ಬಸವಣ್ಣನವರ ಕೆಲಸವನ್ನು ಫುಲೆ ದಂಪತಿ, ಅಂಬೇಡ್ಕರ್ ಮುಂದುವರೆಸಿದರು: ಭಾಲ್ಕಿ ಶ್ರೀ

ಪುಣೆ

ಬಸವಣ್ಣನವರು ೧೨ನೇ ಶತಮಾನದಲ್ಲಿ ಮಾಡಿರುವ ಕ್ರಾಂತಿ ಅದ್ಭುತವಾಗಿತ್ತು. ಬಸವಣ್ಣನವರು ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನವರ ಹೃದಯದಲ್ಲಿ ಕೂಡಲಸಂಗಮದೇವರ ದರ್ಶನ ಪಡೆದು ಮಾನವೀಯತೆಯನ್ನು ಎತ್ತಿ ಹಿಡಿದರು.

ಸ್ತ್ರೀಯರ ಉದ್ಧಾರ, ಅಸ್ಪೃಶ್ಯತಾ ನಿರ್ಮೂಲನೆ, ಮೂಢನಂಬಿಕೆಗಳ ಖಂಡಿಸಿ, ಸರ್ವರಿಗೂ ಶಿಕ್ಷಣ, ಏಕದೇವೋಪಾಸನೆ, ಕಾಯಕಪ್ರಜ್ಞೆ ಬೆಳೆಸಿದರು. ವಿಶ್ವಗುರು ಬಸವಣ್ಣನವರ ಈ ಕಾರ್ಯವನ್ನೇ ಮಹಾರಾಷ್ಟ್ರದ ಸಂತ ನಾಮದೇವ, ಜ್ಞಾನೇಶ್ವರ, ತುಕಾರಾಮ, ಮಹಾತ್ಮ ಫುಲೆ, ಶಾಹುಮಹಾರಾಜರು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮುಂದುವರೆಸಿದರು. ಬಸವಣ್ಣನವರ ಸಂದೇಶ ಸಕಲ ಜೀವಾತ್ಮರ ಕಲ್ಯಾಣಕ್ಕಾಗಿ ಎಂದೆಂದಿಗೂ ಪ್ರಸ್ತುತ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ನಾಡೋಜ, ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.

ಮಂಗಳವಾರದಂದು ಮಹಾರಾಷ್ಟ್ರದ ಪುಣೆ ಮಹಾನಗರದ ಜಾಧವನಗರ ವಡಗಾವದಲ್ಲಿ ಬಸವಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಬಸವಜಯಂತಿ ಸಂಭ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿರದೆ, ಅವರು ವಿಶ್ವದ ಸಾಂಸ್ಕೃತಿಕ ನಾಯಕರು. ಜಗದಜ್ಯೋತಿ, ಭಕ್ತಿಭಂಡಾರಿಯಾಗಿದ್ದಾರೆ. ಅವರ ವಿಚಾರಧಾರೆಯಲ್ಲಿಯೇ ನಡೆದವರು ಇಲ್ಲಿನ ಮಹಾತ್ಮ ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ ದಂಪತಿ ಮತ್ತು ಮಹಾಮಾನವತಾವಾದಿ ಅಂಬೇಡ್ಕರರು.

ಇಂದು ಮಹಾತ್ಮ ಫುಲೆಯವರ ವಾಡೆ ನೋಡಿ ತಮಗೆ ಅಪಾರ ಸಂತೋಷವಾಯಿತು. ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡಾಗ ಇವರು ಬಸವ ಪರಂಪರೆಯ ನಿಜವಾರಸುದಾರರೆಂದೇ ಎನಿಸಿತು. ಹಾಗಾಗಿ ಮಹಾರಾಷ್ಟ್ರದಲ್ಲಿ ಬಸವಪ್ರಜ್ಞೆ ವೇಗವಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ ತಂದಿದೆ.

