ವೀರಶೈವ ಮಹಾಸಭಾದ ನಿರ್ಣಯವನ್ನೇ ಮರೆತ ರಾಜ್ಯಾಧ್ಯಕ್ಷ ಶಂಕರ ಬಿದರಿ

ಎಸ್. ಎಂ. ಜಾಮದಾರ್
ಎಸ್. ಎಂ. ಜಾಮದಾರ್

ಬೆಂಗಳೂರು

ಲಿಂಗಾಯತರು ಹಿಂದೂಗಳ ಒಂದು ಪಂಥ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ನೀಡಿರುವ ಹೇಳಿಕೆಗೆ ನಮ್ಮ ಆಕ್ಷೇಪಣೆಯಿದೆ.

ತಮ್ಮದೇ ಸಂಘಟನೆಯ ಪ್ರಮುಖ ನಿರ್ಣಯವನ್ನೇ ಅವರು ಮರೆತಿರುವ ಹಾಗಿದೆ.

2023 ಡಿಸೆಂಬರ್ 23ರ ಮಹಾಸಭಾದ ಸಮ್ಮೇಳನದಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಆ ನಿರ್ಣಯಕ್ಕೆ ಬದ್ಧರಾಗಿ, ಸಾರ್ವಜನಿವಾಗಿ ಲಿಂಗಾಯತರು ಹಿಂದೂಗಳಲ್ಲ ಅಂತ ಮತ್ತೇ ಮತ್ತೇ ಹೇಳುತ್ತಾ ಬಂದಿದ್ದಾರೆ.

ಇದರ ವಿರುದ್ಧವಾಗಿ ಬಿದರಿಯವರು ಏಕೆ ಮಾತನಾಡಿದ್ದಾರೆ? ಇದಕ್ಕೆ ಕಾರಣವೇನು? ಅವರು ಬಿಜೆಪಿ ಸದಸ್ಯರು, ಅವರ ಪಕ್ಷ ಲಿಂಗಾಯತ ಧರ್ಮದ ಹೋರಾಟವನ್ನು ವಿರೋಧಿಸಿದೆ. ಲಿಂಗಾಯತ ಒಂದು ಪಂಥ ಎಂದು ಹೇಳುವಲ್ಲಿ ತಮ್ಮ ಪಕ್ಷವನ್ನು ಓಲೈಸುವ ಪ್ರಯತ್ನವಿದೆಯೇ? ಅವರು ಭಾಷಣ ಮಾಡಿದಾಗ ಯಡಿಯೂರಪ್ಪ, ಬೊಮ್ಮಾಯಿರಂತಹ ಪಕ್ಷದ ಮುಖಂಡರು ಸಭೆಯಲ್ಲಿ ಹಾಜರಿದ್ದರು ಎಂಬುದು ಗಮನಿಸಬೇಕು.

ಬಿದರಿ ಅವರು ನೀಡಿದ ಇನ್ನೊಂದು ಹೇಳಿಕೆಗೂ ನಮ್ಮ ಆಕ್ಷೇಪಣೆಯಿದೆ.

ಪ್ರತ್ಯೇಕ ಧರ್ಮಕ್ಕೆ ಕೇಂದ್ರ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲದೇ ಇರುವುದರಿಂದ ಯಾವುದೇ ಗಣತಿಯಲ್ಲಿ ನಾವು ನಮ್ಮ ಧರ್ಮ ‘ಲಿಂಗಾಯತ’ ಎಂದು ಬರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತ ಸಂವಿಧಾನವು ತನ್ನ ಪ್ರಜೆಗಳಿಗೆ ಕೊಟ್ಟಿರುವ ಹಕ್ಕುಗಳು ಅವರ ಗಮನಕ್ಕೆ ಬಂದಿಲ್ಲವೆಂದು ಕಾಣುತ್ತದೆ.

ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ತನ್ನ ಧರ್ಮವನ್ನು “ಆಚರಿಸಲು, ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು” ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಹಕ್ಕನ್ನು ಬಳಸಿಕೊಂಡು ನಾವು ನಮ್ಮ ಧರ್ಮವನ್ನು ಲಿಂಗಾಯತ ಎಂದು ಬರೆಸಬಹುದು ಮತ್ತು ಬಹಳಷ್ಟು ಜನರು ಹಾಗೆ ಬರೆಸಿದ್ದಾರೆ ಕೂಡ.

ಕರ್ನಾಟಕ ಹೈಕೋರ್ಟಿನಲ್ಲಿ ಮಹಾಸಭಾ ಸಲ್ಲಿಸಿದ ರಿಟ್ ಅರ್ಜಿ ಕೂಡ ಅವರು ಮರೆತಿದ್ದಾರೆ ಎಂದು ಕಾಣುತ್ತದೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಅವರು ಯಾವುದೇ ವ್ಯಕ್ತಿ ತಮ್ಮ ಧರ್ಮದ ಹೆಸರನ್ನು ಬರೆಯಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೈಕೋರ್ಟಿನ ನಿಲುವು ಇದಕ್ಕೆ ವ್ಯತಿರಿಕ್ತವಾಗಿಲ್ಲ.

ಈ ಸತ್ಯವು ರಿಟ್ ಹಾಕಿದ್ದ ಮಹಾಸಭೆಗೆ ತಿಳಿದಿದೆ. ಆದರೆ ಅದರ ಅಧ್ಯಕ್ಷರಿಗೆ ತಿಳಿಯದೆ ಇರುವುದು, ಆ ಸಂಘಟನೆಯ ದುರ್ದೈವ.

Share This Article
4 Comments
  • ವೀರಶೈವ ಮಹಾಸಭೆ ಧರ್ಮದ ವಿಷಯದಲ್ಲಿ ಸ್ಪಷ್ಟತೆ ಇಲ್ಲದೆ ತಮ್ಮ ನಿಲುವನ್ನು ಬದಲಿಸಿ ಸಮಾಜವನ್ನು ಗೊಂದಲಕ್ಕೀಡು ಮಾಡಿದೆ. ಅವರಿಗೆ ಧರ್ಮ ಹಾಗು ಧರ್ಮಿಯರ ಬಗ್ಗೆ ಕಾಳಜಿ ಇಲ್ಲದಿರುವುದು ಸ್ಪಷ್ಟ. ಅವರಿಗೆ ರಾಜಕೀಯದ ಅಧಿಕಾರವೇ ಮುಖ್ಯವಾದಂತೆ ಕಾಣುತ್ತದೆ. ಧರ್ಮ, ಮೀಸಲಾತಿ ಹಾಗು ಅಲ್ಪ ಸಂಖ್ಯಾತ ಸ್ಥಾನಮಾನದ ಬಗ್ಗೆ ಅವರು ಸೃಷ್ಠಿಸಿರುವ ಗೊಂದಲವನ್ನು ಲಿಂಗಾಯತ ಮಠಾಧೀಶರ ಒಕ್ಕೂಟ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಇತರ ಬಸವಪರ ಸಂಘಟನೆ ಗಳೊಂದಿಗೆ ಸಮಾಲೋಚಿಸಿ ಈ ಬಗ್ಗೆ ಸ್ಪಷ್ಠೀಕರಣ ನೀಡಿ ಸಮುದಾಯದವರು ಅನುಸರಿಸ ಬೇಕಾದ ಮುಂದಿನ ಮಾರ್ಗ ಸೂಚಿಸುವುದು ಸೂಕ್ತ.

  • ಏನೇ ಆದರೂ ವೀರಶೈವ ಲಿಂಗಾಯತ ಗೊಂದಲ ಬಗೆಹರಿಯುವಂತಹ ಲಕ್ಷಣಗಳು ಕಾಣುತ್ತಿಲ್ಲ ಒಬ್ಬಬ್ಬರೂ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡಿ ವೀರಶೈವ ಲಿಂಗಾಯತ ರಾದ ನಮ್ಮನ ಗೊಂದಲಕ್ಕೆ ಈಡು ಮಾಡುತ್ತಿರುವುದು ತುಂಬಾ ಸೂಚನೀಯ!?ಲಿಂಗಾಯತರು ಬ್ಯಾರೆ ವೀರಶೈವರು ಬ್ಯಾರೆ ಎಂದು ಒಂದು ವರ್ಗ ವೀರಶೈವ ಲಿಂಗಾಯತ ಒಂದೇ ಎಂದು ಇನ್ನೊಂದು ವರ್ಗ ಇದರಲ್ಲೇ ಕಚ್ಚಾಡಿಕೊಂಡು ಕಾಲ ಕಳೆಯುವಂತಾಗಿದೆ ಈಗ ನಾವು ಯಾವುದನ್ನು ಪಾಲಿಸುವುದು ನಾವು ಮಾಧ್ಯಮದ ವರ್ಗದ ಜನ.

  • ಈ ವೀರಶೈವದ ಆಚಾರ ಹಾಗೂ ವಿಚಾರಗಳನ್ನು ಪಾಲಿಸುವದನ್ನು ಎಲ್ಲ ಲಿಂಗಾಯತರಿಂದ ಬಿಡಿಸಿದಾಗಲೇ ನಮ್ಮ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವ ಸಾಧ್ಯತೆ ಇದೆ.
    ಜಾಮದಾರ್ ಸಾಹೇಬರಿಗೆ ನನ್ನ ಸಂಪೂರ್ಣ ಬೆಂಬಲ ಇದೆ
    🙏🙏

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