ಅಣ್ಣಿಗೇರಿ
ಮನುಕುಲದ ಉದ್ಧಾರಕ ಬಸವಣ್ಣನವರ ನೇತೃತ್ವದ ಶರಣ ಶರಣೆಯರು ತಮ್ಮ ವಚನಗಳ ಮೂಲಕ ಅನುಭಾವ ದರ್ಶನ ಮಾಡಿಸಿ, ಆಂತರಿಕವಾಗಿ ಸಡಿಲವಾಗಿದ್ದ ಸಮಾಜವನ್ನು ಸದೃಢಗೊಳಿಸಿ ಜ್ಞಾನದ ಬೆಳಕಿನ ದಿವ್ಯ ಪ್ರಭೆಯಲ್ಲಿ ಅರಳಿದ ಕುಸುಮಗಳಾದರು ಎಂದು ಉಪನ್ಯಾಸಕಿ ಡಾ. ಶಾಂತಾ ಲಕ್ಷ್ಮೇಶ್ವರ ಬಣ್ಣಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಣ್ಣಿಗೇರಿ ತಾಲೂಕು ಘಟಕ ಮತ್ತು ಶಲವಡಿಯ ಬಸವೇಶ್ವರ ಸೇವಾ ಹಾಗೂ ಸಾಂಸ್ಕೃತಿಕ ಕಲಾಸಂಘ ವತಿಯಿಂದ ಶಲವಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಹೊಸಕೇರಿ ವೀರಪ್ಪ ಹಾಗೂ ಶಕುಂತಲಾ ದೇವಿ ದತ್ತಿನಿದಿ ಕಾರ್ಯಕ್ರಮದಲ್ಲಿ ‘ಶಿವಶರಣರ ವಚನ ಸಾಹಿತ್ಯ ಕುರಿತು’ ಅವರು ಮಾತನಾಡಿದರು.
ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಡಾ. ಡಿ ಎಂ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ, ಲಿಂಗ, ವರ್ಗ, ವರ್ಣಗಳ ಬೇಧಭಾವ ಮಾಡುತ್ತಿದ್ದ ಮೇಲ್ವರ್ಗದ ಜನರ ದಬ್ಬಾಳಿಕೆ, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಮೌಢ್ಯದ ವಿರುದ್ಧ ತಲೆ ಎತ್ತಿ ನಿಲ್ಲುವಂತೆ ಮಾಡಿದ ವಚನ ಧರ್ಮ ಸರ್ವಕಾಲಕ್ಕೂ ಶ್ರೇಷ್ಠ ಎಂದರು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಒಂದೇ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೂ ಈ ಬದುಕು ಸಾರ್ಥಕ ಎಂದು ಸಮಾರಂಭದ ಸಾನಿಧ್ಯ ವಹಿಸಿದ್ದ ಶಲವಡಿ ಗುರುಶಾಂತೇಶ್ವರ ಸ್ವಾಮೀಜಿ ಹಾಗೂ ಅಡ್ನೂರು ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ದತ್ತಿದಾನಿ ಡಾ. ಬಸವರಾಜ ಹೊಸಕೇರಿ ಅವರನ್ನು ಸನ್ಮಾನಿಸಲಾಯಿತು. ಪ್ರೊ ಸಿ ಎಸ್ ಹೊಸಮಠ ಅಧ್ಯಕ್ಷತೆ ವಹಿಸಿದ್ದರು. ಶಸಾಪ ತಾಲೂಕು ಘಟಕದ ಅಧ್ಯಕ್ಷ ಎನ್ ಎಂ ಯಲಬುರ್ಗಿ ಪ್ರಾಸ್ತವಿಕವಾಗಿ ಮಾತನಾಡಿದರು.

ಚಂದ್ರಶೇಖರ ಸುರಕೋಡ, ವೀರೇಶ ಶಾನುಭೋಗರ, ಕಿರಣ ಬೂದಿಹಾಳ, ಲಿಂಗನಗೌಡ ಕುರಹಟ್ಟಿ, ಪಾಂಡುರಂಗ ಬಿರಸಲ್ ಮತ್ತಿತರರು ಉಪಸ್ಥಿತರಿದ್ದರು. ಪಿ ಕೆ ಕೊಕಾಟೆ ನಿರೂಪಿಸಿದರು. ವಿಜಯ ಮಹಾಂತೇಶ ಹೊಸಕೇರಿ ಸ್ವಾಗತಿಸಿದರು. ಎಂ ಕೆ ಹುರಕಡ್ಲಿ ವಂದಿಸಿದರು.