ಚಿಂಚೋಳಿ:
ತಾಲೂಕಿನ ಪೋಲಕಪಳ್ಳಿ ಗ್ರಾಮದ ಶ್ರೀ ಶಿವಶಂಕರೇಶ್ವರ ಮಠದಲ್ಲಿ ಬಸವ ಧರ್ಮ ಸಭೆ ಹಾಗೂ ಬಸವ ತತ್ವ ಸಂಸ್ಕಾರ ಶಿಬಿರದ ಸಮಾರೋಪ ಶನಿವಾರ ಜರುಗಿತು.
ಆಶೀರ್ವಚನ ನೀಡಿದ ರುದನೂರ ತೋಂಟದ ಸಿದ್ದೇಶ್ವರ ಮಠದ ಪೂಜ್ಯ ಮಲ್ಲಿಕಾರ್ಜುನ ಸ್ವಾಮೀಜಿ, “ಭಕ್ತರು ಗಟ್ಟಿಯಾದರೆ ಮಠಾಧೀಶರು ತತ್ವಬದ್ಧರಾಗುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಭಕ್ತರು ಕಂದಾಚಾರ ಮತ್ತು ಮೌಢ್ಯ ಬಿತ್ತುವ ಕಾವಿಧಾರಿಗಳ ಹಿಂದೆ ಸಾಗುತ್ತಿದ್ದಾರೆ. ಲಿಂಗಾಯತ ಸಮಾಜ ತನ್ನ ಪರಂಪರೆಯನ್ನು ಬಿಟ್ಟು ಅನ್ಯ ಪರಂಪರೆಗಳ ಪ್ರಭಾವಕ್ಕೆ ಒಳಗಾಗಿದೆ. ಪ್ರಜ್ಞಾವಂತ ಭಕ್ತರು ಹಾಗೂ ಮಠಾಧೀಶರು ಒಗ್ಗೂಡಿ ಸಮಾಜವನ್ನು ಶರಣರ ಪಥದಲ್ಲಿ ಮುನ್ನಡೆಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ ದುಬಲಗುಂಡಿ ಅವರು, ಲಿಂಗಾಯತ ಧರ್ಮದ ಮಠಾಧೀಶರ ಆಚರಣೆಗಳು ಮತ್ತು ಹೊಣೆಗಾರಿಕೆ ಕುರಿತು ವಿವರಿಸಿದರು.
ಲಿಂಗಾಯತ ಧರ್ಮವು ಗುಡಿ-ಗುಂಡಾರಗಳ ಧರ್ಮವಲ್ಲ; “ದೇಹವೇ ದೇಗುಲ” ಎಂಬ ತತ್ವದ ಮೇಲೆ ನಿಂತಿರುವ ಧರ್ಮವಾಗಿದೆ ಎಂದು ಹೇಳಿದರು.
ಬಸವಾದಿ ಶರಣರು ಯಾವುದೇ ಮಠ-ಪೀಠಗಳ ಸ್ಥಾಪಕರಲ್ಲ. ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಪ್ರಜಾತಂತ್ರದ ಮೂಲ ತತ್ವಗಳನ್ನು ಆಚರಣೆಗೆ ತಂದ ಮಹನೀಯರು.

ಅಲ್ಲಮಪ್ರಭುದೇವರ ನಂತರ ಶೂನ್ಯಪೀಠವು ಸಂಚಾರಿ ಪೀಠವಾಗಿ ಮುಂದುವರಿಯಿತು. ನಂತರ ವಿಜಯನಗರ ಸಾಮ್ರಾಜ್ಯದ ಅರಸ ಪ್ರೌಢ ದೇವರಾಯರ ಕಾಲದಲ್ಲಿ ನೂರೊಂದು ವಿರಕ್ತರು ಶರಣ ಧರ್ಮವನ್ನು ಸಂಘಟಿಸಿದರು.
ಎಡೆಯೂರು ಸಿದ್ಧಲಿಂಗೇಶ್ವರರು 770 ವಿರಕ್ತರ ಮೂಲಕ ದಕ್ಷಿಣ ಭಾರತದೆಲ್ಲೆಡೆ ನೂರಾರು ಮಠಗಳನ್ನು ಸ್ಥಾಪಿಸಿ ಧರ್ಮ ಪ್ರಸಾರ ಮಾಡಿದರು. ಬಳಿಕ ನಾಲ್ಕು ಸಮಯಗಳ ಮಠಗಳಾಗಿ ವಿಸ್ತರಗೊಂಡು ಸಾವಿರಾರು ಮಠಗಳು ರೂಪುಗೊಂಡವು ಎಂದು ತಿಳಿಸಿದರು.
ಕೆಳದಿ ಅರಸರು, ಹಂಡೆ ಅರಸರು, ಕೊಡಗಿನ ಅರಸರು, ಚಿತ್ರದುರ್ಗ ನಾಯಕರು ಹಾಗೂ ಸುರಪುರ ನಾಯಕರು ಸಹ ಸಾವಿರಾರು ಲಿಂಗಾಯತ ಮಠಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದರು. ಈ ಮಠಗಳೆಲ್ಲವೂ ಶೂನ್ಯಪೀಠದ ಪರಂಪರೆಯ ವಾರಸುದಾರರಾಗಿದ್ದು, ಅನುಭವ ಮಂಟಪದ ಕಾರ್ಯವನ್ನು ಮುಂದುವರಿಸಬೇಕಾಗಿದೆ.
ಬಸವಣ್ಣನವರನ್ನು ಧರ್ಮಗುರುವಾಗಿ ಒಪ್ಪಿಕೊಂಡು ವಚನ ಸಾಹಿತ್ಯದ ಅನುಸರಣೆಯೊಂದಿಗೆ ಶಿವಯೋಗ, ಶಿವಾನುಭವ, ಕಾಯಕ ಮತ್ತು ದಾಸೋಹ ತತ್ವಗಳನ್ನು ಜನರಲ್ಲಿ ಬಿತ್ತುವ ಮೂಲಕ ಲಿಂಗಾಯತ ಧರ್ಮವನ್ನು ಬಲಪಡಿಸುವ ಹೊಣೆಗಾರಿಕೆಯನ್ನು ಮಠಗಳು ನಿರ್ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವ ತತ್ವ ಸಂಸ್ಕಾರ ಶಿಬಿರದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಜಗದೀಶ್ ಮರಪಳ್ಳಿ ಅವರನ್ನು ಸತ್ಕರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಜಾಪಟ್ಟಿ, ಸೌಭಾಗ್ಯ ಮಠಪತಿ, ನೀಲಾಂಬಿಕ ಟ್ರಸ್ಟ್ ಅಧ್ಯಕ್ಷೆ ಶಕುಂತಲಾ ಹುಲಿ ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭೆ ಚಿಂಚೋಳಿ ತಾಲೂಕು ಅಧ್ಯಕ್ಷ ನಂದಿಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಗುನೂರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ ವಂದಿಸಿದರು.
