ದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು

ಶರಣ ಸಾಹಿತ್ಯ ಪರಿಷತ್ ಪ್ರಕಟಿತ ಕೃತಿಗಳ ಬಿಡುಗಡೆ

ಯಾದಗಿರಿ:

ಮೈಸೂರಿನ ಸುತ್ತೂರು ಮಠದ 23ನೇ ಪೀಠಾಧಿಕಾರಿಯಾಗಿದ್ದ ಲಿಂಗೈಕ್ಯ ಪೂಜ್ಯ ಡಾ. ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮಿಗಳು ಅಕ್ಷರ, ಅನ್ನ ಮತ್ತು ಆರೋಗ್ಯ ದಾಸೋಹ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು ಎಂದು ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಕಾರ್ಯಾಲಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ ಮಹೋತ್ಸವ ಹಾಗೂ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜಿಲ್ಲಾ ಶರಣ ಸಾಹಿತ್ಯ‌ ಪರಿಷತ್ ವತಿಯಿಂದ ಪ್ರಕಟಣೆಯಾದ ಕೃತಿಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶೈಕ್ಷಣಿಕ ಚಿಂತನೆಗಳಿಗೆ ನಾಡಿನ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ್, 12ನೇ ಶತಮಾನದ ಶರಣರ ಆನುಭಾವಿಕ ವಚನಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣ ಸಾಹಿತ್ಯದ ಬಗ್ಗೆ ಯುವ ಸಮೂಹ ತಿಳಿದುಕೊಳ್ಳುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.

ವಚನ ಸಾಹಿತ್ಯ, ಶರಣ ಸಾಹಿತ್ಯದಲ್ಲಿ ಸಮಾನತೆ, ಮಹಿಳಾ ಸಬಲಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಉತ್ತಮ‌ ಕೆಲಸ ಮಾಡುತ್ತಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಅನೇಕ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ ಎಂದರು.

ಅಶೋಕ ಮಳಗಲಿ ಅವರ ಕಾಲಾತೀತ ಕೃತಿ ಬಿಡುಗಡೆ ಮಾಡಿದ ಸಾಹಿತಿ ಶಿವಣ್ಣ ಇಜೇರಿ, ಇನ್ನೊಬ್ಬರ ನೋವಿಗೆ ಸ್ಪಂದಿಸುವ, ಮತ್ತೊಬ್ಬರ ಕಣ್ಣೀರು ಒರೆಸುವವರೆ ನಿಜವಾದ ಶರಣರಾಗಿದ್ದು, ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಶರಣರು ಪ್ರಾಮಾಣಿಕತೆಯ ಪ್ರತಿನಿಧಿಯಂತಿದ್ದರು. ಆದರೆ ಇಂದು ನಮ್ಮಲ್ಲಿ ಕನಿಷ್ಠ ಪ್ರಾಮಾಣಿಕತೆಯೂ ಇಲ್ಲದಂತಾಗಿದೆ ಎಂದು ಹೇಳಿದರು.

ಡಾ. ಪ್ರದೀಪ ಹೆಬ್ರಿ ಅವರ ಅತ್ಯುನ್ನತ ಅಮರತ್ವ ಕೃತಿ ಬಿಡುಗಡೆ ಮಾಡಿದ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಬಸವಾದಿ ಶರಣರ ವಿಚಾರಗಳನ್ನು ಕೇವಲ ಆಚರಿಸದೆ ಅವುಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

‘ಅತ್ಯುತ್ತಮ ಅಮರತ್ವ’ ಕೃತಿ ಕುರಿತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಪರಿಚಯಿಸುತ್ತ, ಮತ್ತೊಬ್ಬರ ಜೀವನ ಚರಿತ್ರೆ ಬರೆಯುವುದು ಬಹಳ ಕಷ್ಟದ ಕೆಲಸ. ವಿಶ್ವದ ಅತಿ ವಿರಳ, ಮಹಾಮಾನವತಾವಾದಿ ಬಸವಣ್ಣನವರ ಕುರಿತಾದ ಆತ್ಮೋನ್ನತಿಯ ಅಮರತ್ವ ಕೃತಿಯು ಅವರ ವಚನಗಳ ಆಧಾರದ ಮೇಲೆ ನಿರ್ಮಾಣಗೊಂಡಿದೆ.

ಬಸವಣ್ಣನವರಂಥ ಮೇರು ಪುರುಷರ ವ್ಯಕ್ತಿತ್ವಕ್ಕೆ ಎಲ್ಲಿಯೂ ಚ್ಯುತಿ ತರದೆ ಅವರ ಜೀವನೇತಿಹಾಸದ ಕುರಿತು ಇನ್ನಷ್ಟು ಬೆಳಕು ಚೆಲ್ಲುವಂತಿದೆ ಎಂದರು.

ಅಂತರಂಗದ ಅರಿವು ಮೂಡಿಸುವ ‘ಕಾಲಾತೀತ’ ಪುಸ್ತಕದ ಕುರಿತು ಉಪನ್ಯಾಸಕ ಶರಣಗೌಡ ಪಾಟೀಲ ಜೈನಾಪುರ ಪರಿಚಯಿಸುತ್ತ, ಹೆಸರೆ ಸೂಚಿಸುವಂತೆ ಕಲ್ಯಾಣದ ಶರಣರ ವಚನಗಳು ಕಾಲಾತೀತವಾಗಿವೆ. ಅವುಗಳನ್ನು ವಿಶ್ಲೇಷಣೆ ಮಾಡುವುದೆಂದರೆ ಅನುಭಾವದ ಅಡುಗೆ ಮಾಡಿ ಉಂಡಂತೆ ಭಾಸವಾಗುತ್ತಿದೆ.‌ ಶರಣ ವಚನಗಳ ಆಶಯ ಇಂದಿಗೂ ಪರಿಪಾಲನೆಯಾಗುತ್ತಿಲ್ಲ. ವಚನಗಳ ಅರಿವು ಅಂತರಂಗ ಅರಿಯಲು ಕಾಲಾತೀತ ಕಲ್ಯಾಣ ನೆರವಾಗಲಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಹಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ವೇದಿಕೆಯಲ್ಲಿದ್ದರು.

ಡಾ. ಭೀಮರಾಯ ಲಿಂಗೇರಿ ನಿರೂಪಿಸಿದರು. ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಡಾ. ಎಸ್.ಎಸ್. ನಾಯಕ ವಂದಿಸಿದರು.

ಇದೇ ವೇಳೆಯಲ್ಲಿ ವಚನಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆರ್. ಮಹಾದೇವಪ್ಪ ತುಮಕೂರ, ಚಂದಪ್ಪ ತಾಯಮ್ಮಗೋಳ, ಅಯ್ಯಣ್ಣ ಹುಂಡೇಕಾರ, ಪರ್ವತರೆಡ್ಡಿ ಬೆಂಡೆಬಂಬಳಿ, ವಿಠ್ಠಲ ಚಿಕಣಿ, ಸಂಗೀತಾ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *