ಮುರಗೋಡದಲ್ಲಿ ಯಶಸ್ವಿಯಾಗಿ ನಡೆದ ಒಂದು ದಿನದ ಶಿವಯೋಗ ಕಾರ್ಯಾಗಾರ

ಪ್ರೇಮಕ್ಕ ಅಂಗಡಿ
ಪ್ರೇಮಕ್ಕ ಅಂಗಡಿ

ಬೈಲಹೊಂಗಲ :

ತಾಲೂಕಿನ ಮುರಗೋಡ ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಲ್ಲಿ ಒಂದು ದಿನದ ಶಿವಯೋಗ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದ ಸಾನಿಧ್ಯ ವಹಿಸಿ,  ಧ್ವಜಾರೋಹಣ ಮಾಡಿ ಆಶೀರ್ವಚನ ನೀಡಿದ ನೀಲಕಂಠ ಶ್ರೀಗಳು, ಶಿವಯೋಗ ಸಾಧಿಸಿದ ಶತಮಾನದ ಶಿವಯೋಗಿ ಮಹಾಂತ ಶ್ರೀಗಳು ಶಿವಯೋಗದ ಶಿಖರವಾಗಿದ್ದರು ಎಂದರು.

ಸರ್ವರೂ ಶಿವಯೋಗ ಮಾರ್ಗವನ್ನು ಅನುಸರಿಸಿ ಶಿವಯೋಗಿಗಳಾಗಲು ಕರೆ ನೀಡಿ, ಭಕ್ತರಿಗೆ ಲಿಂಗ, ರುದ್ರಾಕ್ಷಿ, ವಿಭೂತಿ ಧಾರಣೆ ಮಾಡಿದರು.

ಕಾರ್ಯಕ್ರಮ ನೇತೃತ್ವ ವಹಿಸಿದ ಚಿಕ್ಕೋಡಿಯ ಡಾ. ದಯಾನಂದ ನೂಲಿ ಅವರು ಶಿವಯೋಗ ಹಾಗೂ ಶತ ಏಕದ ನೆಲಮನೆ ವಿಷಯ ಕುರಿತು ವೈಜ್ಞಾನಿಕ ಪ್ರಾತ್ಯಕ್ಷಿಕೆ ಜೊತೆಗೆ ಶರಣರ ವಚನಗಳಾಧಾರಿತ ಶಿವಯೋಗ ಮಾರ್ಗವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಲಿಂಗಾಯತ ಧರ್ಮ ಅನ್ಯ ದೈವಂಗಳ ಪೂಜೆ ನಿರಾಕರಿಸಿ,  ಶಿವಯೋಗವನ್ನು ಸರಳೀಕರಿಸಿ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಎಲ್ಲರ ಅಂಗಕ್ಕೆ ಧರಿಸಿ, ಹುಟ್ಟಿದ ಪ್ರತಿಯೊಬ್ಬ ಮಾನವ ಶಿವನಾಗುವ ಗುರು, ಲಿಂಗ, ಜಂಗಮ ಗುಪ್ತ ಮಾರ್ಗವನ್ನು ಜಗಕ್ಕೆ ಸಾರಿದೆ.

ಶತಮಾನಗಳಿಂದ ಅಂಟಿಕೊಂಡಿದ್ದ ದೇವರ ಹೆಸರಿನಲ್ಲಿ ನಡೆಯುವ ಕಂದಾಚಾರ,  ಮೌಡ್ಯತೆಗಳಿಂದ ಹೊರಬರಲು ಕರೆ ನೀಡಿ, ವರ್ಗ, ವರ್ಣ, ಲಿಂಗ ಭೇದವನ್ನು ಅಳಿಸಿ ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವನ್ನು ಬಯಸಿದೆ. ಶಿವಯೋಗ ಮಾರ್ಗ ಮಾನವನ ಶಾರೀರಿಕ, ಮಾನಸಿಕ ಸ್ವಾಸ್ಥ್ಯ  ಕಾಪಾಡುವುದರ ಜೊತೆಗೆ ಶಾರೀರಿಕ ಭಾದೆಗಳಿಗೆ, ರೋಗ ನಿರೋಧಕ ಶಕ್ತಿ ಆಗಿದೆ. ದೇಹ, ಮನ, ಭವ ಬಾದೆಗಳಿಗೆ ಸಂಜೀವಿನಿಯಾಗಿದೆ.

ಪ್ರಚಲಿತ ಭಯಾನಕ ರೋಗಗಳಿಗೂ ಶರಣರ ಶಿವಯೋಗದಲ್ಲಿ ಉತ್ತರವಿದೆ, ಶತಾಯುಷಿ ಮರುಗೋಡದ ಮಹಾಂತ ಶಿವಯೋಗಿಗಳು  ಶಿವಯೋಗ ಸಾಧಿಸಿ ಜನನ ಮರಣಗಳ ಅತೀತವಾದ ಶಿವಶಕ್ತಿಯಿಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದರೆಂದರು.

ಸಾಮೂಹಿಕ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನೆರವೇರಿಸಿ ಬ್ರಹ್ಮಾಂಡ ಹಾಗೂ ಪಿಂಡಾಂಡ ವಿಷಯ ಕುರಿತು ಮಾತನಾಡಿದ ಪತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಬ್ರಹ್ಮಾಂಡದ ವಿಶ್ವ ಚೈತನ್ಯಶಕ್ತಿ, ಪಿಂಡಾಂಡದ  ವ್ಯಕ್ತಿ  ಚೈತನ್ಯಶಕ್ತಿ ಒಂದೆ ಆಗಿದ್ದು, ಅವಿನಾಭಾವ ಸಂಬಂಧ ಹೊಂದಿದೆ.

ಸಾಮರಸ್ಯದ ಕುರುಹಾದ ಇಷ್ಟಲಿಂಗ ಪೂಜೆ ಹಾಗೂ ಮಂತ್ರದ ಅನುಸಂಧಾನದಿಂದ ಲಿಂಗಾಂಗ ಸಾಮರಸ್ಯ ಸಾಧಿಸಿ ಮಾನವನ ಆಂತಿಕ ಗುರಿ ಮುಕ್ತಿ, ಮೋಕ್ಷ ಸಾಧಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕರೆ ನೀಡಿದರು.

ಶ್ರೀಮಠದ ಧರ್ಮದರ್ಶಿಗಳಾದ ಅಶೋಕ ಶೆಟ್ಟರ ಮಾತನಾಡಿ, ಶ್ರೀಮಠದಲ್ಲಿ ನೀಲಕಂಠ ಶ್ರೀಗಳು ತ್ರಿಕಾಲ ಲಿಂಗ ಪೂಜೆಯ ಮುಖಾಂತರ ಭಕ್ತರಿಗೆ  ಶಿವಯೋಗದ ದರ್ಶನ ಮಾಡಿಸುತ್ತಿದ್ದಾರೆ. ಭಕ್ತರು  ಸದುಪಯೋಗ ಪಡೆಯುವಂತೆ ಕರೆ ನೀಡಿದರು.

ಶ್ರೀಮಠದ ಮೇಲ್ವಿಚಾರಕ ಸಂತೋಷ ಹಿರೇಮಠ ಮಾತನಾಡಿ, ಭಕ್ತರನ್ನೆ ಶ್ರೀಮಠದ ಆಸ್ತಿಯಾಗಿಸಿ ಶಿವಯೋಗದಿಂದ ಭಕ್ತರನ್ನು ಉದ್ದರಿಸಿದ್ದಾರೆಂದರು.

ಬಸವರಾಜ ಬ್ಯಾಳಿ ಮಾತನಾಡಿ, ನಾಡಿನ ದಾರ್ಶನಿಕರು, ಸಂತರು, ಮಹಾಂತರು, ಮಹಾಂತ ಶಿವಯೋಗಿಗಳಿಂದ ಶಿವಯೋಗವನ್ನು ಅರಿತಿದ್ದಾರೆಂದರು.

ಅನುಭಾವಿ ಶಿವಾನಂದ ಅರಭಾವಿ  ಮಾತನಾಡಿ, ಸ್ವಾನುಭಾವದ ಅಂತರ್ಜಾಲ ವೇದಿಕೆ ನಿರಂತರ ಶಿವಯೋಗದ ತರಬೇತಿ ಬಿತ್ತರಿಸುತ್ತಿದೆ ಎಂದರು.

ಡಾ. ಬಸವರಾಜ ಮಹಾಂತಶೆಟ್ಟಿ, ಹಾಲಯ್ಯ ಶಾಸ್ತ್ರಿ, ಮೃತ್ಯುಂಜಯಸ್ವಾಮಿ ಹಿರೇಮಠ, ವಿದ್ಯಾ ರಾಮಣ್ಣವರ ಉಪಸ್ಥಿತರಿದ್ದರು.

 ಶಿಕ್ಷಕ ಮಡಿವಾಳಪ್ಪ ಸಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿವಯೋಗ ಕಾರ್ಯಗಾರದ ದ್ಯೇಯೋದ್ಧೇಶಗಳನ್ನು ತಿಳಿಸಿದರು.

ಶಿಭಿರಾರ್ಥಿಗಳಾದ ಕಸ್ತೂರಿ ಹೂಲಿ, ಶೋಭಾ ಹಂಪಿಹೊಳಿ, ಮಲ್ಲೂರಿನ ಈರಣ್ಣ ಬಾನಿ ಅನೇಕರು ಶಿಬಿರ ಕುರಿತಾದ ಅನಿಸಿಕೆ ಹಂಚಿಕೊಂಡರು.

ಹೊಸೂರು, ಚಿಕ್ಕೊಪ್ಪ, ಮಾಟೊಳ್ಳಿ, ಇಂಗಳಗಿ, ಕೋರಿಕೊಪ್ಪ, ಒಕ್ಕುಂದ, ಬೈಲಹೊಂಗಲ, ಬೆಳಗಾವಿ, ಸವದತ್ತಿ, ಗೋಕಾಕಗಳಿಂದ ಶಿಬಿರಾರ್ಥಿಗಳಾಗಿ ಬಂದಿದ್ದರು. ಮುರುಗೋಡ ಶ್ರೀ ಮಠದ ಧರ್ಮದರ್ಶಿಗಳು, ಅಕ್ಕನ ಬಳಗ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ, ಶ್ರೀಮಠದ ಪಾಠಶಾಲಾ ವಿದ್ಯಾರ್ಥಿಗಳು, ನೂರಾರು ಶರಣ ಶರಣೆಯರು ಭಾಗವಹಿಸಿದ್ದರು.

 ಚಿಕ್ಕೊಪ್ಪದ ಶಕುಂತಲಾ ಚೆನ್ನಪ್ಪ ನರಸನ್ನವರ ದಂಪತಿ ಬಸವಪೂಜೆ ಯು ನೆರವೇರಿಸಿದರು. ಮರುಗೋಡದ ಬಸವ ಮಹಾಮನೆ ಹಾಗೂ ಬೈಲಹೊಂಗಲದ ಮುಕ್ತಾಯಕ್ಕ ಬಳಗದ ಸದಸ್ಯರು ಪ್ರಾರ್ಥಿಸಿದರು. ಪುಂಡಲೀಕ ಇಂಗಳಗಿ ಬಸವ ಧ್ವಜಗೀತೆ ಹಾಡಿದರು. ಹೊಸೂರಿನ ಬಸವರಾಜ ಹುಬ್ಬಳ್ಳಿ ನಿರೂಪಿಸಿದರು. ಈರಣ್ಣ ಯರಡಾಲ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *