ಹಾವಿನ ಬಾಯ ಕಪ್ಪೆ ಹಸಿದು…ಬಸವತಂದೆಯ ಸುಂದರ ವಚನ ನಿರ್ವಚನ

ಗುಳೇದಗುಡ್ಡ:

ಬಸವಕೇಂದ್ರದ ವತಿಯಿಂದ ಶನಿವಾರ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಗಣೇಶ ಬುದ್ದಪ್ಪ ಅರುಟಗಿ ಅವರ ಮನೆಯಲ್ಲಿ  ನಡೆಯಿತು.

ಅಪ್ಪ ಬಸವತಂದೆಗಳ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು –

ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೋಣಕ್ಕೆ ಆಸೆ ಮಾಡುವಂತೆ,
ಶೂಲವೇರುವ ಕಳ್ಳನು
ಹಾಲು ತುಪ್ಪವ ಕುಡಿದು
ಮೇಲೇಸುಕಾಲ ಬದುಕುವನೊ?
ಕೆಡುವೊಡಲನಚ್ಚಿ ಕಡುಹುಸಿಯನೆ ಹುಸಿದು,
ಒಡಲ ಹೊರೆವರ ಕೂಡಲಸಂಗಮದೇವನವರನು ಒಲ್ಲ ಕಾಣಿರಣ್ಣಾ.

ಈ ಸುಂದರವಾದ ವಚನವನ್ನು ಪ್ರಥಮದಲ್ಲಿ ಚಿಂತನೆಗೆ ಒಳಪಡಿಸಿದ ಪ್ರೊ. ಶ್ರೀಕಾಂತ ಗಡೇದ ಅವರು, ಪ್ರಾರಂಭದಲ್ಲಿ ಅಪ್ಪನವರು ಸುಂದರವಾದ ಉಪಮೆಯೊಂದನ್ನು ನೀಡಿ ಶರೀರದ ಕ್ಷಣಿಕತೆಯನ್ನು ತಿಳಿಸಿ, ಅದರ ಹಾಗೆಯೇ ಕಳ್ಳನೊಬ್ಬನು ಬದುಕಿನ ಕ್ಷಣಿಕತೆಯನ್ನು ಅರಿಯದೆ ಇನ್ನೂ ಹೆಚ್ಚಿನ ಭೋಗವನ್ನು ಬಯಸಿ ಸನ್ಮಾರ್ಗಕ್ಕೆ ಬರದೇ ನಿರರ್ಥಕವಾಗಿ ಸತ್ತು ಹೋಗುತ್ತಾನೆ.

ದುಡಿದು ಬದುಕುವದು, ಸಮಸಮಾಜ ನಿರ್ಮಾಣ ಮಾಡುವುದು ಬಸವತಂದೆಗಳ ಆಶಯವಾಗಿತ್ತು. ನಾಶವಾಗುವ ಶರೀರಕ್ಕೆ ಒಡಲ ಹೊರೆಯುವ ಹೋರಾಟ ವ್ಯರ್ಥ. ಇಂದಿನ ಸಮಾಜ ಇಂತಹ ಕಳ್ಳ ಬದುಕಿನ ಕ್ಷಣಿಕತೆಯನ್ನು ಅರಿತು ಬಾಳಿದ್ದರೆ, ಸಮಸಮಾಜವೇ ಇಲ್ಲಿ ಉಂಟಾಗುತ್ತಿತ್ತು. ಕೊನೆಗೆ ಈ ಮನುಷ್ಯ ಜನ್ಮವನ್ನು ಅರಿಯದೇ ಜೀವವನ್ನು ಉಳಿಸಿಕೊಂಡು ಹೋದವರನ್ನು ಕೂಡಲಸಂಗಮದೇವರು ಸಹಿಸುವುದಿಲ್ಲ ಎಂದು ಹೇಳಿದರು.

ಅನುಭಾವಿ ಮಹಾಂತೇಶ ಸಿಂದಗಿಯವರು ಇದೇ ವಚನವನ್ನು ಪ್ರಸ್ತಾಪಿಸುತ್ತ – ಅಪ್ಪ ಬಸವತಂದೆಗಳು ಬಯಸಿದ್ದು ಸುಂದರ ಸಮಾಜವನ್ನು. ಅಲ್ಲಿ ಕಳ್ಳತನವಿಲ್ಲ, ಕೊಲ್ಲುವಿಕೆ ಇಲ್ಲ.  ಹುಸಿಯನಾಡುವವರಿಲ್ಲ, ಅನ್ಯರನ್ನು ಹೀಯಾಳಿಸುವರಿಲ್ಲ. ತನ್ನಂತೆ ಪರರನ್ನು ಬಗೆಯುವ ಸುಗುಣವಿದೆ. ಇದಕ್ಕೆ ಪ್ರತಿಯಾಗಿ ಈ ಶರೀರವನ್ನೇ ನಚ್ಚಿ ಬದುಕವವರಿಗೆ ಕಿವಿ ಮಾತಾಗಿ ಈ ವಚನವನ್ನು ಹೇಳಿದ್ದಾರೆ.

ಹಾವಿನ ಬಾಯ ಕಪ್ಪೆಯ ಹಾಗೆ ಕಳ್ಳ ಮನುಷ್ಯನ ಸ್ಥಿತಿಯೂ ಇರುವಾಗ ಅವ ಹೇಗೆ ಕೂಡಲಸಂಗಮದೇವರಿಗೆ ಪಾತ್ರನಾಗುತ್ತಾನೆ? ಸಾವಿನ ದವಡೆಯಲ್ಲಿರುವ ನಾವು ಅದರಿಂದ ಹೊರಬರುವ ಚಿಂತನೆ ಮಾಡಲಾರದೆ ಒಡಲ ಹೊರೆಯುವ ಯೋಚನೆಯಲ್ಲಿದ್ದರೆ ಹೇಗೆ ಆ ಕೂಡಲಸಂಗಮದೇವರು ನಮ್ಮನ್ನು ಒಪ್ಪುತ್ತಾನೆ? ಎಂದು ಪ್ರಶ್ನಿಸಿದರು.

ಪ್ರೊ. ಸುರೇಶ ರಾಜನಾಳ ಇದೇ ವಚನದಲ್ಲಿ ತೊಡಗಿ – ಶರಣರ ಜೀವನಕ್ಕೂ ಸಾದಾ ಮನುಜರ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ.  ಕೂಡಲಸಂಗನ ಶರಣರು ನಡೆ-ನುಡಿಗಳಿಂದ ಶುದ್ಧವಾದವರು. ಅಲ್ಲಿ ಲಿಂಗವನ್ನು ಪೂಜಿಸಿ ತಾವೇ ಆಗುವ ತವಕವಿದೆ.

ಇದಕ್ಕೆ ಶರೀರ ಮತ್ತು ಅದರ ಆಕರ್ಷಣೆಗಳು ಇಲ್ಲ.  ಪರಿಶುದ್ಧವಾದ ಬದುಕಿಲ್ಲದ ಡಾಂಭಿಕ ಶರಣರು ಅಲ್ಲಿ ಸಲ್ಲರು. ಅಸ್ಥಿರವಾದ ಈ ಬದುಕನ್ನೇ ನಚ್ಚಿ ಬದುಕುವವರು ಶೂಲವೇರುವ ಕಳ್ಳನ ಸಮಾನ.  ಬಸವಣ್ಣನವರು ನೆಚ್ಚಿದ ಸುಂದರ ಸಮಾಜ ನಿರ್ಮಾಣದಲ್ಲಂತೂ ಅವರು ಸಲ್ಲರೆಂದು ಧರ್ಮ ಗುರು ಬಸವಣ್ಣನವರು ಇಲ್ಲಿ ಹೇಳಿದ್ದಾರೆ ಎಂದರು.

ಇದೇ ವಚನವನ್ನು ಹಿರಿಯ ಅನುಭಾವಿಗಳಾದ ಪ್ರೊ. ನೀಲಕಂಠ ಮಹಾದೇವಯ್ಯನವರು ವಿಶ್ಲೇಷಿಸುತ್ತ, ಈ ವಚನವು ಮೇಲ್ನೋಟಕ್ಕೆ ಸರಳವಾಗಿ ಕಂಡು ವಾಖ್ಯಾರ್ಥದಲ್ಲಿಯೇ ಅರ್ಥವನ್ನು ಬಿಚ್ಚಿಕೊಳ್ಳುತ್ತದೆ ಎಂದು ಕಂಡರೂ ಆಳವಾದ ಅರ್ಥವನ್ನು ಹೊಂದಿದೆ.

ಹಾವಿನ ಬಾಯಿಯಲ್ಲಿ ಕಪ್ಪೆ ಇನ್ನೇನು ಸಾಯುತ್ತದೆ ಎನ್ನುವ ಸಂದರ್ಭದಲ್ಲಿ ಅದನ್ನು ಅರಿಯದೆ ತನ್ನ ಮುಂದೆ ಹಾರಾಡುವ ನೊಣಕ್ಕೆ ಆಸೆ ಪಡುತ್ತದೆ.  ಈ ನೋಣ ತನ್ನ ಆಹಾರ, ತನತೋ ಹಸಿವಾಗಿದೆ ಮರಣ ಯಾವಾಗಲಾದರೂ ಬರಲಿ ಅದಕ್ಕಿಂತ ಮಿಗಿಲಾದುದು ಹಸಿವು.

ಇಲ್ಲಿ ಮರಣವನ್ನು ಗೆಲ್ಲುವ ಕೆಲಸವನ್ನು ಅದು ಮಾಡುತ್ತಿಲ್ಲ.  ಹಾಗೆಯೇ ಅದಕ್ಕೆ ಸಾದೃಶ್ಯವಾಗಿ ಕಳ್ಳನೊಬ್ಬ ಶೂಲಕ್ಕೇರುವ ಮೊದಲು ಹಾಲು ತುಪ್ಪ ಬಯಸುತ್ತಾನೆಯೇ ಹೊರತು ಸಾವಿನ ಕಲ್ಪನೆಯಿಲ್ಲ. ಈ ಸಾವು ತಾನು ತಂದುಕೊಂಡದ್ದು, ಒಂದು ವೇಳೆ ಆ ಕಳ್ಳ ಕಳ್ಳತನ ಮಾಡದೇ ಹೋಗಿದ್ದರೆ, ಸುಳ್ಳನಾಗಿರದಿದ್ದರೆ ಉಳಿಯಬಹುದಾಗಿತ್ತು.  ಅಥವಾ ಒಳ್ಳೆಯ ಬದುಕನ್ನು ಸಾಗಿಸಬಹುದಿತ್ತು.

ಅದೇನೇ ಇದ್ದರೂ ಅದು ‘ರೆ’ ಸಾಮ್ರಾಜ್ಯ. ಆದರೆ ಆತ್ಯಂತಿಕ ಸತ್ಯವಾದ ಕೂಡಲಸಂಗಮದೇವರೆಂಬ ಪ್ರಜ್ಞಾಲೋಕದಲ್ಲಿ ಬದುಕುವವರು ಕೆಡುವ (ನಾಶವಾಗುವ) ಈ ಶರೀರ ಶಾಶ್ವತವಾಗಿದೆಯೆಂದು ಭ್ರಮೆಗೆ ಒಳಗಾಗಿ, ಬದುಕಿನುದ್ದಕ್ಕೂ ಹುಸಿಯ ಬದುಕನ್ನೆ (ಅಜ್ಞಾನ) ಬದುಕಿ ಬದುಕನ್ನು ಬದುಕುತ್ತಾರೆ. ಇವರು ಸಾಯುವ ಕಪ್ಪೆ ಕಳ್ಳರಿಗಿಂತ ಭಿನ್ನವಿಲ್ಲ ಎಂದು ಮುಂತಾಗಿ ಅರ್ಥೈಸಿದರು.

ಗೀತಾ ತಿಪ್ಪಾ ಹಾಗೂ ಸಂಗಡಿಗರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು.  ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನು ಗೈದರು.

ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ,  ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಪ್ರೊ. ಸುರೇಶ ರಾಜನಾಳ, ದಾಕ್ಷಾಯಣಿ ತೆಗ್ಗಿ, ಪ್ರೊ. ಸುರೇಶ ರಾಜನಾಳ ದಂಪತಿ, ಬಸವರಾಜ ಖಂಡಿ, ಕುಮಾರ ಅರುಟಗಿ, ಕಂಬಾಳಿಮಠ ಸರ್, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *