ತರಳಬಾಳು ಮಠದ 2000 ಕೋಟಿ ರೂಪಾಯಿ ಆಸ್ತಿ ಭಕ್ತರ ಕಾಣಿಕೆ, ದೇಣಿಗೆಯಿಂದ ಸಂಗ್ರಹವಾಗಿರುವುದು, ಯಾರೊಬ್ಬರ ಸ್ವಂತ ಗಳಿಕೆಯಲ್ಲ, ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಭಾನುವಾರ ಹೇಳಿದರು.
ಹಿಂದಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರೂಪಿಸಿದ್ದ ಬೈಲಾ ರದ್ದುಪಡಿಸಿ ಮಠದ ಜಮೀನು, ಶಿಕ್ಷಣ ಸಂಸ್ಥೆ ಸೇರಿ ಮಠದ ಸಂಪೂರ್ಣ ಆಸ್ತಿ ಏಕವ್ಯಕ್ತಿ ಟ್ರಸ್ಟ್ಗೆ ವರ್ಗಾವಣೆಗೊಂಡಿದೆ ಎಂದು ಆರೋಪ ಮತ್ತೆ ಮಾಡಿದರು.
ದಾವಣಗೆರೆಯಲ್ಲಿ ತರಳಬಾಳು ಮಠದ ಸದ್ಭಕ್ತರ ಸಮನ್ವಯ ಸಮಿತಿ ವತಿಯಿಯಿಂದ ನಡೆದ ಸಭೆಯ ನಂತರ ಸುದ್ದಿಘೋಷ್ಠಿಯಲ್ಲಿ ಮಠದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಇಷ್ಟವಿಲ್ಲ ಎಂದು ಆಪಾದಿಸಿದರು.
‘ಖಾಸಗಿಯಾಗಿ ಯಾರೊಬ್ಬರನ್ನೂ ಭೇಟಿ ಮಾಡುವುದಿಲ್ಲ ಎಂಬುದನ್ನು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆಗಸ್ಟ್ 4ರಂದು ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಆಗಸ್ಟ್ 18ರಂದು ಸ್ವಾಮೀಜಿ ಭೇಟಿ ಸಾಧ್ಯವಾಗಲಿಲ್ಲ’
ಸಿರಿಗೆರೆಯ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕೆಂಬ ಹೋರಾಟವನ್ನು ಮುಂದುವರೆಸಲು ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ. ಭಕ್ತರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜನೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ, ಎಂದು ಪ್ರಜಾವಾಣಿ ವರದಿ ಮಾಡಿದೆ.
ತರಳಬಾಳು ಮಠದ ಪೀಠತ್ಯಾಗ ಮಾಡುವುದಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 2012ರಲ್ಲಿ ಘೋಷಿಸಿದ್ದರು. ನಿವೃತ್ತಿ ಹೊಂದಲು ನಾನೇನು ಸರ್ಕಾರಿ ನೌಕರನೇ ಎಂದು ಈಗ ಕೇಳುತ್ತಿದ್ದಾರೆ, ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಭವ್ಯ ಪರಂಪರೆ, ಗೌರವವಿವಿರುವ ತರಳಬಾಳು ಮಠದ ಬಗ್ಗೆ ಇಂದು ಹಾದಿ ಬೀದಿಯಲ್ಲಿ ಜನ ಮಾತನಾಡೋ ಪರಿಸ್ಥಿತಿ ಬಂದಿದೆ. ನಾವು ಯಾರೂ ಮಠದ ವಿರೋಧಿಗಳಲ್ಲ, ಮಠದ ಅಸ್ತಿ ಒಬ್ಬ ವ್ಯಕ್ತಿಯ ಆಸ್ತಿಯಾಗಿರುವುದನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಸಮುದಾಯದ ಮುಖಂಡರಾದ ಡಿ.ಸಿ.ರಾಜಪ್ಪ, ಬೆನಕಪ್ಪ, ಕೆ.ಸಿದ್ಧಪ್ಪ, ಶ್ರೀನಿವಾಸ ಮೆಳ್ಳೇಕಟ್ಟಿ, ವೆಂಕಟೇಶ್ ಜಕ್ಕಲಿ, ಚೇತನ್ ಎಲೆಬೇತೂರು, ನಾಗರಾಜ್ ಪಲ್ಲಾಗಟ್ಟಿ ಇದ್ದರು.
ತರಳಬಾಳು ಮಠದ ಸದ್ಭಕ್ತರ ಸಮನ್ವಯ ಸಮಿತಿಯ 5 ಬೇಡಿಕೆಗಳು
1) 1990ರಲ್ಲಿ ರಚನೆಯಾದ ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದುಪಡಿಸಬೇಕು
2) 1977ರ ಬೈಲಾ ಪ್ರಕಾರ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಿಸಬೇಕು
3) ಹಾಳಾಗಿರುವ ಶಾಲೆ–ಕಾಲೇಜುಗಳನ್ನು ಅಭಿವೃದ್ಧಿಪಡಿಸಿ ಅಕ್ಷರ ದಾಸೋಹ ಮುಂದುವರಿಸಬೇಕು
4) ಮಠದ ಭಕ್ತರ ಮೇಲೆ ಹಾಕಿರುವ ಪ್ರಕರಣಗಳು ಹಿಂಪಡೆಯಬೇಕು
5) ಸಾದರ ಸಮಾಜದಲ್ಲಿ ಮೂಡಿರುವ ಗೊಂದಲ ನಿವಾರಿಸಬೇಕು