ಶರಣರ ಶಕ್ತಿ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ರಾಷ್ಟ್ರೀಯ ಬಸವಸೈನ್ಯದಿಂದ ದೂರು

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ:

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಬಗ್ಗೆ ಅವಮಾನಕಾರಿಯಾಗಿ ಚಿತ್ರಿಸಿ ಬಿಡುಗಡೆಗೆ ಸಜ್ಜಾಗಿರುವ ಶರಣರ ಶಕ್ತಿ ಚಲನಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಬಾ.ಮಾ. ಹರೀಶ ಅವರಿಗೆ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹಾಗೂ ನ್ಯಾಯವಾದಿ ರವಿ ರಾಠೋಡ ಅವರು ದೂರನ್ನು ಸಲ್ಲಿಸಿ ವಿವಾದಾತ್ಮಕ ಶರಣರ ಶಕ್ತಿ ಚಲನಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಇತ್ತೀಚೆಗೆ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಕೆಲವು ಜನರಿಗೆ ಈ ಘೋಷಣೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಬಸವಾದಿ ಶರಣರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುತ್ತಿದ್ದಾರೆ.

ಚಲನಚಿತ್ರದಲ್ಲಿ ಬಸವಣ್ಣನವರ ಅಕ್ಕನವರಾದ ಶರಣೆ ಅಕ್ಕನಾಗಮ್ಮ ಅವರ ವೈವಾಹಿಕ ಜೀವನದ ಬಗ್ಗೆ ಅಸಭ್ಯವಾಗಿ ತೋರಿಸಿದ್ದಾರೆ. ಚಲನಚಿತ್ರದಲ್ಲಿ ಜಾತಿ-ಜಾತಿಗಳ ಮಧ್ಯೆ ದ್ವೇಷ ಬರುವ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ.

ಒಟ್ಟಾರೆ ಚಲನಚಿತ್ರದಲ್ಲಿ ಶರಣರ ನೈಜ ಜೀವನದ ಬಗ್ಗೆ ತಿರುಚಿ ಬಸವಾದಿ ಶರಣರಿಗೆ ಅವಮಾನಿಸಿದ್ದಾರೆ. ಕೂಡಲೇ ಶರಣರ ಶಕ್ತಿ ಚಲನಚಿತ್ರದಲ್ಲಿ ಇರುವ ವಿವಾದಾತ್ಮಕ ಅಂಶವನ್ನು ತೆಗೆದುಹಾಕಬೇಕು, ಅಲ್ಲಿಯವರೆಗೆ ಈ ಚಲನಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಮನವಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿರಾದಾರ ಹಾಗೂ ರಾಠೋಡ ಅವರು ತಿಳಿಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *