ತುಮಕೂರು ಬಸವ ಕೇಂದ್ರದಲ್ಲಿ ಅಕ್ಕನ ವೈಚಾರಿಕ ನಿಲುವುಗಳ ಚಿಂತನೆ

‘ವೈರಾಗ್ಯ ನಿಧಿಯಾಗಿದ್ದ ಅಕ್ಕಮಹಾದೇವಿ ಸಮಾಜಮುಖಿಯಾಗಿ ಹೊರಟರು’

ತುಮಕೂರು:

ಹನ್ನೆರಡನೇ ಶತಮಾನದಲ್ಲಿ ಬದುಕಿದ್ದ ಶರಣರು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಬಿಜ್ಜಳನ ರಾಜಪ್ರಭುತ್ವವನ್ನೆ ತೃಣವಾಗಿ ಕಂಡು ಶೋಷಿತರ ದನಿಯಾಗಿ ಹೋರಾಟ ನಡೆಸಿ, ತಮ್ಮ ವಿಚಾರಧಾರೆಗಳನ್ನು ವಚನಗಳ ಮೂಲಕ ತಿಳಿಸಿದರು. ಅವುಗಳನ್ನು ಜೀವನದಲ್ಲಿ ಪಾಲಿಸಬೇಕಾದಂತಹ ಅನಿವಾರ್ಯತೆ ಇಂದು ಅತಿ ಅಗತ್ಯವಾಗಿದೆ. ಅವರ ವಿಚಾರಧಾರೆಗಳು ಮನುಕುಲದ ಮಂಗಳ ಸೌಭಾಗ್ಯವೆನಿಸಿವೆ ಎಂದು ಅರಸೀಕೆರೆ ತಾಲ್ಲೂಕು ಬಂದೂರು ವಿರಕ್ತಾಶ್ರಮದ ಪೀಠಾಧಿಪತಿ ಪೂಜ್ಯ ಮಹಾಲಿಂಗ ಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಬಸವಕೇಂದ್ರ ಮತ್ತು ಅನುಭವ ಮಂಟಪ ವತಿಯಿಂದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಶರಣೆ ಲಲಿತಮ್ಮ ಟಿ.ಸಿ. ಮೋಹನ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೈರಾಗ್ಯ ನಿಧಿ ಎನಿಸಿದ್ದ ಅಕ್ಕಮಹಾದೇವಿ ಸಮಾಜಮುಖಿಯಾಗಿ ಹೊರಟರು, ಅಂದಿಗೂ ಇಂದಿಗೂ ಮಹಾದೇವಿಯಕ್ಕನ ವೈಚಾರಿಕ ನಿಲುವು ಔಪಚಾರಿಕವಾಗಿಲ್ಲ ಪ್ರಚಾರ ಪ್ರಿಯವಾಗಿಲ್ಲ. ನಿಂದನೆ ಹಾಗೂ ನಿವೇದನೆಯ ಮೂಲಕ ಅಕ್ಕನ ವೈಚಾರಿಕ ನಿಲುವುಗಳು ಜಗತ್ತಿಗೇ ಆದರ್ಶದ ಪಾಠವನ್ನು ಹೇಳಿವೆ ಎಂದರು.

ಮಹಾದೇವಿಯಕ್ಕನ ಹೋರಾಟ ಸ್ತ್ರೀ ಸಮುದಾಯದ ಕುರಿತಾದ ಚಿಂತನೆಯ ದಿಕ್ಕನ್ನೇ ಬದಲಿಸಿತು. ಅವಳ ವಚನಗಳು ಕಾವ್ಯದ ದೃಷ್ಟಿಯಿಂದಲೂ ಅಲಂಕಾರ ದೃಷ್ಠಾಂತಗಳಿಂದ ಕೂಡಿದ್ದು ಸಂಕೀರ್ಣವಾಗಿ ಮತ್ತು ಸಂಗತದಿಂದ ಕೂಡಿವೆ. ನಮಗೆ ಸಿಕ್ಕಿರುವ ಅಕ್ಕನ ಒಂದೊಂದು ವಚನಗಳೂ ಅನರ್ಘ್ಯ ರತ್ನಗಳಂತಿವೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಇತಿಹಾಸ ಸಂಶೋಧಕ ಡಾ. ಡಿ ಎನ್. ಯೋಗೀಶ್ವರಪ್ಪ ಮಾತನಾಡಿ, ಮಹಾದೇವಿಯಕ್ಕ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದು ಇಲ್ಲದ ಹಾಗೆ. ಅದರೆ ಜಂಜಡದಲ್ಲಿ ಸಿಲುಕದೆ ತಾವರೆಯ ಎಲೆಯ ಮೇಲಿನ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವಳು. ರಾಜಪ್ರಭುತ್ವ ಮತ್ತು ಸಾಮಾಜಿಕ ಪ್ರಭುತ್ವ ಎರಡನ್ನೂ ಏಕಕಾಲಕ್ಕೆ ಧಿಕ್ಕರಿಸಿ ಬೆಳಗಿನೊಳಗಣ ಮಹಾಬೆಳಗಾಗಿ ಜೀವಿಸಿದ ಮನುಕುಲದ ಶ್ರೇಷ್ಠ ಮಾದರಿಯೊಂದನ್ನು ಸೃಷ್ಟಿಸಿದವಳು ಎಂದರು.

ಸಾಹಿತಿಗಳಾದ ಡಾ. ಬಿ. ಸಿ. ಶೈಲಾನಾಗರಾಜು ಮಾತನಾಡಿ, ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಅಲೌಕಿಕ ಪತಿಯನ್ನಾಗಿ ಸ್ವೀಕರಿಸಿದ್ದ ಮಹಾದೇವಿಯಕ್ಕ, ಕನ್ನಡದ ಮೊದಲ ಲೇಖಕಿಯಾಗಿ ವಚನಗಳ ರಚನೆಯ ಜೊತೆಗೆ ಯೋಗಾಂಗ ತ್ರಿವಿಧಿಗಳಿಂದ ಕೂಡಿರುವ ಅವರ ಕೃತಿಯನ್ನು ಸ್ಪರ ವಚನಗಳೆಂದು ಕರೆಯಲಾಗಿದೆ. ಅಕ್ಕನ ಪ್ರತಿಯೊಂದು ವಚನಗಳಲ್ಲಿಯೂ ಸ್ತ್ರೀ ಸಂವೇದನೆಯ ಅನೇಕ ವಿಚಾರಧಾರೆಗಳು ಇರುವುದನ್ನು ಗುರುತಿಸಬಹುದು ಎಂದರು.

ವೇದಿಕೆಯಲ್ಲಿ ಶರಣತತ್ವ ಚಿಂತಕರಾದ ಡಾ. ವಿಜಯಕುಮಾರ ಕಮ್ಮಾರ, ಗುರುನಾಥ ಬೂದಿಹಾಳೆ, ಚಂದ್ರಶೇಖರ ನಾಗಭೂಷಣ, ರಾಮಕೃಷ್ಣಪ್ಪ ಹಾಜರಿದ್ದರು.

ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ವಚನನೃತ್ಯ, ಅನುಭವ ಮಂಟಪದ ಮಹಿಳೆಯರಿಂದ ಶರಣರ ವೇಷ ಭೂಷಣ ಕಾರ‍್ಯಕ್ರಮಗಳು ನಡೆದವು.

ಬಸವ ಕೇಂದ್ರದ ಕಲ್ಪನಾ ಉಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ನಿರಂಜನ ನಿರೂಪಿಸಿದರು. ಮಂಗಳಾ ಸದಾನಂದ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *

ಕಾರ್ಯದರ್ಶಿ, ಬಸವಕೇಂದ್ರ, ತುಮಕೂರು