ಸೇಡಂ
‘ಮಠಮಾನ್ಯಗಳು ನಮ್ಮ ಸಂವಿಧಾನದ ಆಶಯದಂತೆ ತಮ್ಮ ಕಾರ್ಯಗಳನ್ನು ಮಾಡಿದಲ್ಲಿ, ಸಾಮಾಜದಲ್ಲಿ ಪ್ರಗತಿಪರ ಬದಲಾವಣೆ ತರಲು, ನಾಡು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ’ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.

ಅವರು ಸೇಡಂ ತಾಲೂಕ ಕೊಡ್ಲಾ ಗ್ರಾಮದ ಶ್ರೀ ಉರಿಲಿಂಗಪೆದ್ದೀಶ್ವರ ಮಠದ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶ್ರೀಮಠವು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ತರವಾದ ಕೆಲಸ ಮಾಡಿದೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಬಸವಧರ್ಮದ ಹಾದಿಯಲ್ಲಿ ಜೀವನ ನಡೆಸುವ ಅವಶ್ಯಕತೆ ಇದೆ. ಇದಕ್ಕೆ ಬೇಕಾದ ಮಾರ್ಗದರ್ಶನವನ್ನು ಮಠಾಧೀಶರು ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.


ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ದಯವೇ ಧರ್ಮದ ಮೂಲವಾಗಿದೆ. 12ನೇ ಶತಮಾನದಲ್ಲಿ ಶರಣರು ಇದನ್ನೇ ಜಗತ್ತಿಗೆ ಒತ್ತಿ ಸಾರಿದರು. ಆದರೆ ಅಸ್ಪೃಶ್ಯತೆ ಆಚರಣೆ ಘಟನೆಗಳು ಸಮಾಜದಲ್ಲಿ ಇಂದಿಗೂ ತಾಂಡವವಾಡುತ್ತಿರುವುದು ದುಃಖದ ಸಂಗತಿ. ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸಿದಾಗ ಮಾತ್ರ ಬಸವಣ್ಣನವರ ಕನಸು ನನಸಾಗಲು ಸಾಧ್ಯ’ ಎಂದರು.
ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘ಬಸವ ಧರ್ಮ ಹುಟ್ಟಿದ್ದೆ ಸಮಾಜದಲ್ಲಿನ ನೊಂದವರು ಬೆಂದವರಿಗಾಗಿ. ಶರಣಧರ್ಮ ಕೆಳ ಸಮದಾಯದ ಧರ್ಮ. ವಚನ ಸಾಹಿತ್ಯಕ್ಕೆ ಶೋಷಿತ ಸಮುದಾಯದ ಶರಣರ ಕೊಡುಗೆ ಅಪಾರ. ಬಸವ ತತ್ವವನ್ನು ಮತ್ತು ಚಿಂತನೆಗಳನ್ನು ಜೀವನದಲ್ಲಿ ನಾವೆಲ್ಲ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಉರಿಲಿಂಗ ಪೆದ್ದೀಶ್ವರ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ, ಗುರುಮಠಕಲ್ ಮುರುಘಾ ಶ್ರೀಗಳು, ಹರಳಯ್ಯ ಶ್ರೀಗಳು, ಉಳವಿ ಚನ್ನಬಸವ ಮಠದ ಬಸವಲಿಂಗ ಶರಣರು, ಮುಡುಕುತೊರೆ ಸಿದ್ದರಾಮ ಶ್ರೀಗಳು, ಬಸವ ಮಹಾಮನೆಯ ಬೆಲ್ದಾಳ ಶರಣರು, ಕೋಡ್ಲಾದ ಶಂಭುಲಿಂಗೇಶ್ವರ ಸ್ವಾಮೀಜಿ, ಬ್ರಹ್ಮಾನಂದ ಬಂತೇಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಧಾರವಾಡ ಬಸವಾನಂದ ಸ್ವಾಮೀಜಿ, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಾವಿರಾರು ಬಸವಭಕ್ತರು, ಲಿಂಗಾಯತ ಛಲವಾದಿ ಶರಣ ಶರಣೆಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.