ಕಲ್ಯಾಣ ಕ್ರಾಂತಿ ಮುಗಿದಿಲ್ಲ, ಅದು ನಿರಂತರ: ಪರುಷ ಕಟ್ಟೆಯ ಚನ್ನಬಸವಣ್ಣ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಕಲ್ಯಾಣ ಕ್ರಾಂತಿ ಮುಗಿದಿಲ್ಲ. ಅದು ನಿರಂತರ ಎಂದು ಪರುಷ ಕಟ್ಟೆಯ ಚನ್ನಬಸವಣ್ಣ ನುಡಿದರು.

ನಗರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಗುರುವಾರ ನಡೆದ ಕಲ್ಯಾಣ ಕ್ರಾಂತಿ ಚಿಂತನಗೋಷ್ಠಿಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಕಟ್ಟ ಕಡೆಯ ವ್ಯಕ್ತಿಯೂ ತಲೆ ಎತ್ತಿ ಬದುಕುವಂತಾಗುವವರೆಗೂ ಕಲ್ಯಾಣ ಕ್ರಾಂತಿ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು.

ಕಲ್ಯಾಣ ಕ್ರಾಂತಿ ಸ್ವಾರ್ಥದ ಕ್ರಾಂತಿಯಲ್ಲ. ನಿಸ್ವಾರ್ಥದ ಕ್ರಾಂತಿ. ಸಕಲ ಜೀವರಾಶಿಗಳು ನೆಮ್ಮದಿಯಿಂದ ಬದುಕುವಂತಾಗಬೇಕೆಂಬುದೇ ಅದರ ಉದ್ದೇಶ ಎಂದು ತಿಳಿಸಿದರು.

ವಿಶ್ವದಲ್ಲಿ ಮಂಗಲಕರ ಪರಿವರ್ತನೆಗಾಗಿ ಕಲ್ಯಾಣ ಕ್ರಾಂತಿ ನಡೆಯಿತು. ಮರಣ ಬಂದರೂ ಸತ್ಯದ ದಾರಿ ಬಿಡಲಾರೆನೆಂಬುದು ಅದರ ತಿರುಳು ಎಂದು ಹೇಳಿದರು.

ಕೃತಯುಗದಲ್ಲಿ ಇಂದ್ರಾದಿ ಪದವಿಗಾಗಿ ದೇವ-ದಾನವರ ಯುದ್ಧಗಳಾದವು. ತ್ರೇತಾಯುಗದಲ್ಲಿ ಸೀತೆಗಾಗಿ ರಾಮ-ರಾವಣರ ಯುದ್ಧ, ದ್ವಾಪರಯುಗದಲ್ಲಿ ರಾಜ್ಯಕ್ಕಾಗಿ ಕೌರವ-ಪಾಂಡವರ ಯುದ್ಧ, ಕಲಿಯುಗದಲ್ಲಿ ಅಧಿಕಾರ, ಅಂತಸ್ತು, ಸಂಪತ್ತು, ಭೂಮಿಗಾಗಿ ಅನೇಕ ಯುದ್ಧಗಳು ನಡೆದವು ಎಂದು ತಿಳಿಸಿದರು.

ಇಡೀ ಪ್ರಪಂಚದಲ್ಲಿ ಮಾನವೀಯತೆಗಾಗಿ ನಡೆದ ಕ್ರಾಂತಿ ಕಲ್ಯಾಣ ಕ್ರಾಂತಿ ಮಾತ್ರ. ಅದರ ನೇತಾರ ಬಸವಣ್ಣನವರು. ಶರಣರು ಯಾವ ಪದವಿಯನ್ನೂ ಬಯಸಲಿಲ್ಲ. ಹೆಣ್ಣು, ಹೊನ್ನು, ಮಣ್ಣಿಗೆ ಆಸೆ ಪಡಲಿಲ್ಲ. ಸತ್ಯ ಸ್ಥಾಪನೆಗೆ ಪ್ರಾಣ ನೀಡಲು ಹಿಂಜರಿಯಲಿಲ್ಲ ಎಂದು ಹೇಳಿದರು.

ಅಕ್ಕ ಅನ್ನಪೂರ್ಣ ತಾಯಿ ಅವರು ಆ ಕಲ್ಯಾಣ ಕ್ರಾಂತಿಯನ್ನೇ ಮುಂದುವರಿಸಿ, ವಚನ ವಿಜಯೋತ್ಸವದ ಮೂಲಕ ಜಾಗೃತಿ ಮೂಡಿಸಿದರು ಎಂದರು.

ನೀಲಮ್ಮನ ಬಳಗದ ವಿಜಯಲಕ್ಷ್ಮಿ ಟೇಕೂರೆ ಮತ್ತು ಶಿವಲೀಲಾ ಹೊಕ್ರಾಣೆ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿವರ ಕಾರ್ಯಗಳನ್ನು ನೆನೆದರು.

ನೀಲಮ್ಮನ ಬಳಗದ ಸಿದ್ದಮ್ಮ ಮಠಪತಿ ಕಲ್ಯಾಣ ಕ್ರಾಂತಿ ಗೀತೆ ಹಾಡುವ ಮೂಲಕ ಚಿಂತನ ಗೋಷ್ಠಿಗೆ ಚಾಲನೆ ನೀಡಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಆರ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಚಾರ್ಟೆಡ್ ಅಕೌಂಟೆಂಟ್ ಉಮೇಶ ಮೂಲಿಮನಿ, ಕೆ.ಎಂ.ಎಫ್. ನಿವೃತ್ತ ಅಧಿಕಾರಿ ಡಾ. ಮಲ್ಲಿಕಾರ್ಜುನ ಬುಕ್ಕಾ, ವಿಜಯಲಕ್ಷ್ಮಿ ಗೋರ್ಟೆಕರ್ ಇದ್ದರು.

ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ನಡೆಸಿಕೊಟ್ಟರು. ಮಧುಲತಾ ಖಪಲೆ ವಚನ ಪಠಣ ಮಾಡಿದರು. ಜ್ಯೋತಿ ಪಾಟೀಲ, ಕದಳಿಶ್ರೀ ವಚನ ಗಾಯನ ಮಾಡಿದರು.

ಶ್ರೀದೇವಿ ಮಲ್ಲಿಕಾರ್ಜುನ ಔರಾದೆ ಭಕ್ತಿ ದಾಸೋಹಗೈದರು. ಬಸವ ಚಿಕಲಿಂಗೆ ನಿರೂಪಿಸಿದರು. ಸಂಧ್ಯಾರಾಣಿ ಮುತ್ತಂಗೆ ಸ್ವಾಗತಿಸಿದರು.

Share This Article
1 Comment

Leave a Reply

Your email address will not be published. Required fields are marked *