ವಚನಗಳಿಗೆ ಪಟ್ಟಕಟ್ಟಿದ ಗುರು ಅಕ್ಕ ಅನ್ನಪೂರ್ಣತಾಯಿ: ಪ್ರಭುದೇವ ಶ್ರೀ

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಸಿದ್ದಾಪುರವಾಡಿ ಗ್ರಾಮದಲ್ಲಿ ವಚನ ವಿಜಯೋತ್ಸವ

ಭಾಲ್ಕಿ:

ವಚನಗಳು ಶ್ರೇಷ್ಠ ಮಂತ್ರಗಳು, ನೆಮ್ಮದಿಯ ಬದುಕಿನ ಸೂತ್ರಗಳು. ಅಂತಹ ವಚನಗಳು ಜನಮಾನಸದಲ್ಲಿ ಬಿತ್ತಿ, ವಚನಗಳಿಗೆ ಪರಮೋಚ್ಚ ಸ್ಥಾನ ನೀಡಿ, ವಚನಗಳು ತಲೆ ಮೇಲೆ ಹೊತ್ತು ವಚನ ವಿಜಯೋತ್ಸವವನ್ನು ಆಚರಿಸಿ ವಚನಗಳಿಗೆ ಪಟ್ಟ ಕಟ್ಟಿದ ಕೀರ್ತಿ ಲಿಂಗೈಕ್ಯ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರಿಗೆ ಸಲ್ಲುತ್ತದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಿದ್ದಾಪುರವಾಡಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಹಾಗೂ 17ನೇ ವಚನ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಅಕ್ಕ ಅನ್ನಪೂರ್ಣತಾಯಿ ಸರಳತೆಯ ಸಾಕಾರ ಮೂರ್ತಿ. ಬೀದರ ಜಿಲ್ಲೆಯ ಕೀರ್ತಿ ನಾಡಿನಾದ್ಯಂತ ಹಬ್ಬಿಸಿದವರು. ವಚನ ಪಠಣ ಅಭಿಯಾನ, ಶಿವಯೋಗ ಸಾಧಕರ ಕೂಟ, ಬಸವ ಭಾರತಿ ಸಂಸ್ಕಾರ ಶಿಬಿರ, ವಚನ ವಿಜಯೋತ್ಸವ ಕಾರ್ಯಕ್ರಮ ಮಾಡುತ್ತಾ, ಶರಣತತ್ವ ಜನಮಾನಸದಲ್ಲಿ ಬಿತ್ತಿದವರು. ಅಕ್ಕನವರ ಸಂಕಲ್ಪದಂತೆ ಹಳ್ಳಿ ಹಳ್ಳಿಗಳಲ್ಲಿ ವಚನ ವಿಜಯೋತ್ಸವ ಆಚರಿಸುವ ಸಂಕಲ್ಪದೊಂದಿಗೆ 770 ಪ್ರವಚನಗಳು ಮಾಡುತ್ತ ಶರಣರ ತ್ಯಾಗ ಬಲಿದಾನದ ವೀರಗಾಥೆ ಸಾರುವ ಸಂಕಲ್ಪ ತೊಟ್ಟಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಜಕುಮಾರ ಪಾಟೀಲ, ಶರಣರು ನಮಗಾಗಿ ಉಳಿಸಿ ಹೋದ ಅಮೂಲ್ಯ ಸಂಪತ್ತು ಎಂದರೆ ವಚನ ಸಾಹಿತ್ಯ. ಅಂತಹ ವಚನಗಳು ಇಂದು ಅರಿತು ಆಚರಣೆಯಲ್ಲಿ ತರಬೇಕಾಗಿದೆ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಭೂಗತವಾಗಿತ್ತು. ಆದರೆ ಫ. ಗು. ಹಳಕಟ್ಟಿಯವರ ಪರಿಶ್ರಮದಿಂದ ವಚನ ಸಾಹಿತ್ಯ ಮತ್ತೆ ನಮ್ಮ ಕೈ ಸೇರಿದೆ.

ಅಂತಹ ಸಾಹಿತ್ಯವನ್ನು ಅಕ್ಕ ಅನ್ನಪೂರ್ಣ ತಾಯಿ ವಚನ ವಿಜಯೋತ್ಸವದ ಮೂಲಕ, ನಾಡಿನಾದ್ಯಂತ ಪ್ರವಚನಗಳು ಮಾಡುತ್ತ, ವಚನ ಸಾಹಿತ್ಯ ಪ್ರಚಾರ ಪ್ರಸಾರಗೊಳಿಸಿದವರು. ಅಕ್ಕನವರ ಸಂಕಲ್ಪವನ್ನು ಇಂದು ಪ್ರಭುದೇವ ಮಹಾಸ್ವಾಮೀಜಿ ಮುಂದುವರಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ವಚನ ವಿಜಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶರಣ ಸಾಹಿತಿ ರಮೇಶ ಮಠಪತಿ, ಶರಣರ ಇತಿಹಾಸ ನೆನೆದರೆ ಕಣ್ಣಿನಲ್ಲಿ  ನೀರು ಬರದೆ ರಕ್ತ ಬರುತ್ತದೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ವಚನಗಳನ್ನು ಉಳಿಸಲು ಉಳವಿಯ ದಟ್ಟ ಕಾಡಿಗೆ ಹೋದರು.

