ಗುಳೇದಗುಡ್ಡ
ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ, ಸೋಮಶೇಖರಪ್ಪ ಪರಪ್ಪ ವಂದಾಲ ಅವರ ಮನೆಯಲ್ಲಿ ಜರುಗಿತು.
ಚಿಂತನೆಗಾಗಿ ಅವಿರಳ ಜ್ಞಾನಿ ಚೆನ್ನಬಸವಣ್ಣ ತಂದೆಗಳ ಆಯ್ದುಕೊಂಡ ವಚನ ಹೀಗಿದೆ –
ಬಯಸಿ ಬಂದುದು ಅಂಗಭೋಗ;
ಬಯಸದೆ ಬಂದುದು ಲಿಂಗಭೋಗ,
ಅಂಗಭೋಗ ಅನರ್ಪಿತ; ಲಿಂಗಭೋಗ ಪ್ರಸಾದ
ಬೇಕೆಂಬುದು ಕಾಯಗುಣ; ಬೇಡೆಂಬುದು ವೈರಾಗ್ಯ
ಬೇಕೆಂಬುದು ಅಲ್ಲ; ಬೇಡೆಂಬುದು ಅಲ್ಲ;
ಈ ಉಭಯವನತಿಗಳೆದು ಭೋಗಿಸಬಲ್ಲಡೆ,
ಕೂಡಲಚೆನ್ನಸಂಗಾ
ನಿಮ್ಮ ಪ್ರಸಿದಿಯೆಂಬೆ.
ಪ್ರಾರಂಭದಲ್ಲಿ ಚಿಂತನೆಗೆ ತೊಡಗಿದ ಪ್ರೊ. ಶ್ರೀಕಾಂತ ಗಡೇದ ಅವರು ವಚನಕಾರರ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ, ಅತಿ ಚಿಕ್ಕ ಮಯಸ್ಸಿನಲ್ಲಿ ಅತ್ಯಂತಿಕ ಜ್ಞಾನವನ್ನು ಹೊಂದಿದ್ದವರಾಗಿದ್ದವರು ಚೆನ್ನಬಸವ ತಂದೆಗಳು. ಚೆನ್ನಬಸವ ತಂದೆಗಳ ಅಡಿಯಲ್ಲಿ ಶರಣರ ನಡೆ-ನುಡಿಯಲ್ಲಿರುವ ವಚನಗಳು ಪರಿಷ್ಕರಿಸಿ ಮುದ್ರಿತವಾಗುತ್ತಿದ್ದವು ಎಂದು ಹೇಳುತ್ತ, ಸಮಾನತೆಯನ್ನು ಸಾಧಿಸಿದ ಶರಣರು, ಆಸೆಯ ದುಃಖಕ್ಕೆ ಈ ವಚನ ಪರಿಹಾರವನ್ನು ಸೂಚಿಸುತ್ತದೆ.
ಭಕ್ತರಾಗಲು ಅಂಗಗುಣಗಳನ್ನು ಕಳೆದುಕೊಳ್ಳಲು ಅರಿಷಡ್ವರ್ಗಗಳನ್ನು ಮನದಿಂದ ತೆಗೆದು ಹಾಕಿದರೆ ಲಿಂಗದ ಗುಣಗಳು ಬೆಳೆಯಲು ಸಾಧ್ಯವಾಗುತ್ತದೆ. ಸ್ತ್ರೀಯರಿಗೆ ಎಲ್ಲ ರೀತಿಯಲ್ಲೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಪುರುಷನಷ್ಟೇ ಮಹತ್ವವನ್ನು ಕೊಟ್ಟು ನಡೆಯಿಂದ ಬದುಕಿದವರು ಶರಣರು. ಈ ವಚನವು ಸಹಜತೆ ಹಾಗೂ ನಿರ್ಲಿಪ್ತತೆಯನ್ನು ತಂದುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ತದನಂತರ ಮಾತನಾಡಿದ ಶರಣ ಮಹಾಲಿಂಗಪ್ಪ ಕರನಂದಿಯವರು, ವೈರಾಗ್ಯ ಕಾಲಘಟ್ಟದ ವಸ್ತುಸ್ಥಿತಿ ಸತ್ಯ. ನಾವು ವೈರಾಗ್ಯದ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳಬೇಕು, ಇಲ್ಲದಿದ್ದರೆ ಮುಕ್ತಿಯ ಮೂಲ ಆಶಯ ದಾರಿ ತಪ್ಪುತ್ತದೆ. ಶಿವನನ್ನೇ ಒಲಿಸಲು ಕಾಯವನ್ನು ಹೇಗೆ ಬಳಸಬೇಕೆಂದು ಈ ವಚನ ನಮಗೆ ಮಾರ್ಗದರ್ಶಿಸುತ್ತದೆ. ಬದುಕಿನಲ್ಲಿ ಏನೇ ಬಂದರೂ ಸಮ ಮನಸ್ಥಿತಿಯಿಂದ ಎಲ್ಲವನ್ನೂ ಸ್ವೀಕರಿಸಬೇಕೆಂದು, ಭೋಗಿಸಬೇಕೆಂದು ಕರನಂದಿಯವರು ಹೇಳಿದರು.

ಮಾಯೆಯ ಪ್ರಭಾವಕ್ಕೊಳಗಾಗಿ ಆಸೆ ಜೀವದ ಮೂಲ ಗುಣವಾಗಿರುತ್ತದೆ. ಅದನ್ನು ತೆಗೆದುಹಾಕಲು ಚೆನ್ನಬಸವಣ್ಣನವರ ಈ ವಚನ ಆಸರೆಯಾಗುತ್ತದೆ ಎಂದು ಪ್ರೊ. ಗಾಯತ್ರಿ ಕಲ್ಯಾಣಿ ಅವರು ಚಿಂತನೆಗೈಯಲು ಪ್ರಾರಂಭಿಸಿದರು.
ಶಿವನೊಡನೆ ಸಮರಸವಾಗಲು ಬಂದ ಈ ಕಾಯವನ್ನು ಕೆಡಿಸಲಾಗದಂತೆ ಇಟ್ಟುಕೊಳ್ಳಲು ಚೆನ್ನಬಸವ ತಂದೆಗಳ ಈ ವಚನದಿಂದ ನಮಗೆಲ್ಲ ನಿರ್ದೇಶನ ಸಿಗುತ್ತದೆ. ಅನ್ಯಧರ್ಮಗಳು ಆ ದೇವನ ಸಮೀಪ, ಅನುಗ್ರಹ ಇತ್ಯಾದಿಗಳು ಪಡೆಯಲು ಪ್ರಚೋದಿಸಿದರೆ, ಶರಣರು ನಾವೇ ದೇವರಾಗುವ ಪಥವನ್ನು ಹೇಳುತ್ತಾರೆ. ಬದುಕು ಸಹಜತೆಯಿಂದ ಕೂಡಿರಬೇಕು, ಬಯಸಿದರೆ ಅದು ದೇಹ ಪೋಷಣೆಯಾಗುತ್ತದೆ, ತಿರಸ್ಕರಿಸಿದರೆ ಪ್ರಕೃತಿಯ ವಿರುದ್ಧ ನಡೆಯಾಗಿ ಬದುಕು ವಿಕೃತಿಯಾಗುತ್ತದೆ. ಬಯಸುವವ ಶರಣನಾಗಲಾರಿಯ, ಬಂದದ್ದು ಸ್ವೀಕರಿಸದೇ ಇದ್ದರೆ ಶಿವನಾಗಲರಿಯ. ಎರಡನ್ನು ಸಮಚಿತ್ತದಿಂದ ಭೋಗಿಸಬೇಕೆಂದು ಪ್ರೊ. ಗಾಯತ್ರಿ ಕಲ್ಯಾಣಿಯವರು ತಿಳಿಸಿದರು.
ಕೊನೆಯಲ್ಲಿ ಅನುಭವವನ್ನು ಹಂಚಿಕೊಂಡ ಡಾ. ಗಿರೀಶ ನೀಲಕಂಠಮಠ ಅವರು, ಚೆನ್ನಬಸವ ತಂದೆಗಳ ಈ ವಚನವನ್ನು ಮತ್ತೊಮ್ಮೆ ವಾಚಿಸುತ್ತ, ಮನುಷ್ಯನ ಜೀವದ / ಜೀವನದ ಮುಖ್ಯ ಉದ್ದೇಶವೇನು? ನಿಸರ್ಗದ ಜೊತೆಗೆ ಸಹಜ ಬದುಕನ್ನು ಸಾಗಿಸಬೇಕು. ಮಲತ್ರಯಗಳ / ಮಾಯೆಯ ಸಂಪರ್ಕ / ಪ್ರಭಾವದಿಂದಾಗಿ ನಾವು ಸಹಜ ಬದುಕನ್ನು ಅರಿಯಲಾರದೆ, ಅರಿಷಡ್ವರ್ಗಗಳನ್ನು ಮನದಲ್ಲಿ ತುಂಬಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಅಂದರೆ ಶಾಂತಿ, ಸುಖ, ನೆಮ್ಮದಿ… ಗಳನ್ನು ಹುಡುಕುತ್ತಿದ್ದೇವೆ. ಇದರ ಪರಿಣಾಮವಾಗಿ ಇಲ್ಲದ ಸಂಸಾರದ ಜಂಜಾಟದಲ್ಲಿ ಬಿದ್ದು ತೋಳಲಾಡುತ್ತಿದ್ದೇವೆ.
ನಮಗೆ ಧರ್ಮಾಚಾರಣೆಗಳ ಅರಿವು ಸ್ಪಷ್ಟವಾದರೆ ನಾವು ಸಹಜ / ನಿಸರ್ಗದತ್ತವಾದ ಬದುಕಿಗೆ ಒತ್ತುಕೊಡಬೇಕು. ಏನೋ ಪಡೆಯಲು ಏನೇನೋ ಮಾರ್ಗಗಳನ್ನು ಯಾರೋ ಹೇಳಿದಂತೆ ಅನುಸರಿಸುವುದರ ಬದಲಿಗೆ ನೆಮ್ಮದಿಯ ಬದುಕನ್ನು ಹೇಗೆ ಸಾಗಿಸಬೇಕೆಂದು ಚೆನ್ನಬಸವ ತಂದೆಗಳ ಈ ವಚನ ದರ್ಶಿಸುತ್ತದೆ. ಬದುಕಿನಲ್ಲಿ ಬರುವ ಸುಖ, ದುಃಖಗಳನ್ನು ಯಥಾವತ್ತಾಗಿ ಹೇಗೆ ಸ್ವೀಕರಿಸಬೇಕೆಂದು ಈ ವಚನ ನಮಗೆ ತಿಳಿಸುತ್ತದೆ. ಸಹಜವಾಗಿ ದೊರಕುವ ಸ್ಥಿತಿಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು.

ನಮಗೆ ಬಂದಂತಹ ಸುಖ-ದುಃಖಗಳನ್ನು ವಿಶ್ಲೇಷಿಸಲಾರದೆ, ಕಿಂಚಿತ್ತು ಯೋಚಿಸಲಾರದೆ, ಪ್ರಸಾದವೆಂದು ಪ್ರಸನ್ನತೆಯಿಂದ, ನಿರ್ಲಪ್ತ ಭಾವನೆಯಿಂದ ಸ್ವೀಕರಿಸಬೇಕು. ಕೆಲವು ಸಲ ವಿಮೋಚನಗೆ ಒಳಪಟ್ಟಾಗ ಸಕಲವೂ ಲಿಂಗಮಯ, ನಾನು ಆ ಲಿಂಗಚೈತನ್ಯದಲ್ಲಿ ಸಮರಸವಾಗುವ ಮಾರ್ಗಕ್ಕೆ / ಸ್ಥಿತಿಗೆ ಒತ್ತುಕೊಡಬೇಕು. ಬದುಕಿನಲ್ಲಿ ಬಂದಂತಹದ್ದನ್ನು ಬೇಡವೆನ್ನದೆ, ಬಯಸಲಾರದ್ದು ಬಂದರೆ ತಿರಸ್ಕರಿಸಲಾರದೆ ಬದುಕನ್ನು ಕಟ್ಟಿಕೊಂಡರೆ ಆ ಪರವಸ್ತುವಿನಲ್ಲಿ ಪ್ರಿಸಿದ್ದಿಯನ್ನು ಸಾಧಿಸಬಹುದು ಎಂದು ಅತ್ಯಂತ ಮಾರ್ಮಿಕವಾಗಿ ಅನೇಕ ವಚನಗಳನ್ನು ಉದಾರಿಸುತ್ತ ನಿವರ್ಚನಗೈದರು.
ಜಯಶ್ರೀ ಬರಗುಂಡಿ ಹಾಗೂ ಸಂಗಡಿಗರ ಸಾಮೂಹಿಕ ವಚನ ಪ್ರಾರ್ಥನೆ ಹಾಗೂ ವಚನ ಮಂಗಲ ಹಾಡಿದರು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.
ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ, ನೇತ್ರಾವತಿ ರಕ್ಕಸಗಿ, ಕುಮಾರ ಅರುಟಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಖಂಡಿ, ವಿಶಾಲಕ್ಷಿ ಗಾಳಿ, ಮಹಾಮನೆಯ ಕುಟುಂಬದ ಬಂಧುಗಳು, ನೆರೆಹೊರೆಯವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಸಿದ್ಧಲಿಂಗಪ್ಪ ಬರಗುಂಡಿ, ಶ್ರೀಮತಿ ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
