ರಾಯಚೂರು:
ಬಸವಾದಿ ಶರಣ ಜೇಡರ ದಾಸಿಮಯ್ಯ ಅವರ ಸ್ಮರಣೆ ಮತ್ತು ಈಚೆಗೆ ಲಿಂಗೈಕ್ಯರಾದ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ಗೌರವಾರ್ಥ ಬಸವಕೇಂದ್ರದ ವತಿಯಿಂದ ನುಡಿನಮನ ಕಾರ್ಯಕ್ರಮ ನಡೆಯಿತು.
ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ನುಡಿನಮನ ಸಲ್ಲಿಸುತ್ತಾ, ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಅ.ಭಾ. ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.

ವಕೀಲರಾದ ಸಿ ಬಿ. ಪಾಟೀಲ ಅವರು ಮಾತನಾಡಿ, ಲಿಂಗೈಕ್ಯ ಖಂಡ್ರೆ ಅವರು ಶಾಮನೂರ ಶಿವಶಂಕರಪ್ಪ ಅವರೊಂದಿಗೆ ಕೂಡಿಕೊಂಡು ಕರ್ನಾಟಕದಾದ್ಯಂತ ಸಂಚರಿಸಿದರು. ಸುಮಾರು ಐದು ಕೋಟಿ ರೂ. ಹಣವನ್ನು ಸಂಗ್ರಹಿಸಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವ ನಗರದಲ್ಲಿ ‘ವೀರಶೈವ- ಲಿಂಗಾಯತ’ ಭವನವನ್ನು ಕಟ್ಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಚನ್ನಬಸವ, ಇಂಜಿನಿಯರ್ ಮಾತನಾಡಿ, ಖಂಡ್ರೆಯವರು ಶಾಸಕರಾಗಿದ್ದಾಗ ರಾಜ್ಯದಲ್ಲಿ ರೈತರಿಗೆ ಬಿತ್ತಲು ಬೀಜದ ಕೊರತೆ ಉಂಟಾದಾಗ ವ್ಯಾಪಾರಸ್ಥರು ಬೀಜ ಸಂಗ್ರಹಿಸಿಟ್ಟಿದ್ದ ಗೋದಾಮುಗಳ ಬೀಗಗಳನ್ನು ಮುರಿದು ರೈತರಿಗೆ ಬೀಜವನ್ನು ಪೂರೈಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆವಾಗ್ಗೆ ಅವರು ಜೈಲು ಸೇರಬೇಕಾಯಿತೆಂದರು.
ಅಮರೇಗೌಡ ಪಾಟೀಲ, ಶರಣಬಸವ ಜಾಡಲದಿನ್ನಿ, ಜೆ. ಬಸವರಾಜ, ಹರವಿ ಶಂಕರಗೌಡರು ಖಂಡ್ರೆ ಕುರಿತು ಮಾತನಾಡಿ ನಮನ ಸಲ್ಲಿಸಿದರು.

ಜನೇವರಿ 2003ರಂದು ಕೂಡಲಸಂಗಮದಲ್ಲಿ ಲಿಂಗಾಯತ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಪಂಚಪೀಠ / ವಿರಕ್ತಮಠ ಮಠಾಧೀಶರನ್ನು ಒಂದೇ ಸಮಾನ ವೇದಿಕೆಯಲ್ಲಿ ಕೂಡಿಸಿ ಅಧಿವೇಶನ ನಡೆಸಿದ್ದನ್ನು ಹಲವರು ನೆನಪಿಸಿದರು.
ಮುಕ್ತಾ ನರಕಲದಿನ್ನಿಯವರು ಜೇಡರ ದಾಸಿಮಯ್ಯನವರ ಕುರಿತು ಮಾತನಾಡುತ್ತಾ “ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, …. ನೋಡಾ ರಾಮನಾಥ “.
ಈ ವಚನದಲ್ಲಿ ಜೇಡರ ದಾಸಿಮಯ್ಯ ಅವರು, ಹಸಿವೆಂದರೇನು? ಅದರ ಸಂಕಟದ ಪರಿ ಹೇಗೆ? ಬದುಕಿನಲ್ಲಿ ಎಲ್ಲಾ ನೋವಿಗಿಂತಲೂ ಮಿಗಿಲಾದ ಹಸಿವಿನ ನೋವು ಮತ್ತು ಸಂಕಟವನ್ನು ಅನುಭವಿಸಿದವರಿಗೆ ಗೊತ್ತು ಎಂಬುದನ್ನು ತಿಳಿಸುತ್ತಾರೆ.

ಇಂತಹ ಹಸಿವನ್ನು ಒಡಲು, ಅಂದರೆ ಹೊಟ್ಟೆಯನ್ನು ಹೊಂದಿದವನು ಅನುಭವಿಸಬಲ್ಲ. ಕೈತುಂಬ ಅನ್ನವನ್ನು ಹೊಂದಿದವ ಒಡಲು ಹೊಂದಿದ್ದರೂ ಸಹ ಇಂತಹ ಹಸಿವನ್ನನುಭವಿಸಲಾರ. ಹೇಗೆ ಹಸಿದವನ ಪರವಾಗಿ ದಾಸಿಮಯ್ಯ ಶರಣರು ಆತನ ಹಸಿವಿಗೆ ಆತ ಅನುಭವಿಸುತ್ತಿರುವ ಹಸಿವೇ ಕಾರಣ ಎಂಬುದು. ಇಂತಹ ಹಸಿವಿನ ಸಂಕಟವನ್ನು ನೀನು ಅನುಭವಿಸಬೇಕಾದರೆ ನೀನು ಆತನಂತೆ ಒಮ್ಮೆ ಒಡಲುಗೊಂಡು ನೋಡು. ಆಗ ನಿನಗೆ ಹಸಿವಿನ ಸಂಕಟ ಅರ್ಥವಾಗುತ್ತದೆ. ಈ ವಚನದಲ್ಲಿ ದಾಸಿಮಯ್ಯ ಶರಣರು ತಮ್ಮ ತಾತ್ವಿಕ ಸಂಕಟವನ್ನು ತನ್ನೊಳಗಿನ ದೇವರನ್ನು ಸಾಂಕೇತಿಸುವ ರಾಮನಾಥನಲ್ಲಿ ತೋಡಿಕೊಂಡಿದ್ದಾರೆ ಎಂದರು.
ಡಾ.ಪ್ರಿಯಾಂಕಾ ಗದ್ವಾಲ್ ಮಕ್ಕಳಿಗೆ ವಚನ ಪಾಠಶಾಲೆ ನಡೆಸಿಕೊಟ್ಟರು. ಶರಣೆ ಪೂರ್ಣಿಮಾ ಪಾಟೀಲ ಹಾಗೂ ನಾಗೇಶಪ್ಪ ವಚನಗಳನ್ನು ಹಾಡಿದರು. ಪಾರ್ವತಿ ಪಾಟೀಲ ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ವೀರಭದ್ರಪ್ಪ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಮಹಾದೇವಪ್ಪ ಏಗನೂರ್ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಶರಣರು ಉಪಸ್ಥಿತರಿದ್ದರು.
