ಶರಣರ ಸಂದೇಶಗಳನ್ನು ತಿಳಿಸುವ ನಾಟಕದ ಜೊತೆಗೆ ಸಾಮಾಜಿಕ, ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಇದರಿಂದ ನಾಟಕದ ಅಭಿರುಚಿಯು ಹಳ್ಳಿಗಳಲ್ಲಿ ಹೆಚ್ಚಿದೆ…
ಸಾಣೇಹಳ್ಳಿ ನಾಟಕೋತ್ಸವ
ನಾಟಕಗಳ ವಿವರ
ನವೆಂಬರ್ ೪: ತುಲಾಭಾರ
ತಂಡ- ಶಿವಸಂಚಾರ (ರಚನೆ; ಬಿ.ಆರ್.ಪೊಲೀಸ ಪಾಟೀಲ, ನಿರ್ದೇಶನ: ವಿಶ್ವೇಶ್ವರಿ ಹಿರೇಮಠ)
ನವೆಂಬರ್ ೫:
ಪರಸಂಗದ ಗೆಂಡೆತಿಮ್ಮ.
ತಂಡ- ರೂಪಾಂತರ, ಬೆಂಗಳೂರು (ಮೂಲ; ಶ್ರೀಕೃಷ್ಣ ಆಲನಹಳ್ಳಿ,
ರಂಗರೂಪ; ಎಂ.ಬೈರೇಗೌಡ.
ನಿರ್ದೇಶನ ಕೆಎಸ್ಡಿಎಲ್ ಚಂದ್ರು)
ನವೆಂಬರ್ ೬:
ಬಂಗಾರದ ಮನುಷ್ಯ
(ಮೂಲ; ಟಿ.ಕೆ.ರಾಮರಾವ್, ರಂಗರೂಪ; ಗಣೇಶ ಅಮೀನಗಡ. ನಿರ್ದೇಶನ: ವೈ.ಡಿ.ಬಾದಾಮಿ)
ನವೆಂಬರ್ ೭: ಕಾಲಚಕ್ರ.
ತಂಡ- ರಂಗಸಮೂಹ, ಮಂಚಿಕೇರಿ (ಮೂಲ ಮರಾಠಿ;
ಜಯವಂತ ದಳವಿ,
ಕನ್ನಡಕ್ಕೆ; ಎಚ್.ಕೆ.ಕರ್ಕೇರಾ.
ನಿರ್ದೇಶನ: ಹುಲಗಪ್ಪ ಕಟ್ಟಿಮನಿ)
ನವೆಂಬರ್ ೮: ಮಹಾಬೆಳಗು.
ತಂಡ- ಸಾಣೇಹಳ್ಳಿಯ ಹಿರಿಯ ಕಲಾವಿದರು
(ರಚನೆ; ರಾಜಶೇಖರ ಹನುಮಾಲಿ. ನಿರ್ದೇಶನ: ವೈ.ಡಿ.ಬಾದಾಮಿ)
ನವೆಂಬರ್ ೯: ಕೋಳೂರು ಕೊಡಗೂಸು ತಂಡ- ಶಿವಸಂಚಾರ
(ರಚನೆ; ಪಂಡಿತಾರಾಧ್ಯ ಶ್ರೀಗಳು, ನಿರ್ದೇಶನ: ಮಹಾದೇವ ಹಡಪದ)
‘‘ಪ್ರತೀ ವರ್ಷದ ನಾಟಕೋತ್ಸವಕ್ಕೆ ಒಂದು ಧ್ಯೇಯವಾಕ್ಯ ಇರುವಂತೆ ಈ ವರ್ಷದ ಧ್ಯೇಯವಾಕ್ಯ ‘ನಮ್ಮ ನಡೆ ಸರ್ವೋದಯದೆಡೆಗೆ’ ಎನ್ನುವುದು.
ಇವತ್ತು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕತಿಕ… ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅಲ್ಲಿ ನಾವು ಕಾಣುವುದೇನು? ತರತಮ ಭಾವನೆಗಳು ತುಂಬಿ ತುಳುಕುತ್ತಿವೆ. ಅಹಂ ಹೆಡೆಯಾಡುತ್ತಿದೆ. ಸರ್ವಸಮಾನತೆಯ ಶಬ್ದ ಉಪನ್ಯಾಸ ಮತ್ತು ಬರಹದ ಸರಕಾಗುತ್ತಿದೆ. ವಾಸ್ತವದಲ್ಲಿ ಅದಕ್ಕೆ ವಿರುದ್ಧವಾದ ಚಟುವಟಿಕೆಗಳೇ ನಡೆಯುತ್ತಿವೆ.
ಪ್ರಜಾಪ್ರಭುತ್ವದ ನಾಡಿನಲ್ಲಿ ಪ್ರಜಾಪ್ರಭು, ಪ್ರಜಾಪ್ರತಿನಿಧಿ ಎನ್ನುವ ಪದಗಳ ಬಳಕೆ ಇದೆ. ಸುಗಮ ಆಡಳಿತದ ಹಿತದೃಷ್ಟಿಯಿಂದ ಪ್ರಜೆಗಳು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪದ್ಧತಿ ಇದೆ. ಪ್ರಜಾಪ್ರತಿನಿಧಿ ಪ್ರಜಾಸೇವಕನಂತೆ ತನ್ನ ಕಾಯಕ ನಿರ್ವಹಿಸಬೇಕು. ತನ್ನನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿದ ಪ್ರಜೆಗಳೇ ತನ್ನ ಪ್ರಭುಗಳು. ಅವರ ಕಲ್ಯಾಣಕ್ಕೆ ತಕ್ಕಂತೆ ತಾನು ಸೇವಕನಾಗಿ ಕೆಲಸ ಮಾಡಬೇಕು ಎನ್ನುವ ಎಚ್ಚರ ಮತ್ತು ಅರಿವು ಪ್ರಜಾಪ್ರತಿನಿಧಿಗೆ ಇರಬೇಕು. ಆಗ ಪ್ರಜಾಪ್ರಭುತ್ವಕ್ಕೆ ವಿಶೇಷ ಮೆರುಗು ಬರುವುದು. ಸಕಲ ಜೀವಾತ್ಮರಿಗೆ ಒಳಿತಾಗುವುದು ಈ ನೆಲೆಯಲ್ಲೇ ಹುಟ್ಟಿಕೊಂಡದ್ದು ‘ಸರ್ವೋದಯ’ದ ಕಲ್ಪನೆ.
‘ಸರ್ವೋದಯ’, ‘ಕಲ್ಯಾಣ’ ಬೇರೆ ಬೇರೆ ಅಲ್ಲ. ಪದಗಳು ಬೇರೆ ಬೇರೆಯಾಗಿದ್ದರೂ ಅವುಗಳ ಆಶಯ ಒಂದೇ. ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿ ಸರ್ವರಿಗೂ ಸಮಾನ ಸ್ಥಾನ-ಮಾನಗಳು ದಕ್ಕಬೇಕು…
ಕಳೆದ ೨೦-೩೦ ವರ್ಷಗಳಿಂದ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳು ಹೇಗೆ ವಿನಾಶದ ಅಂಚು ತಲುಪುತ್ತಿವೆ ಎಂದು ಕನ್ನಡಿ ಹಿಡಿಯಬೇಕಿಲ್ಲ. ಈ ಬಗ್ಗೆ ನಾಡಿನ ಪ್ರಬುದ್ಧ ಚಿಂತಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಜವಾಬ್ದಾರಿ ಎಂದರೆ ಕೇವಲ ಟೀಕೆ, ಉಪದೇಶ ಮಾಡುವುದಲ್ಲ. ತಮ್ಮ ಬದುಕನ್ನು ಸರ್ವೋದಯದ ದಾರಿಯಲ್ಲಿ ಕಟ್ಟಿಕೊಳ್ಳುವುದು. ವಿಚಾರ, ಆಚಾರ ಒಂದಾಗಿಸಿಕೊಳ್ಳುವುದು.
ಈ ನಿಟ್ಟಿನಲ್ಲೇ ಈ ವರ್ಷದ ಶಿವಸಂಚಾರ ತುಲಾಭಾರ, ಬಂಗಾರದ ಮನುಷ್ಯ, ಕೋಳೂರು ಕೊಡಗೂಸು ನಾಟಕಗಳಿವೆ. ಇಲ್ಲಿ ಶಿಕ್ಷಣ, ಕೃಷಿ, ಧರ್ಮ ಈ ಕ್ಷೇತ್ರಗಳಿಗೆ ಒತ್ತುಕೊಡಲಾಗಿದೆ. ಇಂದು ತತ್ವಗಳಿಗೆ ಒತ್ತು ಕೊಡಲಾಗಿದೆ. ಇಂದು ತತ್ವಗಳಿಗೆ ಕೊರತೆ ಇಲ್ಲ. ಅವುಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವವರ ಕೊರತೆ ಎದ್ದು ಕಾಣುತ್ತಿದೆ. ಈ ನೆಲೆಯಲ್ಲಿ ಪರಿಸರ ರಕ್ಷಣೆ, ಸಾವಯವ ಕೃಷಿ, ಧರ್ಮ ಮತ್ತು ಮಾನವ ಹಕ್ಕುಗಳು, ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವ, ನೈತಿಕ ರಾಜಕಾರಣ ಎನ್ನುವ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ನಾಟಕೋತ್ಸವದ ಮೂಲಕ ನಡೆಯಲಿದೆ. ಇವು ಜನರಲ್ಲಿ ಸರ್ವೋದಯ ತತ್ವದೆಡೆಗೆ ಸಾಗಲು ಪ್ರೇರಣೆ ನೀಡುವಂತಾಗಬೇಕು ಎನ್ನುವುದು ನಮ್ಮ ಆಶಯ’’
ಇವು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾತು. ಇದೇ ನವೆಂಬರ್ ೪ರಿಂದ ೯ರವರೆಗೆ ಸಾಣೇಹಳ್ಳಿಯಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಅವರ ಮುನ್ನುಡಿಯ ಮಾತುಗಳೂ ಹೌದು, ನಾಂದಿಯ ಮಾತುಗಳೂ ಹೌದು.
ಈ ನಾಟಕೋತ್ಸವದ ಮೂಲಕ ಈ ವರ್ಷದ ಶಿವಸಂಚಾರದ ನಾಟಕಗಳ ಮೊದಲ ಪ್ರದರ್ಶನವೂ ಆಗುತ್ತದೆ. ಈ ಬಾರಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ಕೋಳೂರು ಕೊಡಗೂಸು’, ಬಿ.ಆರ್. ಪೊಲೀಸಪಾಟೀಲ ಅವರ ‘ತುಲಾಭಾರ’ ಹಾಗೂ ಟಿ.ಕೆ.ರಾಮರಾವ್ ಕಾದಂಬರಿ ಆಧರಿಸಿದ ಗಣೇಶ ಅಮೀನಗಡ ಅವರ ರಂಗರೂಪ ‘ಬಂಗಾರದ ಮನುಷ್ಯ’ ನಾಟಕಗಳು ರಾತ್ರಿ ಒಂಬತ್ತು ಗಂಟೆಗೆ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುವವು.
ಇದರೊಂದಿಗೆ ನಾಟಕೋತ್ಸವದ ಪ್ರತಿದಿನ ಬೆಳಗ್ಗೆ ೮ ಗಂಟೆಗೆ ಚಿಂತನ ಕಾರ್ಯಕ್ರಮಗಳಿರುತ್ತವೆ. ಅಲ್ಲದೆ ಎಸ್.ಎಸ್.ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನ ನಾಟಕಗಳು ಪ್ರಯೋಗಗೊಳ್ಳುತ್ತವೆ. ಇದರಲ್ಲಿ ಸಾಣೇಹಳ್ಳಿ ಸುತ್ತಲಿನ ಸಾವಿರಾರು ಜನರು ನಾಡಹಬ್ಬವೆಂದು, ಊರಹಬ್ಬವೆಂದು, ಜಾತ್ರೆಯೆಂದು ಭಾಗವಹಿಸುತ್ತಾರೆ. ಸಂಜೆಯಾಗುತ್ತಲೇ ಸಾವಿರಾರು ಜನರು ಸಾಣೇಹಳ್ಳಿಯಲ್ಲಿ ನೆರೆದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡು, ಗಣ್ಯರ ಮಾತುಗಳನ್ನು ಕೇಳಿ, ಉಚಿತ ಪ್ರಸಾದದ ಮೂಲಕ ಹೊಟ್ಟೆ ತುಂಬಿಸಿಕೊಂಡು ರಾತ್ರಿ ನಡೆಯುವ ನಾಟಕಗಳನ್ನು ನೋಡಿ ನೆತ್ತಿಯನ್ನೂ ತುಂಬಿಸಿಕೊಳ್ಳುತ್ತಾರೆ.
ಈ ಮೂಲಕ ಸಾಂಸ್ಕೃತಿಕ ಅದರಲ್ಲೂ ರಂಗಸಂಸ್ಕಾರವನ್ನು ಹೊಂದುತ್ತಾರೆ. ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತವರು ಸಾಣೇಹಳ್ಳಿ ಶ್ರೀಗಳೆಂದೇ ಪ್ರಸಿದ್ಧರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ಅವರು ೧೯೭೭ರಲ್ಲಿ ತರಳಬಾಳು ಬೃಹನ್ಮಠದ ಶಾಖೆ ಸಾಣೇಹಳ್ಳಿಗೆ ಪಟ್ಟಾಧ್ಯಕ್ಷರಾದರು. ಅವರಿಗೆ ರಂಗಸಂಸ್ಕಾರ ಸಿಕ್ಕಿದ್ದು ಅವರ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಂದ. ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾಗಿದ್ದ ಅವರು ಕಲೆ, ಸಾಹಿತ್ಯ, ಸಂಗೀತ, ಕೃಷಿ… ಹೀಗೆ ವಿವಿಧ ಕ್ಷೇತ್ರಗಳ ಆಸಕ್ತಿ ಜೊತೆಗೆ ತಮ್ಮ ಛಾಪು ಮೂಡಿಸಿದರು. ಜನರಲ್ಲಿ ಅರಿವು ಮೂಡಿಸಲು ರಂಗಭೂಮಿ ಪ್ರಧಾನ ಮಾಧ್ಯಮ ಎಂದು ಬಗೆದು ೧೯೫೦ರಲ್ಲಿ ‘ತರಳಬಾಳು ಕಲಾ ಸಂಘ’ ಆರಂಭಿಸುವುದರ ಜೊತೆಗೆ ತಾವೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ನಾಡಿನೆಲ್ಲೆಡೆ ಪ್ರದರ್ಶಿಸಲು ಶ್ರಮಿಸಿದ್ದರು. ಈಮೂಲಕ ಬಸವಾದಿ ಶರಣರ ತತ್ವ, ಸಿದ್ಧಾಂತಗಳನ್ನು ಸಮಾಜಕ್ಕೆ ತಲುಪಿಸುವುದಾಗಿತ್ತು.
ಇವರ ಗರಡಿಯಲ್ಲಿ ಪಳಗಿದವರು ಪಂಡಿತಾರಾಧ್ಯ ಶ್ರೀಗಳಿಗೂ ರಂಗಭೂಮಿ ಕುರಿತು ವಿಶೇಷ ಒಲವು. ಇದರ ಪರಿಣಾಮ ೧೯೮೭ರಲ್ಲಿ ಸಾಣೇಹಳ್ಳಿಯಲ್ಲಿ ತಮ್ಮ ಗುರುಗಳ ಹೆಸರಿನಲ್ಲೇ ‘ಶ್ರೀ ಶಿವಕುಮಾರ ಕಲಾ ಸಂಘ’ ಆರಂಭಿಸಿದರು. ಐತಿಹಾಸಿಕ, ಪೌರಾಣಿಕ, ಭಕ್ತಿ, ಸಾಮಾಜಿಕ ಹೀಗೆ ಎಲ್ಲ ಬಗೆಯ ನಾಟಕಗಳನ್ನು ಅವರು ಆಡಿಸಿದರು. ಇದರೊಂದಿಗೆ ರಂಗಭೂಮಿಯತ್ತ ಆಸಕ್ತಿಯಿರುವವರಿಗೆ ತರಬೇತಿ ನೀಡುವ ಸಲುವಾಗಿ ೨೦೦೮ರಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಶುರು ಮಾಡಿದರು. ಇದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಅನುಮತಿ ಪಡೆದಿದೆ. ಪ್ರತೀ ವರ್ಷ ಇಪ್ಪತ್ತು ರಂಗಾಸಕ್ತರನ್ನು ಆಯ್ಕೆ ಮಾಡಿಕೊಂಡು ವರ್ಷದುದ್ದಕ್ಕೂ ತರಬೇತಿ ನೀಡಿ, ಮರುವರ್ಷ ಶಿವಸಂಚಾರದ ಮೂಲಕ ನಾಟಕವಾಡುತ್ತ ತಿರುಗಾಡುತ್ತಾರೆ. ಈ ಶಿವಸಂಚಾರವು ಸಿಜಿಕೆ ಅವರ ಪರಿಕಲ್ಪನೆ. ಅವರು ಸಾಣೇಹಳ್ಳಿಯಲ್ಲಿ ನಡೆದ ದಲಿತ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪಕ್ಕೆ ಬಂದವರು ರೆಪರ್ಟರಿ ಆಗಬೇಕೆಂದು ಸಲಹೆ ನೀಡಿದರು. ಇದಕ್ಕೆ ‘ಶಿವಸಂಚಾರ’ ಎಂದು ಹೆಸರಿಟ್ಟರು.
ಶಿವಕುಮಾರ ರಂಗಶಾಲೆ ಶುರುವಾದ ಮೇಲೆ ಶಿವಸಂಚಾರಕ್ಕೆ ಕಲಾವಿದರ ಕೊರತೆ ಕಾಡಲಿಲ್ಲ. ಒಂದು ವರ್ಷದ ತರಬೇತಿ ನಂತರ ಶಿವಸಂಚಾರ ಕೈಗೊಳ್ಳುವುದರಿಂದ ವಿವಿಧ ಅನುಭವಗಳನ್ನು ಪಡೆಯುತ್ತಾರೆ. ಇಂಥ ಶಿವಸಂಚಾರವು ೨೦೨೧ರಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿದೆ. ಗಮನಾರ್ಹ ಎಂದರೆ; ಶಿವಕುಮಾರ ಕಲಾಸಂಘದ ಬೆಳ್ಳಿಹಬ್ಬದ ಮುಂದುವರಿಕೆಯಾಗಿ ಎರಡು ವರ್ಷಗಳ ಹಿಂದೆ ರಾಜ್ಯದ ೩೧ ಜಿಲ್ಲೆಗಳಲ್ಲೂ ‘ಬಸವಾದಿ ಶರಣರ ದರ್ಶನ’ ಹೆಸರಿನಡಿ ೩೧ ಶರಣರ ನಾಟಕಗಳನ್ನು ಆಯಾ ಜಿಲ್ಲೆಯ ರಂಗತಂಡಗಳ ಮೂಲಕ ಪ್ರದರ್ಶಿಸಲಾಯಿತು. ಇದಕ್ಕಾಗಿ ಶಿವಕುಮಾರ ಕಲಾಸಂಘವು ಆರ್ಥಿಕ ನೆರವನ್ನೂ ನೀಡಿತು. ೨೦೨೨ರ ನವೆಂಬರ್ ೧೫ರಂದು ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ೩೧ ನಾಟಕಗಳೂ ಪ್ರದರ್ಶನಗೊಂಡವು.
ಇವುಗಳಲ್ಲಿ ಆಯ್ದ ಐದು ನಾಟಕಗಳು ಸಾಣೇಹಳ್ಳಿಯಲ್ಲಿ ಪ್ರದರ್ಶನಗೊಂಡವು. ಹೀಗೆ ಸಾಣೇಹಳ್ಳಿ ಮಠವು ಬೆಳೆಯಲು ಭಕ್ತರೂ ಕಾರಣರು. ನಾಟಕೋತ್ಸವಕ್ಕೆಂದು ತಮ್ಮ ಕೈಲಾದ ನೆರವನ್ನು ನೀಡುತ್ತಾರೆ. ಅಜ್ಜಂಪುರದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎ.ಸಿ. ಚಂದ್ರಪ್ಪ ಅವರು ಈ ವರ್ಷ ನಾಟಕೋತ್ಸವಕ್ಕಾಗಿ ತಾವು ಬೆಳೆದ ೨೦ ಕ್ವಿಂಟಲ್ ಈರುಳ್ಳಿ ತಂದುಕೊಟ್ಟರು. ಕಳೆದ ವರ್ಷವೂ ೨೫ ಕ್ವಿಂಟಲ್ ಈರುಳ್ಳಿಯನ್ನು ಕೊಟ್ಟಿದ್ದರು. ‘‘ಹೀಗೆ ಮಠಕ್ಕೆ ಕೊಟ್ಟಾಗೆಲ್ಲ ಬೆಲೆಯೂ ಸಿಗುತ್ತದೆ. ಬೆಳೆಯೂ ಹಂಗೆ ಸಿಗುತ್ತದೆ. ಮಠಕ್ಕೆ ಕಾಣಿಕೆ ಕೊಟ್ಟಾಗೆಲ್ಲ ಒಳ್ಳೆಯದಾಗಿದೆ’’ ಎಂದು ಹೇಳುವ ಅವರು ಶಿವಕುಮಾರ ಕಲಾಸಂಘದ ಖಜಾಂಚಿಯೂ ಆಗಿದ್ದಾರೆ.
‘‘ಶರಣರ ಸಂದೇಶಗಳನ್ನು ತಿಳಿಸುವ ನಾಟಕದ ಜೊತೆಗೆ ಸಾಮಾಜಿಕ, ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಇದರಿಂದ ನಾಟಕದ ಅಭಿರುಚಿಯು ಹಳ್ಳಿಗಳಲ್ಲಿ ಹೆಚ್ಚಿದೆ. ಪ್ರತೀ ವರ್ಷ ಅಜ್ಜಂಪುರದ ಗೆಳೆಯರ ರಂಗ ತಂಡದ ಹದಿನೈದು ಗೆಳೆಯರೆಲ್ಲ ನಾಟಕೋತ್ಸವಕ್ಕೆ ನಿತ್ಯ ಹೋಗುತ್ತೇವೆ. ಆಮೇಲೆ ಪ್ರತೀ ವರ್ಷ ಜನವರಿಯಲ್ಲಿ ಶಿವಸಂಚಾರದ ಏರ್ಪಡಿಸುತ್ತೇವೆ’’ ಎನ್ನುವ ಅಭಿಮತ ಚಂದ್ರಪ್ಪ ಅವರದು.
‘‘೨೦೧೫ರಿಂದ ನಾಟಕೋತ್ಸವದ ನಾಟಕಗಳನ್ನು ತಪ್ಪದೆ ನೋಡುತ್ತಿರುವೆ. ಸಾಣೇಹಳ್ಳಿಯ ಭಾಗದ ಜನರಿಗೆ ಸಾಂಸ್ಕೃತಿಕ ಲೋಕದ ಪರಿಚಯವಾಗಿದೆ. ಕೇವಲ ನಗರಗಳಿಗೆ ಸೀಮಿತವಾದ ನಾಟಕಗಳು ತಮ್ಮ ಹತ್ತಿರದ ಸಾಣೇಹಳ್ಳಿಯಲ್ಲಿ ಸಿಗುತ್ತಿವೆ. ಇದರಿಂದ ರಂಗಭೂಮಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಹೊಸ ಹೊಸ ಕಲಾವಿದರಿಗೆ ಅವಕಾಶಗಳು ಸಿಗುತ್ತಿವೆ. ಇಂದು ಸಾಣೇಹಳ್ಳಿ ನಮ್ಮ ಹೆಮ್ಮೆಯದಾಗಿದೆ’’ ಎಂದು ಖುಷಿಯಿಂದ ಹೇಳಿದರು ನಿವೃತ್ತ ಇಂಜಿನಿಯರ್ ರುದ್ರಾಚಾರ್ ಮಾರಬಗಟ್ಟ.
ಮಹಾಂತೇಶರಿಗೆ ಶಿವಕುಮಾರ ಪ್ರಶಸ್ತಿ:
ಬಾಗಲಕೋಟೆ ಜಿಲ್ಲೆಯ ಇಲಕಲ್ಲದ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಅವರಿಗೆ ಈ ಬಾರಿಯ ಸಾಣೇಹಳ್ಳಿ ಶ್ರೀಮಠ ಪ್ರತೀ ವರ್ಷ ನೀಡುವ ಶ್ರೀ ಶಿವಕುಮಾರ ಪ್ರಶಸ್ತಿ ದೊರಕಿದೆ. ಇಲಕಲ್ಲಿಗೆ ಹವ್ಯಾಸಿ ತಂಡ, ಕಂಪೆನಿ ನಾಟಕಗಳು ಹೋದರೆ, ಯಾರೇ ರಂಗಕರ್ಮಿಗಳು ಹೋದರೂ ಮಹಾಂತೇಶ ಅವರು ನೆರವಿಗೆ ನಿಲ್ಲುತ್ತಾರೆ. ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ಅವರು, ಇಲಕಲ್ಲದ ಸ್ನೇಹರಂಗ ತಂಡದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ನಟರಾಗಿ, ನಿರ್ದೇಶಕರಾಗಿ ಗಮನ ಸೆಳೆದಿದ್ದಾರೆ. ನೇಪಥ್ಯದಲ್ಲೂ ತೊಡಗಿಕೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡಮಿಯ ಸಂಚಾಲಕರಾಗಿದ್ದ ಅವರು, ಸದ್ಯ ರಂಗಾಯಣದ ರಂಗ ಸಮಾಜದ ಸದಸ್ಯರಾಗಿದ್ದಾರೆ. ೬೫ ವರ್ಷ ವಯಸ್ಸಿನ ಅವರು ದಣಿವರಿಯದ ಕಾಯಕಜೀವಿ. ನವೆಂಬರ್ ೯ರಂದು ಸಂಜೆ ಅವರಿಗೆ ೫೦ ಸಾವಿರ ರೂಪಾಯಿ ನಗದು ಪುರಸ್ಕಾರದೊಂದಿಗೆ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ನಡೆಯಲಿದೆ. ಅವರನ್ನು ಅಭಿನಂದಿಸುವೆ.
(ಕೃಪೆ ವಾರ್ತಾಭಾರತಿ)