ಭಾಲ್ಕಿ ಶ್ರೀಮಠದ ಅಡಿಯಲ್ಲಿ ಮಹಾರಾಷ್ಟ್ರ ಬಸವ ಪರಿಷತ್ತು ಸ್ಥಾಪಿಸಿ, ಸುಮಾರು ೨೦೦ಕ್ಕಿಂತಲೂ ಹೆಚ್ಚಿನ ಮರಾಠಿ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಮಹಾರಾಷ್ಟ್ರದಾದ್ಯಂತ ಬಸವ ಸಾಹಿತ್ಯ ಪ್ರಸಾರವಾಗಿ, ಹೆಚ್ಚಿನ ಬಸವಪ್ರಜ್ಞೆ ಬೆಳೆಯಲು ಸಹಕಾರಿಯಾಯಿತು. ಇದಕ್ಕೆ ಮಹಾರಾಷ್ಟ್ರದಲ್ಲಿ ನಮ್ಮ ಶ್ರೀಮಠದಿಂದ ಪ್ರಕಟಿಸಿದ ಮರಾಠಿ ಸಾಹಿತ್ಯವೇ ಮೂಲ ಕಾರಣವೆಂದು ಹೇಳಲು ಅಭಿಮಾನ ಎನಿಸುತ್ತದೆ. ನೀವೆಲ್ಲರೂ ಬಸವಪ್ರಜ್ಞೆ, ವಚನನಿಷ್ಠೆ ಮತ್ತು ಇಷ್ಟಲಿಂಗದ ಮೇಲೆ ಭಕ್ತಿ ಬೆಳೆಸಿಕೊಳ್ಳುವ ಮೂಲಕ ಬಸವತತ್ವವನ್ನು ನಿಜಾಚರಣೆಯಲ್ಲಿ ತರಬೇಕು ಎಂದು ಪೂಜ್ಯರು ಕಿವಿ ಮಾತು ಹೇಳಿದರು. ಬಸವ ಪ್ರತಿಷ್ಠಾನ ಹಮ್ಮಿಕೊಂಡ ಸಂಭ್ರಮದ ಬಸವಜಯಂತಿ ಆಚರಣೆ ಬಗ್ಗೆ ಹೆಮ್ಮೆಪಟ್ಟರು.

ಆರಂಭದಲ್ಲಿ ಬಸವಣ್ಣನವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪೂಜ್ಯರ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಪುಣೆ ಮಹಾನಗರದ ಬಸವಸೇವಾ ಪ್ರತಿಷ್ಠಾನ ಹಾಗೂ ಎಲ್ಲ ಬಸವಪರ ಸಂಘಟನೆಗಳು ಸನ್ಮಾನ ಪತ್ರ ನೀಡಿ ಪೂಜ್ಯರನ್ನು ಗೌರವಿಸಿದವು.

ಭಾಲ್ಕಿಯ ಶರಣ ಸಾಹಿತಿ ರಾಜು ಜುಬರೆ ‘ವರ್ತಮಾನಕ್ಕೆ ಬಸವಣ್ಣನವರ ವಿಚಾರಗಳು’ ಕುರಿತು ಮರಾಠಿಯಲ್ಲಿ ಉಪನ್ಯಾಸ ನೀಡುತ್ತ, ಜಾಗತೀಕರಣದ ಹೊಡೆತಕ್ಕೆ, ಸಮಾಜ ಸಂವಹನಗಳ ದಾಳಿಗೆ ಕುಟುಂಬದಲ್ಲಿಯ ಸುಸಂವಾದ ಕಡಿಮೆಯಾಗಿ ಯಾಂತ್ರಿಕತೆ ಬೆಳೆಯುತ್ತಿದೆ. ಜಗತ್ತು ಮಹಾಭಯಾನಕ ಯುದ್ಧಗಳ ಛಾಯೆಯಲ್ಲಿ ಬದುಕುವಂತಾಗಿದೆ. ಅಂದು ರಾಜ್ಯಾಡಳಿತ ಇದ್ದರೂ ಬಸವಣ್ಣವರ ಕಾಲಕ್ಕೆ ಯುದ್ಧಗಳೇ ನಡೆಯಲಿಲ್ಲ. ಬಸವಣ್ಣನವರು ಎಲ್ಲೆಡೆ ಶಾಂತಿ, ಸೌಹಾರ್ದತೆ ಬೆಳೆಯುವ ತತ್ವಗಳು ಬಿತ್ತಿದ್ದೇ ಮೂಲ ಕಾರಣವಾಗಿತ್ತು. ಇನ್ನು ಮುಂದೆ ಸುಂದರವಾದ, ಸೌಹಾರ್ದಯುತ ಸಮಾಜ ಕಟ್ಟಲು ಬಸವಣ್ಣವರ ತತ್ವಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿವೆ. ಅವರನ್ನು, ಅವರ ತತ್ವಗಳನ್ನು ಎಂದಿಗೂ ಮರೆಯದಿರೋಣ ಎಂದರು.

ಸೊಲ್ಲಾಪುರದ ಪತ್ರಕರ್ತ ಶರಣ ಚನ್ನವೀರ ಭದ್ರೇಶ್ವರಮಠ ‘ಸಿದ್ಧರಾಮೇಶ್ವರರ ಜೀವನ ಚರಿತ್ರೆ’ ಕುರಿತು ಮಾತನಾಡುತ್ತ, ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿಸಿದ ಶರಣ ಸಿದ್ಧರಾಮರಿಗೆ ಅರುಹಿನ ಕಣ್ಣು ತೆರೆಯಿಸಿದ ಅಲ್ಲಮ ಸೊನ್ನಲಾಪುರದಿಂದ ಕಲ್ಯಾಣಕ್ಕೆ ಕರೆತಂದು ಕರ್ಮಯೋಗಿಯಾಗಿದ್ದವನನ್ನು ಶಿವಯೋಗಿಯನ್ನಾಗಿಸಿದ. ಬಸವಣ್ಣನವರ ಅರುಹಿ ತತ್ವಗಳನ್ನೇ ಸೊಲ್ಲಾಪುರದಲ್ಲಿ ಬಿತ್ತಿ ಇಂದಿಗೂ ಸೊಲ್ಲಾಪುರ ನಿವಾಸಿಗರ ಹೃದಯದಲ್ಲಿ ಮಾಸದೆ ತನ್ನ ಪ್ರಭಾವ ಬೀರಿದವನು ಶಿವಯೋಗಿ ಸಿದ್ಧರಾಮ ಎಂದ ಅವರು ಸೊನ್ನಲಗಿಯ ಸಿದ್ಧರಾಮರ ಜೀವನ ಚರಿತ್ರೆಯೇ ಬಿಚ್ಚಿಟ್ಟರು.

ಪುಣೆ ನಗರಸಭೆಯ ಮಾಜಿ ಸದಸ್ಯ ಹರಿಭಾವು ಚರವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ನಳಿನಿ ವಾಗ್ಮಾರೆ ಅವರು ಇಂಗ್ಲೀಷನಲ್ಲಿ ಬರೆದ ‘ಲಿಂಗಾಯತ ಉಮನ್ಸ್’ ಎಂಬ ಗ್ರಂಥ ಲೋಕಾರ್ಪಣೆ ಮಾಡಲಾಯಿತು.

ಎಸ್.ಎಸ್.ಎಲ್.ಸಿ. ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂಡೆ ಪರಿವಾರ ವತಿಯಿಂದ ಗೌರವಿಸಿ, ಗೌರವಧನ ನೀಡಲಾಯಿತು.

ಕಾರ್ಯಕ್ರಮದ ಮೊದಲಿಗೆ ಪೂಜ್ಯ ಪಟ್ಟದ್ದೇವರು ಮಹಾತ್ಮ ಫುಲೆ ವಾಡಾಕ್ಕೆ ಭೇಟಿ ನೀಡಿ ಫುಲೆ ದಂಪತಿ ಸಮಾಧಿಗೆ ಗೌರವ ಸಲ್ಲಿಸಿದರು.

ಮರಾಠಿ ವಚನಗಳ ಮೇಲೆ ಮಕ್ಕಳು ಮಾಡಿದ ವಚನನೃತ್ಯ ಎಲ್ಲರ ಗಮನ ಸೆಳೆಯಿತು. ಬೆಳಿಗ್ಗೆ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ರಕ್ತದಾನ ಮಾಡಿದರು.

ಶಾಸಕ ಭೀಮರಾವ ತಾಪಕೀರ, ಸಂಜಯ ಇಂಡೆ, ನರ್ಸಿಂಗ್ ಮುಳೆ, ಸಂತೋಷ ಮಲ್ಲಶೆಟ್ಟಿ, ವಿಜಯ ಪಾಟೀಲ, ಪಾಲಿಕೆ ಸದಸ್ಯ ವಿಕಾಸ ದಾಂಗಟ, ಸಾಮಾಜಿಕ ಚಳುವಳಿಯ ಶರಣ ಶರಣೆಯರು ಹಾಗೂ ಪ್ರತಿಷ್ಠಾನದ ಹೆಚ್ಚಿನ ಸದಸ್ಯರು ಕಾರ್ಯಕ್ರಮದಲ್ಲಿದ್ದು ಯಶಸ್ಸಿಗೆ ಶ್ರಮಿಸಿದರು.

ನೀಲಕಂಠ ಪಾಟೀಲ ಸ್ವಾಗತಿಸಿದರು. ಚಂದ್ರಕಾಂತ ಹಾಲಕುಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಖೂಬಾ ನಿರೂಪಿಸಿ, ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *