ನು ಸೌಜನ್ಯತೆ ಮತ್ತು ಸಭ್ಯತೆಯ ಎಲ್ಲೆ ಮೀರದೆ ಸಂವಾದಕ್ಕೆ ಒಳಪಡಿಸಬಹುದೆಂದು ನಂಬಿದವರು.
ಉಪನಿಷತ್ತುಗಳು ಪರಸ್ಪರ ಸಂವಾದದಿಂದ ಸತ್ಯದರ್ಶನ ಮಾಡಬಹುದೆಂದು ತೋರಿಸಿಕೊಟ್ಟಿವೆ. ಅನುಭವ ಮಂಟಪದ ಆತ್ಯಂತಿಕ ಮೌಲ್ಯವೇ ಸಂವಾದ. ಬ್ರಾಹ್ಮಣ ಮೊದಲಾಗಿ ಅಂತ್ಯಜ ಕಡೆಯಾಗಿ ಎಲ್ಲರಿಗೂ ಸಮೂಹದ ಜೊತೆಗೆ ಮುಕ್ತ ಸಂವಾದಕ್ಕೆ ಅವಕಾಶ ಮಾಡಿದ್ದು ಅನುಭವ ಮಂಟಪ.
ಇದನ್ನು ಅರಿತು ಕನ್ನೇರಿ ಮಠದ ಶ್ರೀಗಳವರು ಬಸವ ಸಂಸ್ಕೃತಿ ಅಭಿಯಾನದ ಶ್ರೀಗಳವರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿ, ಸಂವಾದದಲ್ಲಿ ನಂಬಿಕೆಯಿಟ್ಟು ಮುಂದೆ ನಡೆಯುವರೆಂದು ಆಶಿಸುತ್ತೇವೆ.
ಹೊಲಸು ನಾಲಿಗೆಯ ವ್ಯಕ್ತಿ – ಡಾ. ಗುರುಬಸವ ಮಹಾ ಸ್ವಾಮಿಗಳು
ಭಕ್ತರ ಕಂಡಡೆ ಬೋಳರಪ್ಪಿರಯ್ಯಾ
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ
ಅವರವರ ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ ತೋರದಿರಯ್ಯಾ. ಕೂಡಲಸಂಗಯ್ಯನ ಪೂಜಿಸಿ
ಅನ್ಯದೈವಂಗಳಿಗೆರಗಿ ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ.
-ಬಸವಣ್ಣ
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಬಸವಣ್ಣನವರ ವಿಚಾರದ ಬಗ್ಗೆ, ಲಿಂಗಾಯತ ಮಠಾಧಿಪತಿಗಳ ಬಗ್ಗೆ, ಮತ್ತು ಮೊನ್ನೆ ನಡೆದ ‘ಬಸವತತ್ವ ಅಭಿಯಾನ’ದ ಬಗ್ಗೆ ಬಹಿರಂಗ ಸಮಾರಂಭದಲ್ಲಿ ಹಗುರವಾಗಿ ಮಾತನಾಡಿ, ಬಾಯಿಗೆ ಬಂದಂತೆ ನಿಂದಿಸಿರುವುದು ಸಮಸ್ತ ಬಸವನುಯಾಯಿಗಳನ್ನು ಕೆರಳಿಸಿದಂತಾಗಿದೆ.
ಇವರು ಇಂತಹ ಹೊಲಸು ನಾಲಿಗೆಯಿಂದ ಸಮಾಜದ ಕಣ್ಣಿಂದ ಕಳಂಕಿತಾರಾಗುತ್ತಿರುವುದು ದುರಂತ.
ಇಂತಹ ಮಾತುಗಳು ಇವರ ಬಾಯಿಂದ ಬಂದಿರುವುದು ಇದೇ ಮೊದಲೇನಲ್ಲಾ. ಪಬ್ಲಿಸಿಟಿಗೋಸ್ಕರ ಮನ ಬಂದಂತೆ ಮಾತಾನಾಡುವುದು ಈ ವ್ಯಕ್ತಿಯ ಕೆಟ್ಟ ಅಭ್ಯಾಸ. ಈ ವ್ಯಕ್ತಿ ಸಮಸ್ತ ಲಿಂಗಾಯತ ಮಠಾಧಿಪತಿಗಳ ಕ್ಷಮೆ ಕೇಳದಿದ್ದರೆ ಮುಂದಿನ ಪರಿಸ್ಥಿತಿ ಉಗ್ರವಾಗಿರುತ್ತದೆ.