ರಾಯಚೂರು
ಬಸವ ಕೇಂದ್ರದ ವತಿಯಿಂದ ಲಿಂಗೈಕ್ಯ ಪಿ. ವೀರಭದ್ರಪ್ಪ ಕುರುಕುಂದಿಯವರ ಸವಿನೆನಪು ಹಾಗೂ ವಚನ ಗಾಯನ, ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶರಣ ಪರಮೇಶ್ವರ ಸಾಲಿಮಠ ಮಾತನಾಡಿ, ಕುರಕುಂದಿ ವೀರಭದ್ರಪ್ಪನವರು ಬಸವ ಕೇಂದ್ರಗಳನ್ನು ಸ್ಥಾಪನೆ ಮಾಡಿ, ಲಿಂಗಾಯತ ನಿಜಾಚಾರಣೆಗಳ ಮೂಲಕ ಜನರನ್ನು ಜಾಗ್ರತೆಗೊಳಿಸಿದರು. ಎಲ್ಲರಿಗೂ ಇಷ್ಟಲಿಂಗ ಧಾರಣೆ ಮಾಡಿಸಿದರಲ್ಲದೆ, ಸಿಂಧನೂರಲ್ಲಿ ಬಸವ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ / ವಸತಿಯನ್ನು ಕಲ್ಪಿಸಿದ್ದನ್ನು ನೆನೆಯುತ್ತಾ, ಅವರು ಮಾಡಿದ ಅದ್ವಿತೀಯ ಸಾಧನೆ, ಕೈಗೊಂಡ ಕಾರ್ಯಕ್ರಮಗಳ ಕುರಿತು ಪುಸ್ತಕ ಪ್ರಕಟಿಸಿದಲ್ಲಿ ಮುಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗುವದೆಂದರು.
ಶರಣ ಬೆಟ್ಟಪ್ಪ ಕಸ್ತೂರಿ ಮಾತನಾಡಿ, ವೀರಭದ್ರಪ್ಪನವರು ಬಸವ ತತ್ವ ಪ್ರಚಾರ ಮಾಡುವುದರೊಂದಿಗೆ, ಬಸವ ತತ್ವದಡಿಯಲ್ಲಿ ಕಲ್ಯಾಣ ಮಹೋತ್ಸವ, ಗೃಹ ಪ್ರವೇಶ, ಸೀಮಂತ ಕಾರ್ಯ, ಅಂಗಡಿ ಪೂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ದೂರದ ಊರುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಗಿ ನಡೆಸಿಕೊಡುತ್ತಿದ್ದ ನಿಜಶರಣ. ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಶರಣರಾದ ಜೆ. ಬಸವರಾಜ ಹಾಗೂ ಸಿ.ಬಿ. ಪಾಟೀಲ ವಕೀಲರು ಮಾತನಾಡಿ ವೀರಭದ್ರಪ್ಪನವರು ಸಿಂಧನೂರಿನಲ್ಲಿ ಸ್ನೇಹಿತರೊಡಗೂಡಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆಂದರು.
ಶರಣ ರಾಚನಗೌಡ ಕೋಳೂರ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸುಗಮ ಸಂಗೀತ ವಿದ್ಯಾಲಯ ಮತ್ತು ನವರತ್ನ ಯುವಕ ಸಂಘದ ಸದಸ್ಯರು ವಚನ ಗಾಯನ ಹಾಗೂ ಸುಗಮ ಸಂಗೀತ ನಡೆಸಿಕೊಟ್ಟರು.
ಶರಣರಾದ ಮಲ್ಲಿಕಾರ್ಜುನ ಗುಡಿಮನಿ, ಶೈಲಜಾ ಸಾಲಿಮಠ, ಅಮರಪ್ಪ ಹೂಗಾರ, ಎಸ್. ಶಂಕರಗೌಡ, ವೆಂಕಣ್ಣ ಆಶಾಪುರ, ಪೂರ್ಣಿಮಾ ಮುಂತಾದವರು ಶರಣ ವೀರಭದ್ರಪ್ಪ ಅವರ ಶರಣ, ಜಂಗಮಸೇವೆ ಕುರಿತು ಮಾತನಾಡಿದರು.
ಶರಣೆ ಅಶ್ವಿನಿ ಮಾಟೂರ ವಚನ ಪ್ರಾರ್ಥನೆ ಮಾಡಿದರು, ನಾಗೇಶಪ್ಪ ಸ್ವಾಗತಿಸಿದರು, ರಾಘವೇಂದ್ರ ಆಶಾಪುರ ಪ್ರಾಸ್ತವಿಕ ನುಡಿಗಳನ್ನಾಡಿದರು, ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ವೀರೇಶ ಕಳ್ಳೊಳ್ಳಿ ವಂದಿಸಿದರು.
150 ಜನ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.