ಜಗಳೂರು
ಪೌಷ್ಟಿಕ ಆಹಾರವಾದ ಹಾಲು ಮತ್ತು ಸಿಹಿ ಉಂಡೆಗಳನ್ನು ನಾಗಪ್ಪ ದೇವನ ಹೆಸರಿನಲ್ಲಿ ಅಪವ್ಯಯ ಮಾಡುವುದನ್ನು ಬಿಡಬೇಕು ಎಂದು ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ಅಭಿಪ್ರಾಯಪಟ್ಟರು.
ಅವರು ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಬಸವ ಕೇಂದ್ರದ ಸಹಯೋಗದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಡೆದ ಬಸವ ಪಂಚಮಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಹಾವು ಒಂದು ಸರಿಸೃಪ, ಅದು ಮೊಟ್ಟೆಯಿಂದ ಹೊರಬರುವ ಜೀವಿ. ಮೊಟ್ಟೆಯಿಂದ ಹೊರಬರುವ ಯಾವ ಪ್ರಾಣಿಗಳೂ ಸಹ ಹಾಲನ್ನು ಕುಡಿಯುವುದಿಲ್ಲ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾನಪದ ಕಲಾತಂಡದ ತಾಲೂಕು ಅಧ್ಯಕ್ಷರಾದ ಶರಣ ಪರಮೇಶ್ವರಪ್ಪ ಬಿಳಿಚೋಡು, ಕಲ್ಲಿನ ವಿಗ್ರಹಗಳಿಗೆ ಹಾಲು ಹಾಕಿ ಅಲ್ಲಿ ಇಟ್ಟಿರುವ ಆಹಾರ ಪದಾರ್ಥಗಳು ಕಲುಷಿತ ಆಗುವುದನ್ನು ನೋಡಿ ಮನಸ್ಸಿಗೆ ಬಹಳ ಬೇಸರವಾಯಿತು. ಈ ವಿಚಾರ ಕುರಿತು ಮಕ್ಕಳಲ್ಲಿ ಜಾಗೃತಿ ಬಿತ್ತಿದರೆ ಒಳ್ಳೆಯದು ಎಂದು ತಿಳಿದು ಈ ಶಾಲೆಯಲ್ಲಿ ಆಯೋಜನೆ ಮಾಡಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಕಿ ರೂಪ ಅವರು, ಮೂಢ ನಂಬಿಕೆಗಳಿಂದಾಗಿ ಪೌಷ್ಟಿಕ ಆಹಾರ ಅಪವ್ಯಯ ಆಗುತ್ತದೆ. ಮಕ್ಕಳಿಗೆ ತಿಳಿಸಿದರೆ ಬದಲಾವಣೆ ಸಾಧ್ಯ ಹಾಗಾಗಿ ಇಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ ಅವರು, ಹಬ್ಬಗಳು ಮನುಷ್ಯನಿಗೆ ಉತ್ಸಾಹ ತುಂಬಬೇಕು, ಮೂಢನಂಬಿಕೆ ಬಿತ್ತಬಾರದು.
ಹಬ್ಬಗಳ ಸಂದರ್ಭದಲ್ಲಿ ಜಾನಪದ ಕ್ರೀಡೆಗಳು ನಮಗೆ ಉಲ್ಲಾಸ ಉಂಟುಮಾಡಿದರೆ, ಮೂಢನಂಬಿಕೆಯ ಆಚರಣೆಗಳು ನಮ್ಮನ್ನು ಅಜ್ಞಾನಕ್ಕೆ ಕೊಂಡೊಯ್ಯುತ್ತವೆ ಎಂದರು.
ಸಮಾರಂಭದಲ್ಲಿ ಬಸವ ಕೇಂದ್ರದ ಅಧ್ಯಕ್ಷರಾದ ಶರಣ ಷಣ್ಮುಖಪ್ಪ ಸೇರಿದಂತೆ ಬಸವ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.
ಮಕ್ಕಳಿಗೆ ವಚನ ಗೀತೆಯನ್ನು ಹೇಳಿಕೊಟ್ಟ ಮಾನವ ಬಂಧುತ್ವ ವೇದಿಕೆಯ ಶರಣ ಹನುಮಂತಪ್ಪ ಕರೂರು ಅವರು, ವೇದಿಕೆಯ ಕಾರ್ಯಕ್ರಮ ವಿವರಿಸಿದರು.
ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದ ಶಿಕ್ಷಕರಾದ ಶರಣ ನಾಗೇಂದ್ರಪ್ಪ ಅವರು ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು.
ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲೆಯ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.