ಮಳೆಗಾಲದ ಸಂದರ್ಭದಲ್ಲಿ ಜಿಗಣಿ ಹುಳುಗಳ ಕಾಟ ತಪ್ಪಿಸಿಕೊಳ್ಳಲು ಶರಣರು ಮರದ ಬಿಳಲನ್ನೇ ತೊಟ್ಟಿಲಿನಂತೆ ಕಟ್ಟಿ ಮರದ ಮೇಲೆ ಕುಳಿತು, ಅನ್ನ ನೀರು ಇಲ್ಲದೆ ಎಷ್ಟೋ ರಾತ್ರಿಗಳು ಕಳೆದು ತಮ್ಮ ಪ್ರಾಣವನ್ನೇ ಕೊಟ್ಟು ವಚನ ಸಾಹಿತ್ಯ ನಮಗಾಗಿ ಉಳಿಸಿಕೊಟ್ಟಿದ್ದಾರೆ.

12ನೇ ಶತಮಾನದಲ್ಲಿ ಅಕ್ಕನಾಗಮ್ಮ ಉಳವಿಯಲ್ಲಿ  ಮಹಾಮನೆಯನ್ನು ಕಟ್ಟಿ ವಚನ ಸಾಹಿತ್ಯ ಪ್ರಚಾರಗೊಳಿಸಿದವರು. ಅಕ್ಕ ನಾಗಮ್ಮನ ಕ್ರಾಂತಿಯಂತೆ ಅಕ್ಕ ಅನ್ನಪೂರ್ಣ ತಾಯಿಯವರು ವಚನಗಳು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ. ಅಂತಹ ವಚನಗಳಿಗೆ ಪರಮೋಚ್ಚ ಸ್ಥಾನ ನೀಡಿ ವಚನ ವಿಜಯೋತ್ಸವ ಆಚರಿಸಿ ಬೀದರ ಜಿಲ್ಲೆಯ ಕೀರ್ತಿಪತಾಕೆ ಬಾನೆತ್ತರಕ್ಕೆ ಹಾರಿಸಿದವರು.

ಅಕ್ಕನವರ ಮಾನಸ ಪುತ್ರರಾದ ಪ್ರಭುದೇವ ಸ್ವಾಮಿಜಿ ಹಳ್ಳಿ ಹಳ್ಳಿಗಳಲ್ಲಿ ಪ್ರವಚನಗಳು ಮಾಡುತ್ತಾ, ವಚನ ವಿಜಯೋತ್ಸವ ಆಚರಿಸುವ ಕಾರ್ಯವನ್ನು ನೋಡಿದರೆ ಅಭಿಮಾನವೆನಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಕಾಶ ಮಠಪತಿ, ಅಣವೀರ ಕೋಡಂಬಲ್, ಸಿ.ಎಸ್. ಗಣಾಚಾರಿ, ಅಶೋಕ ಎಲಿ, ಆರ್.ಕೆ. ಪಾಟೀಲ, ಶಿವಕುಮಾರ ಪಾಖಲ, ಸಿದ್ದರಾಮಪ್ಪ ಕಪಲಾಪುರೆ, ಸಂಜು ಕುಮಾರ, ಸಿದ್ದರಾಮಪ್ಪ ಪಾಟೀಲ ಮುಂತಾದವರು ಭಾಗವಹಿಸಿದರು.

ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ಸಂಗಮೇಶ ಪಾಟೀಲ ನಿರೂಪಿಸಿದರು.

ಗ್ರಾಮದ ಹಿರಿಯರು, ತಾಯಂದಿರು, ಮಕ್ಕಳು ಮುಂತಾದವರು ತಲೆ ಮೇಲೆ ವಚನ ಸಾಹಿತ್ಯ ಗ್ರಂಥವನ್ನು  ಹೊತ್ತು ಭಕ್ತಿ ಶ್ರದ್ಧೆಯಿಂದ ವಚನದಲ್ಲಿ ವಿಜಯೋತ್ಸವದಲ್ಲಿ ಭಾಗಿಯಾದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *