ಶರಣರ ಸಮಾನತೆಯ ಸಂದೇಶ ಸಾರಿದ ‘ಕಲ್ಯಾಣ ಕ್ರಾಂತಿ ಸ್ಮರಣೋತ್ಸವ’

ಬೀದರ :

​12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಹಾಗೂ ಸಮಸ್ತ ಶರಣರು ಹುಟ್ಟುಹಾಕಿದ ಕಲ್ಯಾಣ ಕ್ರಾಂತಿಯು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಮಹತ್ವದ ಸಾಮಾಜಿಕ, ವೈಚಾರಿಕ ಹಾಗೂ ಸಮಾನತೆಯ ಮಹಾ ಆಂದೋಲನವಾಗಿದೆ ಎಂದು ಕಲ್ಯಾಣ ಕ್ರಾಂತಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಸ್ಮರಿಸಿದರು.

ತಾಲೂಕಿನ ​ಆಣದೂರು ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ ಬಸವ ಮಂಟಪದಲ್ಲಿ ಆಯೋಜಿಸಲಾಗಿದ್ದ “ಕಲ್ಯಾಣ ಕ್ರಾಂತಿ ಸ್ಮರಣೋತ್ಸವ “ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಪೂಜೆ ಪ್ರಾರ್ಥನೆ ಹಾಗೂ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಮಕ್ಕಳಿಂದ ವಚನ ಗಾಯನ ಹಾಗೂ ವಚನ ಪಠಣ ಮಾಡುವ ಮೂಲಕ ಶರಣರ ಸಂದೇಶಗಳನ್ನು ನೆನೆದರು.

​ಕಾರ್ಯಕ್ರಮದಲ್ಲಿ, ತೆಲಂಗಾಣ ರಾಷ್ಟ್ರೀಯ ಬಸವ ದಳದ ಯೋಗ ಆಚಾರ್ಯ ದತ್ತಾತ್ರಿ ಗುಮತಾಪುರೆ, ಜಿಲ್ಲಾ ವಕಿಲ ಸಂಘದ ಕಾರ್ಯದರ್ಶಿ ಜಗನ್ನಾಥ ಸೋರಳ್ಳಿ ಮತ್ತು ಕಲ್ಯಾಣ ಭಾರತಿ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ನಾಗೇಂದ್ರ ಸೋರಳ್ಳಿ ಮಾತನಾಡಿದರು.

“ಕಲ್ಯಾಣ ಕ್ರಾಂತಿಯು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ; ಅದು ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದ ಸಮ ಸಮಾಜದ ನಿರ್ಮಾಣಕ್ಕಾಗಿ ನಡೆದ ಪ್ರಬುದ್ಧ ಚಿಂತನೆಗಳ ಸಂಗಮ. ಶರಣರು ಸ್ಥಾಪಿಸಿದ ‘ಅನುಭವ ಮಂಟಪ’ವು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೊದಲ ಸಂಸತ್ತಾಗಿದೆ. ಕಾಯಕ ಮತ್ತು ದಾಸೋಹ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಕಲ್ಯಾಣ ಕ್ರಾಂತಿಯ ಆಶಯಗಳು ನಿಜವಾಗಿಯೂ ಸಾಕಾರಗೊಳ್ಳಲು ಸಾಧ್ಯ.

“ವಚನ ಸಾಹಿತ್ಯವು ಮನುಷ್ಯನಿಗೆ ಬದುಕುವ ಸಂಸ್ಕಾರ ಮತ್ತು ನೈತಿಕತೆಯನ್ನು ಕಲಿಸುತ್ತದೆ. ಶರಣರ ಸದಾಚಾರ, ಕರುಣೆ ಮತ್ತು ಸಮಾನತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಲಾಯಿತು.

​ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *