ಸೋಮಣ್ಣನವರ ದಿವ್ಯ ಸಾನಿಧ್ಯದಲ್ಲಿ ವಚನ ದರ್ಶನ ಮತ್ತೆ ಲೋಕಾರ್ಪಣೆ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ನವದೆಹಲಿ

ವಿವಾದಿತ ವಚನ ದರ್ಶನ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಸರದಿ ಈಗ ಕೇಂದ್ರ ಮಂತ್ರಿ ಮತ್ತು ತುಮಕೂರು ಸಂಸದ ವಿ ಸೋಮಣ್ಣನವರದಾಗಿದೆ.

ಸೆಪ್ಟೆಂಬರ್ 29ರಂದು ಸಂಜೆ 5 ಗಂಟೆಗೆ ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ವಚನ ದರ್ಶನ ಪುಸ್ತಕ ಮತ್ತೆ ಲೋಕಾರ್ಪಣೆಯಾಗುತ್ತಿದೆ.

ಅಧ್ಯಕ್ಷತೆ ಸೋಮಣ್ಣನವರದು, ದಿವ್ಯ ಸನ್ನಿದಾನ ಶ್ರೀ ಸದಾಶಿವಾನಂದ ಶ್ರೀಗಳದ್ದು ಮತ್ತು ಶಂಕರಾನಂದ ಬಿ.ಆರ್. ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಮುಂಚೆ ವಿಜಯಪುರದಲ್ಲಿ ಶಂಕರಾನಂದ ಅವರು ವಚನ ಚಳುವಳಿ ಕ್ರಾಂತಿಯಲ್ಲ, ಚಳುವಳಿಯೂ ಅಲ್ಲ ಎಂದು ಮಾಡಿದ್ದ ಭಾಷಣದ ತುಣುಕುಗಳು ವೈರಲ್ ಆಗಿದ್ದವು.

ವಚನ ದರ್ಶನ ಪುಸ್ತಕ ಆಗಲೇ ಕರ್ನಾಟಕದ ಜಿಲ್ಲೆಗಳಲ್ಲಿ 09 ಕಡೆ ಬಿಡುಗಡೆಯಾಗಿದೆ. ಅದರ ಸರಣಿ ಲೋಕಾರ್ಪಣೆ ಮುಂದುವರೆದರೆ ಕರ್ನಾಟಕದ ಇತಿಹಾಸದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಲೋಕಾರ್ಪಣೆಯಾದ ಪುಸ್ತಕ ಎಂದು ಹೊಸ ದಾಖಲೆ ನಿರ್ಮಾಣವಾಗುವ ಸಾಧ್ಯತೆಯಿದೆ.

ಆದರೆ ರಾಜ್ಯದ ಹೊರಗೆ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಮುಂದುವರೆದು ಕನ್ನಡಿಗರು ಹೆಚ್ಚಿಗೆ ವಾಸಿಸುವ ವಿಶ್ವದ ಬೇರೆ ಬೇರೆ ನಗರಗಳಲ್ಲಿ ಇದು ಲೋಕಾರ್ಪಣೆಯಾಗುವುದೋ ನೋಡಬೇಕು.

ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಶ್ರೀಗಳು, ಬೆಂಗಳೂರಿನಲ್ಲಿ ಬೇಲಿ ಮಠದ ಶ್ರೀಗಳು ಹಿಂದೆ ಸರಿದ ಮೇಲೆ, ಪ್ರಮುಖ ಲಿಂಗಾಯತ ಮಠದ ಸ್ವಾಮೀಜಿಗಳು ಈ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ.

ಗದುಗಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸಮಾವೇಶದಲ್ಲಿ ಮಾತನಾಡುತ್ತ ಎಸ್.ಎಂ. ಜಾಮದಾರ್ ಅವರು ಆರೆಸ್ಸೆಸ್ ನವರು ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂಬ ನೀತಿ ಪಾಲಿಸುತ್ತಾರೆ ಎಂದು ಹೇಳಿದ್ದರು. ಬಸವ ತತ್ವಕ್ಕೆ ವಿರುದ್ದವಾಗಿರುವ ಈ ಪುಸ್ತಕವನ್ನು ಬಿಡುಗಡೆ ಮಾಡಲು ಲಿಂಗಾಯತರನ್ನೇ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.

ಕೇಂದ್ರದಲ್ಲಿ ಪ್ರಹ್ಲಾದ ಜೋಶಿಯವರಂತಹ ಹಿರಿಯ ನಾಯಕರಿದ್ದರೂ ಈ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳುವ ಭಾಗ್ಯ ಸೋಮಣ್ಣನವರದಾಗಿದೆ.

ಹುಬ್ಬಳ್ಳಿ, ಧಾರವಾಡಗಳ ಕಡೆ ವಚನ ದರ್ಶನ ಲೋಕಾರ್ಪಣೆ ನಡೆದರೂ ಅಲ್ಲೆಲ್ಲೂ ಜೋಶಿ ಕಾಣಿಸಿಕೊಂಡಿಲ್ಲ. ಮತ್ತೊಬ್ಬ ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕೂರಿಸಿದ್ದು ಗಮನ ಸೆಳೆದಿತ್ತು.

ವಿವಾದಿತ ವಚನ ದರ್ಶನ ಪುಸ್ತಕವನ್ನು ನಾಡಿನಾದ್ಯಂತ ಬಸವ ಸಂಘಟನೆಗಳು ವಿರೋಧಿಸುತ್ತಿವೆ.

Share This Article
2 Comments
  • ಆ ಪುಣ್ಯಾತ್ಮ ಸೋಮಣ್ಣನಿಗೆ ರಾಜಕೀಯ ಮಾತ್ರ ಗೊತ್ತು. ಬಸವಣ್ಣ, ವಚನಗಳ ಬಗೆಗೆ ಆತನಿಗೆ ಏನಾದ್ರು ಗೊತ್ತಿದ್ರೆ ಆತ ಹೋಗ್ತಿರಲಿಲ್ಲ.

  • ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರಿಗೆ ಮತಗಳು ಮತ್ತು ಅಧಿಕಾರ ಮಾತ್ರ ಮುಖ್ಯ. ಹಿಂದೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂದು ಹೋರಾಟ ಪ್ರಾರಂಭವಾಗಿದ್ದಾಗ ವೀರಶೈವರು ಮತ್ತು ಲಿಂಗಾಯತರು ಒಂದೇ ನಗರದಲ್ಲಿ ವೀರಶೈವರು ಅಂತಲೂ ಹಳ್ಳಿಗಳಲ್ಲಿ ಲಿಂಗಾಯತರು ಅಂತಲೂ ಹೇಳುತ್ತಾರೆ ಎಂಬ ಸಿದ್ದಗಂಗಾ ಶ್ರೀಗಳ ಮಾತಿನ ಹಿಂದೆ ಇವರ ಪವಾಡ ಇತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.

Leave a Reply

Your email address will not be published. Required fields are marked *