ನಂಜನಗೂಡು:
ಮಠಾಧೀಶರು ಮಾಡಲಾಗದ ಘನತರವಾದ ಕಾರ್ಯಕ್ರಮವನ್ನು ‘ಬಸವ ಮಾಸ’ ಕಾರ್ಯಕ್ರಮದ ಮುಖಾಂತರ ಬಸವ ಮಾಸ ಸಮಿತಿಯವರು ಮಾಡಿದ್ದಾರೆಂದು ಹಳ್ಳದಮಠದ ಶ್ರೀಗಳು ಮತ್ತು ಕುದೇರುಮಠದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿಯೇ ತಾಲೂಕು ಮಟ್ಟದಲ್ಲಿ 30 ದಿನಗಳು ಪ್ರವಚನ ಕಾರ್ಯಕ್ರಮ ಇದೇ ಪ್ರಥಮ ಬಾರಿಗೆ ನಂಜನಗೂಡು ಪಟ್ಟಣದಲ್ಲಿ ಮಾಡಲಾಗಿದೆ ಎಂದರು.

ಉಪನ್ಯಾಸಕರಾದ ಸನತಕುಮಾರ ಅವರು ಈ ಬಸವ ಮಾಸ ಕಾರ್ಯಕ್ರಮದಿಂದ ಪರಿವರ್ತನೆಯಾಗಿ ಬಸವಣ್ಣನವರ ಭಕ್ತರಾದ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡರು.
ಮೂರು ವರ್ಷದ ಹಿಂದೆ ಕಾರ್ಯಕ್ರಮಕ್ಕೆ ಬಂದು ಹಾಜರಾದ ಮೇಲೆ ಅರಿವು ಪಡೆದಲ್ಲದೆ ಇಷ್ಟಲಿಂಗ ದೀಕ್ಷೆ ಪಡೆದು ಈಗ ನೂರಾರು ಭಕ್ತರಿಗೆ ಇಷ್ಟಲಿಂಗ ದೀಕ್ಷೆಯನ್ನು ತಮ್ಮ ಮನೆಯಲ್ಲಿ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಬಗ್ಗೆ ರೂಪ ಮಂಜುನಾಥ ದಂಪತಿಗಳು ಅಭಿಪ್ರಾಯ ತಿಳಿಸಿದರು.
ಶಿಕ್ಷಕಿ ಮೀನಾಕ್ಷಿ ಅವರು ಕಾರ್ಯಕ್ರಮಗಳಿಗೆ ಬಂದು ತಾವು ಕೂಡಾ ಬದಲಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ನಂಜನಗೂಡಿನ ಬಸವಮಾಸ ಸಮಿತಿಯ ವತಿಯಿಂದ ನಡೆದ ಶರಣರ ಜೀವನ ಮೌಲ್ಯ ಕುರಿತಾದ ಧಾರ್ಮಿಕ ಪ್ರವಚನದ 30 ನೇ ದಿನದ ಸಮಾರೋಪ ಸಮಾರಂಭದಲ್ಲಿ ಹಂಗಳ ಹಳ್ಳದ ಮಠದ ಶ್ರೀಗಳು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ನಿಜಕ್ಕೂ ಬಸವಾದಿ ಶರಣರ ಆಶೀರ್ವಾದದ ಫಲದಿಂದ ಮಾತ್ರ ಇಂತಹ ಕಾರ್ಯಕ್ರಮಗಳನ್ನ ಮಾಡಲು ಸಾಧ್ಯ ಎಂದರು.
ಹಣ ಇದ್ದರೆ ಶುಭ ಕಾರ್ಯಕ್ರಮ ಮಾಡಲು ಆರು ತಿಂಗಳು ತಯಾರಿ ನಡೆಸುತ್ತೇವೆ. ಆದರೆ ನಂಜನಗೂಡಿನಲ್ಲಿ ಭಕ್ತರೆಲ್ಲಾ ಸೇರಿ ಒಂದು ತಿಂಗಳಿಂದ ಮಾಡುತ್ತಿರುವ ಈ ಕಾರ್ಯಕ್ರಮ ಬಹಳ ಉನ್ನತವಾದದ್ದು ಎಂದರು.
ಮೈಸೂರಿನ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀಗಳು ದಿವ್ಯ ಸಮ್ಮುಖ ವಹಿಸಿ ಮಾತನಾಡುತ್ತಾ, ನಾನು ಪ್ರಾರಂಭದಿಂದಲೂ ಬಸವ ಮಾಸ ಕಾರ್ಯಕ್ರಮಕ್ಕೆ ಬರುತಿದ್ದೇನೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ನಗರ ಪ್ರದೇಶದಲ್ಲಿ ಸೇರಿ ಒಂದು ತಿಂಗಳುಗಳ ಕಾಲ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರುವುದು ಬಹಳ ಸಂತೋಷ ತಂದಿದೆ ಎಂದರು.

ಲಿಂಗಾಯತ ಧರ್ಮೀಯರು ಪ್ರತಿಯೊಬ್ಬರು ಇಷ್ಟಲಿಂಗ ಹಾಗೂ ವಿಭೂತಿ ಧರಿಸಬೇಕು ಇಲ್ಲದೇ ಹೋದಲ್ಲಿ ಲಿಂಗಾಯತ ಸಮುದಾಯದ ದಾರಿ ತಪ್ಪುತ್ತದೆ ಎಂದರು.
ನಮ್ಮ ಮಠಗಳು ಮಾಡುವಂತಹ ಕಾರ್ಯಕ್ರಮವನ್ನು ತಾವೆಲ್ಲರೂ ಸೇರಿ ಶರಣರ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕುರಹಟ್ಟಿಯ ಗುರುಮಲ್ಲೇಶ್ವರ ದಾಸೋಹ ಮಠದ ಮಾದಪ್ಪ ಶ್ರೀಗಳು ಮಾತನಾಡಿ, ನಮ್ಮ ಸಮುದಾಯದವರು ಒಗ್ಗಟ್ಟಾಗಬೇಕು. ಇಲ್ಲದಿದ್ದಲ್ಲಿ ಲಿಂಗಾಯತ ಧರ್ಮದವರು ಮೂಲೆಗುಂಪಾಗಬೇಕಾಗುತ್ತದೆ. ಎಂದರಲ್ಲದೆ ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಣ್ಣ ಮತ್ತು ಅವರ ದಂಪತಿಗಳ ಸಹಕಾರ ಬಹಳ ದೊಡ್ಡದಿದ್ದು, ಅವರಿಗೆ ಬಸವಾದಿ ಶರಣರ ಆಶೀರ್ವಾದ ಇರಲಿ ಎಂದು ಹೇಳಿ ಸ್ವತಃ ಗೌರವ ಸಮರ್ಪಣೆ ಮಾಡಿದರು.

ವೇದಿಕೆಯಲ್ಲಿ ಕುಂತೂರು ಮಠ, ಕಂತೇಮಹದೇಶ್ವರ ಮಠ, ದೇವಲಾಪುರ ಮಠ, ಹೊಸಪುರ, ಏಚಗಳ್ಳಿ ಇನ್ನೂ ಹಲವು ದಾಸೋಹ ಮಠದ ಶ್ರೀಗಳು ಆಶೀರ್ವಚನ ನೀಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಬಸವ ಮಾಸ ಸಮಿತಿಗೆ ಶುಭ ಹಾರೈಸಿದರು.
ಅದ್ದೂರಿ ಮೆರವಣಿಗೆ:
ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ದೇವಿರಮ್ಮನಹಳ್ಳಿಯ ಮಕ್ಕಳು ಮಹದೇಶ್ವರ ದೇವಸ್ಥಾನದಿಂದ ವಿಶ್ವ ಗುರುಬಸವೇಶ್ವರ ವೃತ್ತದ ವರೆಗೆ ಶರಣರ ಭಜನೆಯೊಡನೆ, ಸಂಭ್ರಮ ಸಡಗರದೊಂದಿಗೆ ಹಾಡುತ್ತಾ, ಭಕ್ತಿಯೊಡನೆ ಕುಣಿಯುತ್ತಾ ಘೋಷಣೆ ಕೂಗುತ್ತ ಸಾಗಿದರು.
ಸ್ಪರ್ಧಾತ್ಮಕ ಸ್ಪರ್ಧೆಯಲ್ಲಿ ಗೆದ್ದವರಿಗೆ ಶರಣರ ಭಾವಚಿತ್ರ, ಪ್ರಶಸ್ತಿಪತ್ರ ಜೊತೆಗೆ ಬಹುಮಾನ ನೀಡಲಾಯಿತು.
ಬಸವಯೋಗೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆ ರಾಜೇಂದ್ರ ಪ್ರಸಾದ, ಸ್ವಾಗತ ಅಕ್ಕಮಹಾದೇವಿ ನಿಲಯದ ಅಧ್ಯಕ್ಷರಾದ ಚನ್ನಪ್ಪಣ್ಣ ಮಾಡಿದರು.
LIC ಎಂ.ಪಿ. ಪ್ರಕಾಶ್, ಕಣೇನೂರು ನಾಗೇಶ, ಮುದ್ದಹಳ್ಳಿ ಅಶೋಕಣ್ಣ, ಪತ್ರಬರಹಗಾರರಾದ ಬದನವಾಳು ಮಹದೇವಪ್ಪ, ಹಂಗಳ ನಾಗಪ್ಪ, ಕಡಬೂರು ರಾಜಶೇಖರ್, ಮುಖ್ಯ ಶಿಕ್ಷಕರಾದ ರಾಜಕುಮಾರ, ಸುಮತಿ ಮಹದೇವಸ್ವಾಮಿ, ಕುರುಬುಹುಂಡಿ ಸುರೇಶ ಮತ್ತು ಹಲವು ಸಂಘಸಂಸ್ಥೆಯ ಅದ್ಯಕ್ಷರು, ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ನಂದಿನಿ ಮಹೇಶ, ಕೋಮಲ ಮಹಾಲಿಂಗಸ್ವಾಮಿ, ಶಶಿಕಲಾ ಗಿರೀಶ ಮತ್ತು ವಿವಿಧ ಗ್ರಾಮಗಳಿಂದ ಬಂದಿದ್ದ ಬಸವ ಭಕ್ತರು, ಹರ್ಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.
