‘ಸ್ವರ್ಗ, ನರಕ ದೂರದ ಲೋಕಗಳಲ್ಲ, ನಮ್ಮ ಆಚಾರ-ವಿಚಾರಗಳಲ್ಲಿಯೇ ಅಡಗಿವೆ’

ಬಸವ ಮೀಡಿಯಾ
ಬಸವ ಮೀಡಿಯಾ

ಮಳವಳ್ಳಿಯಲ್ಲಿ 139ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ

ಮಳವಳ್ಳಿ:

ಮಳವಳ್ಳಿ ಬೆಳದಿಂಗಳ ಶರಣರ ಚಿಂತನ ಮಂಥನ ಸಮಿತಿ ವತಿಯಿಂದ ನಗರದ ಟೌನ್ ಸುಲ್ತಾನ್ ರಸ್ತೆಯ ಪುಟ್ಟಸುಬ್ಬಪ್ಪನವರ ಮನೆಯಂಗಳದಲ್ಲಿ ನಡೆದ 139ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.

ವಚನ ಪ್ರವಚನಕಾರ ವಚನ ಕುಮಾರಸ್ವಾಮಿ ಅವರು “ಬದುಕು ಬದಲಿಸುವ ಬಸವ ಚಿಂತನೆಯ ಬೆಳಕು” ವಿಷಯದ ಅಡಿಯಲ್ಲಿ “ಸ್ವರ್ಗ ಮತ್ತು ನರಕ” ಎಂಬ ಉಪವಿಷಯ ಕುರಿತು ಚಿಂತನಶೀಲ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದ ಅವರು, ಸ್ವರ್ಗ ಮತ್ತು ನರಕಗಳು ಎಲ್ಲೋ ದೂರದ ಲೋಕಗಳಲ್ಲ, ಅವು ಮನುಷ್ಯನ ಆಚಾರ-ವಿಚಾರಗಳಲ್ಲಿಯೇ ಅಡಗಿವೆ ಎಂದು ಹೇಳಿದರು.

“ಸತ್ಯವ ನುಡಿವುದೆ ದೇವಲೋಕ, ಮಿಥ್ಯವ ನುಡಿವುದೆ ಮರ್ತ್ಯಲೋಕ; ಆಚಾರವೆ ಸ್ವರ್ಗ, ಅನಾಚಾರವೆ ನರಕ” ಎಂಬ ಬಸವಣ್ಣನವರ ವಚನವನ್ನು ವಿವರಿಸುತ್ತಾ, ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ಕೂಡಿದ ಬದುಕೇ ನಿಜವಾದ ಸ್ವರ್ಗ ಎಂದು ತಿಳಿಸಿದರು.

ಮಹಾಮನೆ ಕಾರ್ಯಕ್ರಮಗಳು ಹಾಗೂ ವಚನ ಅಧ್ಯಯನದ ಮಹತ್ವವನ್ನು ವಿವರಿಸಿದ ಅವರು, ಚೆನ್ನಬಸವಣ್ಣನವರ “ಮನದ ಮೈಲಿಗೆಯ ತೊಳೆಯಬೇಕಾದಡೆ ಕೂಡಲಚೆನ್ನಸಂಗಯ್ಯನ ಶರಣರ ಅನುಭಾವವ ಮಾಡುವುದು” ಎಂಬ ವಚನವನ್ನು ಉಲ್ಲೇಖಿಸಿ, ದೇಹದ ಮಲಿನತೆಯನ್ನು ನೀರು ತೊಳೆದುಹಾಕಬಹುದು; ಆದರೆ ಮನಸ್ಸಿನ ಮಲಿನತೆಯನ್ನು ಶರಣರ ಅನುಭಾವ ಮತ್ತು ವಚನ ಚಿಂತನೆಯಿಂದ ಮಾತ್ರ ನಿವಾರಿಸಬಹುದು ಎಂದರು.

ಬಸವಣ್ಣನವರು ಸಮಾಜಕ್ಕೆ ನೀಡಿದ ಮೂರು ಅಮೂಲ್ಯ ಕೊಡುಗೆಗಳಾದ ಕಾಯಕ, ಇಷ್ಟಲಿಂಗ ಮತ್ತು ದಾಸೋಹಗಳ ಮಹತ್ವವನ್ನು ವಿವರಿಸಿದ ಅವರು, “ತನು ಶುದ್ಧಿ ಕಾಯಕದಿಂದ, ಮನ ಶುದ್ಧಿ ಇಷ್ಟಲಿಂಗದಿಂದ ಹಾಗೂ ಭಾವ ಶುದ್ಧಿ ದಾಸೋಹದಿಂದ ಸಾಧ್ಯ” ಎಂದು ಹೇಳಿದರು.

