ದೇವದುರ್ಗ
12ನೇ ಶತಮಾನದ ಬಸವಾದಿ ಶರಣರು ಮಠ ಕಟ್ಟಲಿಲ್ಲ, ಮಂದಿರ ಕಟ್ಟಲಿಲ್ಲ ಅನುಭವ ಮಂಟಪ ಕಟ್ಟಿದರು. ಆ ಅನುಭವ ಮಂಟಪದ ಮುಖಾಂತರ ಹೆಣ್ಣುಮಕ್ಕಳಿಗೆ ಸಾಮಾಜಿಕವಾಗಿ ಸಮಾನ ಅವಕಾಶ ಮಾಡಿಕೊಟ್ಟರು. ವರ್ಗ, ವರ್ಣ, ಜಾತಿರಹಿತವಾಗಿ ಎಲ್ಲ ಜನರಿಗೂ ಮಂಟಪದಲ್ಲಿ ಅವಕಾಶ ಮಾಡಿಕೊಟ್ಟು, ಅವರಿಂದ ವಚನಗಳು ರಚನೆಯಾಗುವಂತೆ ಮಾಡಿ, ಸಮಾಜದಲ್ಲಿ ಮಹತ್ತರವಾದ ಬದಲಾವಣೆ ತಂದರು ಎಂದು ಚನ್ನಬಸವ ಶಿಕ್ಷಕರು ಸಿರವಾರ ಹೆಗ್ಗಡದಿನ್ನಿ ಹೇಳಿದರು.
67ನೇ ಮಾಸಿಕ ಬಸವತತ್ವ ಚಿಂತನಗೋಷ್ಠಿಯು ದೇವದುರ್ಗ ತಾಲೂಕು, ನೀಲಾಂಬಿಕ ಬಸವಯೋಗಾಶ್ರಮ ಜಾಗೀರ ಜಾಡಲದಿನ್ನಿ ಗ್ರಾಮದಲ್ಲಿ ನಡೆದು, ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶರಣರು ಎಲ್ಲರಿಗೂ ಸಮಬಾಳು, ಸಮಪಾಲು ಎಂಬ ಮಹಾನ್ ತತ್ವವನ್ನು ಮೊದಲಿಗೆ ಜಾರಿಗೆ ತಂದರೆಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಶ್ರೀ ಮೈನುದ್ದೀನ್ ಬೂದಿನಾಳ ಅವರು ಮಾತನಾಡಿ, 12ನೇ ಶತಮಾನದ ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಹೀಗಾಗಿ ನಡೆ ನುಡಿಯಲ್ಲಿ ಒಂದೇ ಆಗಿದ್ದ ಶರಣರು ನಮಗೆಲ್ಲರಿಗೂ ಆದರ್ಶಪ್ರಾಯರು ಎಂದು ಹೇಳಿದರು.
ಅಭಿಷೇಕಸ್ವಾಮಿ ಕರಡಿಗುಡ್ಡ ಅವರು ಮಾತನಾಡಿ, ಬಸವಾದಿ ಶರಣರು ಕಾಯಕವೇ ಕೈಲಾಸ ವೆಂದರು. ಕಾಯಕವೇ ಬದುಕಿನ ಜೀವಾಳವೆಂದು ಕಲಿಸಿಕೊಟ್ಟರು. ಬಸವಣ್ಣನವರು ನಮ್ಮ ಕರ್ನಾಟಕದ ಬಸವನಬಾಗೇವಾಡಿಯಲ್ಲಿ ಜನಿಸಿ, ಬಸವಕಲ್ಯಾಣವನ್ನು ಕಾರ್ಯಕ್ಷೇತ್ರ ಮಾಡಿಕೊಂಡದ್ದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವಯೋಗಾಶ್ರಮದ ಶ್ರೀ ವೀರಭದ್ರ ಸ್ವಾಮಿಗಳು ಮಾತನಾಡುತ್ತ, ಅಷ್ಟಾವರಣ , ಪಂಚಾಚಾರ, ಷಟಸ್ಥಲಗಳ ಬಗ್ಗೆ ಹಾಗೂ ಬಸವಾದಿ ಶಿವಶರಣರು ನಡೆದುಬಂದ ದಾರಿಯ ಬಗ್ಗೆ ಸಮಗ್ರವಾಗಿ ಹೇಳಿದರು.
ಚನ್ನಬಸವ ಶಿಕ್ಷಕರು, ಅಭಿಷೇಕ ಸ್ವಾಮಿ ಹಾಗೂ ಮೈನುದ್ದೀನ್ ಅವರುಗಳನ್ನು ನೀಲಾಂಬಿಕ ಬಸವಯೋಗಾಶ್ರಮದ ವತಿಯಿಂದ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ಅಕ್ಕಮಹಾದೇವಿ ಗೈದರು. ಪ್ರಾಸ್ತಾವಿಕ ನುಡಿಯನ್ನು ಎಂ. ವಿನೋದ್ ಪಾಟೀಲ ಮಳ್ಳಿ ಅತ್ತನೂರು ಆಡಿದರು. ನಿರೂಪಣೆಯನ್ನು ಬೆಟ್ಟಪ್ಪ ಕಸ್ತೂರಿ ಅತ್ತನೂರ, ವಂದನಾರ್ಪಣೆಯನ್ನು ಆನಂದ ಪಾಟೀಲ ಹೊಸಮನಿ ಶಾಖಾಪುರ ಮಾಡಿದರು.
ಜಾಗೀರ್ ಜಾಡಲದಿನ್ನಿ, ದೇವತಗಲ್ಲು, ಹಿರೇನಗನೂರು, ಅರಕೇರಾ, ಅತ್ತನೂರು, ಶಾಖಾಪುರ, ಸಿರವಾರ ಮುಂತಾದ ಗ್ರಾಮಗಳಿಂದ ಶರಣ, ಶರಣೆಯರು ಆಗಮಿಸಿದ್ದರು.