ಕಲಬುರಗಿ
ಬಹುತ್ವದ ಆಯಾಮದ ಕ್ರಾಂತಿ, ಚಳವಳಿ, ಸಮಾಜ ಒಪ್ಪಿಕೊಂಡ ಶಿವನ ಸೊಮ್ಮು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಎರಡನೇ ಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕು, ಮಿಕ್ಕ, ಶಿವನ ಸೊಮ್ಮು, ಇಂದಿಗೆ ನಾಳಿಂಗೆ ಬೇಕೆಂದನಾದೊಡೆ ನಿಮ್ಮಾಣೆ ಎನ್ನುವ ವಚನಗಳು ಪ್ರಜಾಪ್ರಭುತ್ವದ ವಿಚಾರಗಳನ್ನು ಒಳಗೊಂಡಿತ್ತು ಎಂದು ಹೇಳಿದರು.
ಸದ್ವಿನಿಯೋಗದ ಮಾರ್ಗದಲ್ಲಿ ಶಿವನ ಸೊಮ್ಮು ಉಪಯೋಗಿಸಬೇಕು. ನೇಮದ ಕೂಲಿಯಿಂದ ಪಡೆದ ಹಣವನ್ನು ದಾಸೋಹ ಮಾಡುವುದು ಶಿವನ ಸೊಮ್ಮು. ಸಮಾಜದ ಸಂಪತ್ತು ಎಂದು ಶರಣರು ಕರೆದರು ಎಂದರು.
ಶರಣರು ಜಾತಿ ಅಸ್ಪೃಶ್ಯತೆಗಿಂತ ಭೌದ್ಧಿಕ ಅಸ್ಪೃಶ್ಯತೆಯನ್ನು ಸಹ ಮೀರಿದ್ದರು ಎಂದು ತಿಳಿಸಿದರು.
ಗೋತ್ರನಾಮವ ಬೆಸಗೊಂಡಡೆ ವಿಷಯ ಕುರಿತು ಧಾರವಾಡದ ಪ್ರಾಧ್ಯಾಪಕಿ ಡಾ. ಅನಸೂಯಾ ಕಾಂಬಳೆ ಮಾತನಾಡಿ, ಬೌದ್ಧಿಕ ರಾಜಕಾರಣದ ಭಂಜಕರು ಬಸವಣ್ಣನವರು, ಎಲ್ಲರೂ ಮನುಷ್ಯರು ಎಂದು ಹೇಳಿಕೊಟ್ಟರು. ವಚನಕಾರರು ಪರಮಾತ್ಮನ ಚಿಂತನೆಗೆ ಹೆಚ್ಚು ಮಹತ್ವ ಕೊಡದೆ ಪದಾರ್ಥ ಚಿಂತನೆ ಮಾಡಿದರು ಎಂದು ಹೇಳಿದರು.
ಅಂತ್ಯಜರೆಂದು ಕರೆಯಲ್ಪಡುವವರಿಗೆ ಕಾಯಕದ ಸ್ವಾಭಿಮಾನ ಮೂಡಿಸಿದ ಬಸವಣ್ಣನವರು, ನಿಮ್ಮ ಗೋತ್ರವೇನು ಎಂದು ಪ್ರಶ್ನಿಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದರು ಎಂದು ತಿಳಿಸಿದರು.
ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಡಾ. ಮೀನಾಕ್ಷಿ ಬಾಳಿ, ಡಾ.ಜಯದೇವಿ ಗಾಯಕವಾಡ, ಸೋಮಶೇಖರ ಗಾಂಜಿ, ಶಿವಾನಂದ ಮಠಪತಿ, ಶಾರದಾ ಶಿವಲಿಂಗಸ್ವಾಮಿ, ಬಸವರಾಜ ಐನೋಳಿ, ಡಾ. ತೀರ್ಥಕುಮಾರ ಪಾಟೀಲ, ಪ್ರೊ. ಶಿವರಾಜ ಪಾಟೀಲ ಇತರರು ವೇದಿಕೆಯಲ್ಲಿದ್ದರು.
ಡಾ. ಶಾಮಾಲಾ ಸ್ವಾಮಿ ನಿರೂಪಿಸಿದರು. ಡಾ.ಸುನಿತಾ ಗುಮ್ಮಾ ಸ್ವಾಗತಿಸಿದರು. ಬಾಬುರಾವ ಪಾಟೀಲ ವಂದಿಸಿದರು.