ತಲೆಯಲ್ಲಿ ಸದ್ವಿಚಾರ, ಕೈಯಲ್ಲಿ ಸತ್ಕಾರ್ಯ, ಬಾಯಲ್ಲಿ ಸವಿಮಾತು ಹಾಗೂ ಎದೆಯಲ್ಲಿ ಸದ್ಭಾವ ತುಂಬಿಕೊಂಡಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದರು.

ಬಸವಣ್ಣನವರು, ಲೆಂಕರಸ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಿದೇವರ ವಚನಗಳು ಮತ್ತು ಜೀವನ ಪ್ರಸಂಗಗಳನ್ನು ಉದಾಹರಿಸಿ ಸಮಾನತೆ, ಕಾಯಕನಿಷ್ಠೆ, ದಾಸೋಹ, ವೈರಾಗ್ಯ ಹಾಗೂ ಮಾನವೀಯ ಮೌಲ್ಯಗಳನ್ನು ವಿಶ್ಲೇಷಿಸಿದರು.

ಹಸುಗಳ ಪ್ರಸಂಗವನ್ನು ವಿವರಿಸಿದ ಅವರು, ಕಳ್ಳರು ಹಸುಗಳನ್ನು ಕೊಂಡೊಯ್ದರೂ “ಅಲ್ಲಿಯೂ ಕೂಡಲಸಂಗ, ಇಲ್ಲಿಯೂ ಕೂಡಲಸಂಗ” ಎಂಬ ಏಕೋಭಾವವನ್ನು ತೋರಿದ ಶರಣರ ದೃಷ್ಟಿಕೋನ ಇಂದಿನ ಸಮಾಜಕ್ಕೂ ಮಾದರಿಯಾಗಿದೆ ಎಂದರು.

ಪ್ರವಚನದ ವೇಳೆ ಅವರು ಪ್ರಸಿದ್ಧ ಲಾಟರಿ ಪ್ರಸಂಗವನ್ನು ಹಾಸ್ಯಮಯವಾಗಿ ನಿರೂಪಿಸಿ, ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ ಎಂಬುದನ್ನು ಮನೋಜ್ಞವಾಗಿ ವಿವರಿಸಿದರು. ಜೊತೆಗೆ, ಬದುಕಿನಲ್ಲಿ ಸಂಕಲ್ಪ, ಆತ್ಮವಿಶ್ವಾಸ ಮತ್ತು ಕಾಯಕನಿಷ್ಠೆಯ ಮಹತ್ವವನ್ನು ವಿವಿಧ ಶರಣರ ಜೀವನ ಪ್ರಸಂಗಗಳ ಮೂಲಕ ವಿವರಿಸಿದರು.

ಸಮಾರೋಪದಲ್ಲಿ ಮಾತನಾಡಿದ ಅವರು, “ಬಸವಣ್ಣನವರ ಚಿಂತನೆಯ ಬೆಳಕು ದೇವಾಲಯದ ಗೋಡೆಗಳಲ್ಲಿ ಮಾತ್ರ ಹೊಳೆಯಲಿಲ್ಲ; ಅಂಬಿಗರ ದೋಣಿಯಲ್ಲಿ, ಮಡಿವಾಳನ ಕಾಯಕದಲ್ಲಿ, ಹರಳಯ್ಯನ ಶ್ರಮದಲ್ಲಿ ಹಾಗೂ ಶರಣರ ಬದುಕಿನಲ್ಲಿ ಪ್ರಕಾಶಿಸಿತು. ಆದ್ದರಿಂದಲೇ ಬಸವ ಚಿಂತನೆ ಇಂದಿಗೂ ಬದುಕು ಬದಲಿಸುವ ಶಕ್ತಿಯಾಗಿ ಉಳಿದಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಳವಳ್ಳಿ ಬೆಳದಿಂಗಳ ಶರಣರ ಚಿಂತನ ಮಂಥನ ಸಮಿತಿಯ ಮಲ್ಲೇಶಣ್ಣ, ಪರಶಿವಮೂರ್ತಿ, ನಾಗರಾಜಪ್ಪ, ಮಹದೇವಸ್ವಾಮಿ, ಗುರುಪಾದಸ್ವಾಮಿ, ಬಸವಪ್ರಿಯ ನಾಗರಾಜು, ಪುಟ್ಟಸುಬ್ಬಪ್ಪ, ಉಮಾದೇವಿ ನೂರಾರು ಬಸವ ಭಕ್ತರು ಆಗಮಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *