ಸೊರಬ
ಶಿರಸಿಯ ಶರಣೆ ಅಕ್ಷತಾ ಸಾಲಿಮಠ ಮತ್ತು ಹಾನಗಲ್ ತಾಲೂಕಿನ ಸೋಮಸಾಗರದ ಶರಣ ವೀರೇಶ ಹಿರೇಮಠ ಅವರ ನಿಜಾಚರಣೆಯ ಕಲ್ಯಾಣ ಮಹೋತ್ಸವವು ಭಾನುವಾರ ನಡೆಯಿತು.
ಕಾರ್ಯಕ್ರಮ ಶಿರಸಿ ತಾಲೂಕಿನ ಬನವಾಸಿಯ ಅಲ್ಲಮಪ್ರಭು ಹೊಳೆಮಠದಲ್ಲಿ ಪೂಜ್ಯ ಚನ್ನಬಸವಾನಂದ ಮಹಸ್ವಾಮಿಗಳು, ಬಸವಧಾಮ ಆಶ್ರಮ ಶಿವಪುರ-ಉಳವಿ, ಇವರ ಸಾನಿಧ್ಯದಲ್ಲಿ ಜರುಗಿತು. ಪೂಜ್ಯ ನಾಗಭೂಷಣ ಮಹಾಸ್ವಾಮಿಗಳ ನೇತೃತ್ವ ವಹಿಸಿದ್ದರು.

ಪೂಜ್ಯ ನಾಗಭೂಷಣ ಮಹಾಸ್ವಾಮಿಗಳು ನೂತನ ವಧುವರರು ಹಾಗೂ ಆಗಮಿಸಿದ ಬಂಧು-ಮಿತ್ರರನ್ನು ಸ್ವಾಗತಿಸಿ ನಮ್ಮದಲ್ಲದ ಸಂಪ್ರದಾಯವನ್ನು ಮಾಡಬಾರದು. ಮೂಢನಂಬಿಕೆ-ಕಂದಾಚಾರದ ಆಚರಣೆಯ ಮೂಲಕ ವಿವಾಹವಾಗುವುದನ್ನು ಲಿಂಗಾಯತರು ಬಿಡಬೇಕು. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಲಿಂಗಾಯತರು ತಮ್ಮ ಕಲ್ಯಾಣ ಕಾರ್ಯ, ಗೃಹಪ್ರವೇಶ, ಹುಟ್ಟಬ್ಬ, ನಾಮಕರಣ ಮುಂತಾದ ಧಾರ್ಮಿಕ ವಿಧಿ-ವಿಧಾನಗಳನ್ನು ವಚನಾಧಾರಿತ ನಿಜಾಚಾರಣೆಯ ಮೂಲಕ ನೆರವೇರಿಸಬೇಕೆಂದು ಹೇಳಿದರು.

ನಂತರ ಕಲ್ಯಾಣ ಮಹೋತ್ಸವದ ವಿಧಿವಿಧಾನಗಳನ್ನು ವಚನಾಧಾರಿತವಾಗಿ ವಚನಕ್ರಿಯಾಮೂರ್ತಿಗಳಾದ ಶರಣೆಯರಾದ ಸುನೀತಾ ಚಂದ್ರಶೇಖರ ಹಾಗೂ ಶೃತಿ ಭದ್ರಾವತಿ ಅವರು ಶರಣ ಸಂಸ್ಕತಿಯ ಪ್ರಕಾರ ವಧು-ವರರಿಗೆ ವಿಭೂತಿ ಧಾರಣೆ ಮಾಡಿ, ಇಷ್ಟಲಿಂಗದೀಕ್ಷೆ ನೀಡಿದರು. ನಂತರ ಗುರುಬಸವಣ್ಣನವರ ಪ್ರಾರ್ಥನೆ, ವಚನ ಪಠಣ ಮಾಡಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು, ಪ್ರತಿಜ್ಞಾವಿಧಿ ಸ್ವೀಕಾರದ ನಂತರ ವಚನ ಮಾಂಗಲ್ಯಧಾರಣೆ ಆಗಿ, ನೂತನ ದಂಪತಿಗೆ ಪುಷ್ಪವೃಷ್ಟಿ ಮಾಡಲಾಯಿತು.

ಆಗಮಿಸಿದ ಬಂಧು-ಮಿತ್ರರು ನೂತನ ದಂಪತಿಗೆ ಶುಭ ಹಾರೈಸಿದರು. ಹಿರೇಮಠ ಮತ್ತು ಸಾಲಿಮಠ ಬಂಧುಗಳು-ಮಿತ್ರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗವಾಯಿತು.