ಏಪ್ರಿಲ್ 4, 5 ದಾನಮ್ಮ ಉತ್ಸವ
ಬಸವ ಕಲ್ಯಾಣ :
ಐತಿಹಾಸಿಕ ಪರುಷಕಟ್ಟೆಯಲ್ಲಿ ಬಸವ ಸ್ತೋತ್ರ ಪಠಣ ಮಾಡುವುದರ ಮೂಲಕ ಬಸವತತ್ವ ಪ್ರಸಾರ ಮತ್ತು ಪ್ರಚಾರ ಕೇಂದ್ರದ ಅಧ್ಯಕ್ಷರಾದ ಜಯಪ್ರಕಾಶ ಸದಾನಂದೆ ಅವರು 15ನೇ ದಾನಮ್ಮ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು, ಪೂಜ್ಯ ಬಸವಪ್ರಭು ಸ್ವಾಮೀಜಿ ಅವರು ಬಸವಧರ್ಮ ಪ್ರಚಾರಾರ್ಥವಾಗಿ ಕಳೆದ 14 ವರ್ಷದಿಂದ ಶರಣೆ ದಾನಮ್ಮ ಜ್ಞಾನಜ್ಯೋತಿ ಯಾತ್ರೆಯನ್ನು ಹಮ್ಮಿಕೊಂಡು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಐದು ಜಿಲ್ಲೆಗಳ ನೂರಾರು ಊರುಗಳಲ್ಲಿ ಪ್ರಚಾರ ಮಾಡಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನಗಳಿಗೆ ಲಿಂಗದೀಕ್ಷೆ ನೀಡಿ ಬಸವತತ್ವವನ್ನು ಉಳಿಸಿ ಬೆಳೆಸುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

ಪೂಜ್ಯರು ಬಸವಕಲ್ಯಾಣದ ಗುಣತೀರ್ಥವಾಡಿ-ನಾರಾಯಣಪೂರವನ್ನು ದಾನಮ್ಮನ ತಪೋಕ್ಷೇತ್ರವೆಂದು ಸಂಶೋಧನೆ ಮೂಲಕ ಗುರುತಿಸಿ ಅಲ್ಲಿ ಕಲ್ಯಾಣ ಮಹಾಮನೆಯನ್ನು ಕಟ್ಟಿ, ಪ್ರತಿವರ್ಷ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವವನ್ನು ಹಮ್ಮಿಕೊಳ್ಳುತ್ತಿರುವರು. ಈ ವರ್ಷದ ಏಪ್ರಿಲ್ 4, 5 ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಗಾಗಿ ದಾನಮ್ಮನ ಐಕ್ಯಕ್ಷೇತ್ರ ಗುಡ್ಡಾಪೂರದಿಂದ, ಸೋಲಾಪೂರ ಸಿದ್ಧರಾಮೇಶ್ವರದಿಂದ, ಕೊಲ್ಲಾಪೂರ ಜಿಲ್ಲೆಯ ಅಲ್ಲಮಗಿರಿಯಿಂದ ಜ್ಯೋತಿಯನ್ನು ಹೊತ್ತಿಸಿಕೊಂಡು ಬರುತ್ತಿರುವರು.
ಪೂಜ್ಯರು ಶರಣ ಜ್ಞಾನಿಗಳಾಗಿದ್ದು, ಅವರು ಹಮ್ಮಿಕೊಳ್ಳುವ ಕಾರ್ಯಕ್ರಮ ಅನುಭಾವದಿಂದ ಕೂಡಿರುತ್ತವೆ. ಎಲ್ಲರೂ ತನು ಮನ ಧನದಿಂದ ಸಹಕರಿಸಬೇಕೆಂದು ಕರೆ ನೀಡಿದರು.

ಲಿಂಗಮ್ಮನ ಬಳಗದ ಅಧ್ಯಕ್ಷರಾದ ಸೋನಾಲಿ ಶಿವರಾಜ ನೀಲಕಂಠೆ ಅವರು ಮಾತನಾಡಿ, ಬಸವಪ್ರಭು ಸ್ವಾಮೀಜಿಯವರು ಹಮ್ಮಿಕೊಂಡ ಜ್ಯೋತಿ ಯಾತ್ರೆಯು ಆಡಂಬರದ ಪಾದಯಾತ್ರೆಯಾಗಿರದೆ. ಜನಗಳನ್ನು ಧಾರ್ಮಿಕವಾಗಿ ಪರಿವರ್ತಿಸುವ ಜ್ಞಾನ ಜ್ಯೋತಿ ಯಾತ್ರೆಯಾಗಿದೆ. ಪೂಜ್ಯ ಮಾತೆ ಮಹಾದೇವಿ ಅವರ ಕರಸಂಜಾತರಾದ ಪೂಜ್ಯರು ಅವರಂತೆ ಮುಂದುವರೆದ ಭಾಗವಾಗಿ ಧರ್ಮ ಪ್ರಚಾರ ಮಾಡುವ ಕೈಂಕರ್ಯವನ್ನು ಹೊಂದಿದ್ದಾರೆ. ಎಂದರಲ್ಲದೆ 25 ದಿನ ನಡೆಯಲಿರುವ ಜ್ಞಾನಜ್ಯೋತಿ ಯಾತ್ರೆಯಲ್ಲಿ ಬಸವಧರ್ಮಿಯರಿಗೆ ಪ್ರವಚನ, ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಉಚಿತವಾಗಿ ಲಿಂಗದೀಕ್ಷೆ ಮಾಡಲಾಗುತ್ತದೆ ಸರ್ವರೂ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ಮಾಡಿದ ಶರಣೆ ದಾನಮ್ಮ ಜ್ಯೋತಿ ಯಾತ್ರೆಯ ರೂವಾರಿ ಪೂಜ್ಯ ಬಸವಪ್ರಭು ಸ್ವಾಮೀಜಿಯವರು, ಹನ್ನೆರಡನೇ ಶತಮಾನದಲ್ಲಿ ಗುರು ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಮಹಾಶರಣೆ ದಾನಮ್ಮನವರು ಅದ್ಭುತ ಲಿಂಗಯೋಗಿಗಳಾಗಿದ್ದಾರೆ. ಬೇಡಿದವರಿಗೆ ಇಷ್ಟಾರ್ಥವನ್ನು ಈಡೇರಿಸುವ ವರದಾನಿಯಾಗಿದ್ದಾರೆ. ಅವರು ದಾಂಪತ್ಯ ಧರ್ಮವನ್ನು ಸ್ವೀಕರಿಸಿ, ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳನ್ನು ಮಾಡಿ ಜನಮಾನಸದ ಹೃದಯದಲ್ಲಿ ಶಾಶ್ವತ ನೆಲೆ ನಿಂತಿದ್ದಾರೆ.
ಅವರು ಕಲ್ಯಾಣಕ್ಕೆ ಬಂದ ಕುರುಹುಗಳಿರಲಿಲ್ಲ ಇತ್ತೀಚೆಗೆ ನಾವು ಕಂಡುಕೊಂಡಿದ್ದೇವೆ. ಗುಣತೀರ್ಥವಾಡಿಯನ್ನು ನಾವು ದಾನಮ್ಮನ ತಪೋಸ್ಥಾನವೆಂದು ಘೋಷಿಸಿದ್ಧೇವೆ. ಈ ಕ್ಷೇತ್ರವನ್ನು ಪವಿತ್ರ ಧಾರ್ಮಿಕ ಶರಣ ಕ್ಷೇತ್ರವಾಗಿಸಲು ನಾನು ಸಂಕಲ್ಪ ಮಾಡಿರುವೆ, ಈ ಕಾರಣವಾಗಿ ಸತತ 14ವರ್ಷದಿಂದ ಪ್ರಯತ್ನಿಸಿದ ಫಲವಾಗಿ ಅದು ಸಾಧ್ಯವಾಗಿದೆ ಎಂದರು.
ದಾನಮ್ಮನ ಉತ್ಸವನ್ನು ಒಂದು ಜಾತ್ರೆಯಾಗಿ ಮಾಡದೆ. ಶರಣ ಜ್ಞಾನವನ್ನು ಬಿತ್ತರಿಸುವ ಅನುಭವ ಮಂಟಪದ ಉತ್ಸವವಾಗಿ, ಕಲ್ಯಾಣದ ಹಬ್ಬವಾಗಿ, ಶರಣರ ಸಮಾಗಮವಾಗಿ ಆಚರಿಸಬೇಕೆಂದು ಸಂಕಲ್ಪಿಸಿರುವೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಾಕಷ್ಟು ಅನುಭಾವಿಗಳು, ಚಿಂತಕರು, ದಾನಮ್ಮನ ಬಸವ ಭಕ್ತಿಯ ಬಳಗ ಸಾವಿರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ತಾವು ತಮ್ಮ ಸಹ ಕುಟುಂಬ ಪರಿವಾರದೊಂದಿಗೆ ಆಗಮಿಸಬೇಕೆಂದು ಕರೆ ನೀಡಿದರು.
ದಾನಮ್ಮ ಬಳಗದ ಕಾರ್ಯಾಧ್ಯಕ್ಷರಾದ ಗಿರಿಜಾ ಸಿದ್ದಣ್ಣನವರು ಜ್ಯೋತಿ ಯಾತ್ರೆಯ ಯಶಸ್ವಿಗಾಗಿ ಪ್ರಾರ್ಥನೆ ಮಾಡಿಸಿದರು. ಅಂಜನಾದೇವಿ ಪೂಜೆ ನೆರವೇರಿಸಿದರು. ಲಕ್ಷ್ಮಿ ಮಹಾದೇವಪ್ಪ ಇಜಾರೆ, ಮಹಾದೇವಿ ಬಾಪೂರೆ, ರೇಖಾ ಸೂರ್ಯಕಾಂತ ಹೂಗಾರ, ಇಂದುಮತಿ ತಟಪಟೆ, ರೇಣುಕಾ ಮಾಮನೆ, ಮಹಾದೇವಪ್ಪ ತೇಲಿ, ಮಲ್ಲಿಕಾರ್ಜುನ ಡೊಣಗಾಪೂರೆ, ನೀಲಕಂಠ ಸ್ವಾಮಿ ಉಪಸ್ಥಿತರಿದ್ದರು.
ಸಂಗಮೇಶ ತೋಗರಖೇಡೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
