ಶಹಪುರ
ಗುರು-ಶಿಷ್ಯರ ಸಂಬಂಧವು ಒಂದು ಅದ್ಭುತವಾದ ಪರಂಪರೆಯಾಗಿದ್ದು, ಇದನ್ನು ಶರಣರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ.
ಈ ಪರಂಪರೆಯಲ್ಲಿ, ಶರಣರು ಅಸಮಾನತೆಯನ್ನು ತಿರಸ್ಕರಿಸಿದರು ಮತ್ತು ಸ್ವಾರ್ಥರಹಿತ ಸಾಮಾಜಿಕ ಚಿಂತನೆಗಳಿಗೆ ಒತ್ತು ನೀಡಿದರು.
ಇದೇ ಭಾವನೆಯನ್ನು ಬಸವಣ್ಣನವರ ವಚನವೊಂದು ಹೀಗೆ ವಿವರಿಸುತ್ತದೆ:
“ಕೃಷಿಕೃತ್ಯ ಕಾಯಕದಿಂದಾಡೇನು? ತನು-ಮನ ಬಳಲಿಸಿ ತಂದು ದಾಸೋಹ ಮಾಡುವ ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ. ಅದೆಂತೆನೆ; ಆತನ ತನು ಶುದ್ಧ, ಆತನ ಮನ ಶುದ್ಧ, ಆತನ ನಡೆ ಶುದ್ಧ, ನುಡಿಯೆಲ್ಲಾ ಪಾವನವು! ಆತಂಗೆ ಉಪದೇಶ ಮಾಡಿದಾತನೇ ಪರಮ ಸದ್ಗುರು. ಅಂತಪ್ಪ ಸದ್ಭಕ್ತನ ಮನೆಯು ಕೈಲಾಸವೆಂದು ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ. ಇಂತಪ್ಪವರ ನಾನು ನೆರೆ ನಂಬಿ ನಮೋನಮ: ಎಂಬೆನಯ್ಯ ಕೂಡಲಸಂಗಮದೇವಾ.”
ಈ ವಚನದಲ್ಲಿ, ಬಸವಣ್ಣನವರು ಭಕ್ತ ಮತ್ತು ಜಂಗಮರು ಹೇಗೆ ಇರಬೇಕು ಎಂಬುದನ್ನು ಅರ್ಥಪೂರ್ಣವಾಗಿ ತಿಳಿಸಿದ್ದಾರೆ.
ಭಕ್ತನು ತನ್ನ ದೇಹ ಮತ್ತು ಮನಸ್ಸನ್ನು ದಣಿಸಿ ಸಂಪಾದನೆ ಮಾಡಿ, ಅದನ್ನು ದಾಸೋಹಕ್ಕಾಗಿ ಬಳಸಬೇಕು. ಕಾಯಕನಿಷ್ಠನಾದ ಅವನ ತನು, ಮನ, ನಡೆ, ನುಡಿ ಶುದ್ಧವಾಗಿರುತ್ತದೆ. ಅಂತಹ ಭಕ್ತನಿಗೆ ಉಪದೇಶ ಮಾಡಿದಾತನೇ ನಿಜವಾದ ಸದ್ಗುರು. ಆ ಭಕ್ತನ ಮನೆಯೇ ಕೈಲಾಸ. ಅಂತಹ ಮನೆಯಲ್ಲಿ ಹೋಗಿ ಲಿಂಗಾರ್ಚನೆ ಮಾಡುವ ಜಂಗಮನೇ ಜಗತ್ತನ್ನು ಪಾವನಗೊಳಿಸುವವನು ಎಂದು ಬಸವಣ್ಣನವರು ಹೇಳುತ್ತಾರೆ.
ಇಲ್ಲಿ ಜಂಗಮನಿಂದ ಭಕ್ತನೂ, ಭಕ್ತನಿಂದ ಜಂಗಮನೂ ಪಾವನವಾಗುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ. ಇದರ ಮೂಲ ಉದ್ಧೇಶವೆಂದರೆ ಇಬ್ಬರೂ ಸಮಾನರು ಎಂಬುವುದನ್ನು ಪ್ರತಿಪಾದಿಸುವುದು. ಸಮಾನತೆಯ ಆಶಯವೇ ಬಸವಣ್ಣನವರ ಶರಣ ತತ್ವದ ಮೂಲಗುರಿಯಾಗಿದೆ.
ಸಮಾನತೆಯ ಸವಾಲುಗಳು ಮತ್ತು ಇತ್ತೀಚಿನ ಬೆಳವಣಿಗೆಗಳು
ದುರದೃಷ್ಟವಶಾತ್, ಈ ಸಮಾನತೆಯ ವಿಚಾರದಲ್ಲಿ ಇತ್ತೀಚೆಗೆ ಕೆಲವು ಏರುಪೇರುಗಳು ಹುಟ್ಟಿಕೊಂಡಿವೆ. ಶರಣಬಸವೇಶ್ವರರ ಪರಂಪರೆಯು ಬಸವಾದಿ ಶರಣರ ಪರಂಪರೆಯಂತೆಯೇ ಸಮಾನತೆಗೆ ಮಹತ್ವ ನೀಡುತ್ತದೆ. ಕಲಬುರ್ಗಿಯ ಶರಣಬಸವೇಶ್ವರ ಮತ್ತು ಅವರ ಗುರು ಮರುಳಾರಾಧ್ಯರ ಮೂರ್ತಿಗಳು ಒಟ್ಟಿಗೆ ಗುಡಿಯಲ್ಲಿರುವುದು, ದೇಹಗಳು ಎರಡಾದರೂ ಜೀವ ಭಾವ ಒಂದೇ ಎಂಬ ಅವರ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದು ಅವರ ಪರಂಪರೆಯಲ್ಲಿ ಅಸಮಾನತೆ ಇಲ್ಲ ಎಂಬುದನ್ನು ತೋರಿಸುತ್ತದೆ.
ಅನುಭಾವಿ ಕವಿ ಕಡಕೋಳದ ಮಡಿವಾಳಪ್ಪನವರ ಲಿಂಗದೀಕ್ಷೆ ಪ್ರಕರಣದಲ್ಲಿ ಸಂಪ್ರದಾಯವಾದಿಗಳ ವಿರೋಧ ಎದುರಿಸಬೇಕಾದರೂ, ಅವರು ತಮ್ಮ ಗುರುಗಳ ಆದೇಶದಂತೆ ಲಿಂಗದೀಕ್ಷೆ ಪಡೆದರು. ಇದು ಗುರು-ಶಿಷ್ಯರ ನಡುವಿನ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ.
ಆದರೆ, ಇತ್ತೀಚೆಗೆ ೮ನೇ ಪೀಠಾಧಿಪತಿ ಶ್ರೀ ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದಾಗ, ಕೆಲವು ಸಂಪ್ರದಾಯವಾದಿಗಳು ಅವರ ಲಿಂಗ ಶರೀರದ ಮೇಲೆ ಕಾಲಿಟ್ಟು ಮಾಡಿದ ಕೆಲಸವು ಶರಣ ತತ್ವಕ್ಕೆ ಮಾಡಿದ ಮಹಾದ್ರೋಹವಾಗಿದೆ. ಯಾವ ತಲೆ ಮೇಲೆ ಯಾರು ಕಾಲಿಟ್ಟರೂ ಯಾರೂ ಉದ್ದಾರವಾಗುವುದಿಲ್ಲ. ತಮ್ಮ ಉದ್ದಾರ ಕೇವಲ ತಮ್ಮಿಂದಲೇ ಸಾಧ್ಯ ಎಂಬುದಕ್ಕೆ ಶರಣರ ಕಾಯಕ ಮತ್ತು ದಾಸೋಹ ತತ್ವಗಳೇ ಸಾಕ್ಷಿಯಾಗಿವೆ.
ದುಡಿಯದೆ ತಿನ್ನುವ ಮನೋಭಾವ ಹೊಂದಿರುವ ಸಂಪ್ರದಾಯವಾದಿಗಳು ಭಕ್ತರಲ್ಲೂ ಇದೇ ಸ್ವಭಾವವನ್ನು ಬಿತ್ತುತ್ತಿದ್ದಾರೆ. ದುಡಿಮೆಯನ್ನು ಬಿಟ್ಟು ಕೇವಲ ಪೂಜೆಗಳಿಗೆ ಒತ್ತು ನೀಡುವಂತೆ ಪ್ರೇರೇಪಿಸಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಶರಣ ಬಂಧುಗಳಾದ ನಾವು ಎಷ್ಟು ಕಾಲ ಇದನ್ನು ಸಹಿಸಬೇಕು?
ಸಕಲೇಶ ಮಾದರಸರು ಹೇಳಿದಂತೆ “ವಿಚಾರಕ್ಕಿಂತ ಸಹಾಯಗಳಿಲ್ಲ”. ನಾವು ವಿಚಾರಗಳನ್ನು ಅರಿತುಕೊಂಡಾಗ ಮಾತ್ರ ಇಂತಹ ಜಾಡ್ಯಗಳಿಂದ ಪಾರಾಗಬಹುದು.
ಇಂತಹ ಪದ್ಧತಿಗಳಿಂದ ನಾವೆಲ್ಲರೂ ಹೊರಗೆ ಬರಬೇಕು. ಸುಮ್ಮನಿದ್ದರೆ ಈ ಮೌಢ್ಯ ಸಂಪ್ರದಾಯಗಳು ಹೀಗೆ ಮುಂದುವರೆಯುತ್ತವೆ. ಬದಲಾವಣೆ ಬಯಸಿ ಸುಮ್ಮನಿದ್ದರೆ ಪ್ರಯೋಜನವಿಲ್ಲ, ಅರಿವು ಆಚರಣೆ ಎರಡು ಜೊತೆಯಲ್ಲಿ ಇದ್ದರೆ ಮಾತ್ರ ಸುಧಾರಣೆ ಗಳು ಸಾಧ್ಯ. ನಮ್ಮೆಲ್ಲರ ಪ್ರಯತ್ನ ಈ ನಿಟ್ಟಿನಲ್ಲಿ ಮುಂದುವರೆಯಲಿ
👍💯❤️👌💐🙏
ಮೂಢ ನಂಬಿಕೆಯ ಪರಮಾವಧಿ ಇದಾಗಿದೆ ಯಾರು ಇವರಿಗೆ ಈ ಹಕ್ಕನ್ನು ಕೊಟ್ಟವರು ಬಸವಣ್ಣನವರ ತತ್ವ ವಿರೋಧಿಗಳೇ ಇಂತಹ ಹೀನ ಕೃತ್ಯ ಮಾಡಬಹುದು ನಾಚಿಕೆಯ ಸಂಗತಿ
Dr Suresh Patil
ತಪ್ಪು ತಪ್ಪು ನಾವು ಎತ್ತ ಸಾಗುತ್ತಿದ್ದೇವೆ? ಇದು ಮೂರ್ಖತನದ ಪರಮಾವಧಿ. ಇದನ್ನು ಖಂಡಿಸುವುದಲ್ಲದೆ ಇಂಥವುಗಳನ್ನ ತಡೆಯುವುದು ನಮ್ಮ ಕರ್ತವ್ಯ
ಪೂಜಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ ಎಂಬುದನ್ನು ಅರಗಿಸಿಕೊಳ್ಳುವುದು ಅವರಿಗೆ ಕಷ್ಟ.
ಆ ರೀತಿ ಮಾಡಲು ಅವಕಾಶ ಮಾಡಿಕೊಟ್ಟವರಿಗೂ ಈ ವಿಚಾರ ತಿಳಿಯಬಾರದೇ ???
🥲
ದುಃಖದ ಸಂಗತಿ.
ಅನಿಷ್ಟ ಪದ್ಧತಿಯ ವಾರಸುದಾರರು ಲಿಂಗಾಯತಧರ್ಮದ ಹಾಗೂ ನಂಬಿದವರ ದ್ರೋಹಿಗಳು.
ಆ ಕೆಲಸ ಮಾಡಲು ಕರೆದವರಲ್ಲಿ ಬಸವತತ್ವ ಕೊರತೆಯನ್ನ ಕಾಣಬಹುದು.
ಈ ಶಿವಾಚಾರ್ಯ ಮಠದ ಸ್ವಾಮಿಗಳು ಇಂತಹ ಪದ್ಧತಿ ಅನುಸರಿಸಿ ಸಾಮಾನ್ಯ ಭಕ್ತರನ್ನು ದಾರಿತಾಪ್ಪಿಸುತ್ತಾರೆ.
ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಶರಣರ ಕಾಲಘಟ್ಟದಲ್ಲಿ ಪುರುಷ-ಸ್ತ್ರೀ, ಪ್ರಭು-ಪ್ರಜೆ, ಬ್ರಾಹ್ಮಣ-ಶೂದ್ರರಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದ ಸಂಸ್ಕೃತಿ ಇತ್ತು. ಈಗ, ಶೂದ್ರನಿಗೆ ದೇವನಾಗುವ ಅರ್ಹತೆಯಿದೆ. ಸ್ತ್ರೀಗೂ ಪುರುಷನಷ್ಟು, ಪ್ರಜೆಗೂ ಪ್ರಭುವಿನಷ್ಟು, ಶೂದ್ರನಿಗೂ ಬ್ರಾಹ್ಮಣನಷ್ಟು ಅಧಿಕಾರವಿದೆ ಎಂದು ಶರಣರು ವಾದಿಸಿದರು. ಇದರ ಫಲವಾಗಿ, ಹೊಸ ಸಮಾಜವೊಂದು ಸೃಷ್ಟಿಯಾಯಿತು ಎಂದರು.