ಬೆಂಗಳೂರು
ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ 1494 ಎಕರೆ 38 ಗುಂಟೆ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯ ಸ್ಮರಣೆಯ ದಿನವಾದ ಜ.2ರಂದು ವಿಜಯಪುರದಲ್ಲಿ ನೂತನ ಹೆಸರಿನ ಫಲಕವನ್ನು ಅನಾವರಣ ಮಾಡಲಾಗುವುದು ಎಂದು ಹೇಳಿದರು.
ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಮಾನವ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕು ಎಂದು ಹೇಳುತ್ತಿದ್ದರು. ಅವರ ಈ ನುಡಿಗಳು, ಇಂದಿಗೂ, ಎಂದೆಂದಿಗೂ ಸಾರ್ವಕಾಲಿಕವಾಗಿದ್ದು ಎಂದು ತಿಳಿಸಿದರು.
ಶ್ರೀಗಳ ಹೆಸರಿಟ್ಟರೆ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ನೆರವಾಗಲಿದೆ. ಆದಿವಾಸಿಗಳ ದೈನಂದಿನ ಬದುಕಿನ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.
ಪ್ರಸ್ತುತ ಸುಮಾರು 1494 ಎಕರೆ 38 ಗುಂಟೆ ವಿಸ್ತೀರ್ಣದ ಅರಣ್ಯವಿದೆ. ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಮತ್ತು ಸಸ್ಯ ಸಂಕುಲದಿಂದ ಕೂಡಿರುವ ಶ್ರೀಮಂತ ಜೀವವೈವಿಧ್ಯತೆಯ ಈ ತಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವೀಧ್ಯ ಪಾರಂಪರಿಕ ತಾಣ ಎಂದು ಜೀವವೈವಿಧ್ಯ ಕಾಯಿದೆ 2022ರ ಸೆಕ್ಷನ್ 37ರನ್ವಯ ಮರು ನಾಮಕರಣ ಮಾಡಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ಐತಿಹಾಸಿಕ ಮಮದಾಪುರ ಕೆರೆ ಹಾಗೂ ಅಲ್ಲಿರುವ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರಕೃತಿ ಪ್ರೇಮಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದ್ದರು.