ಮೈಸೂರು
ಸಂಘ ಪರಿವಾರದ ವಚನ ದರ್ಶನ ಪುಸ್ತಕಕ್ಕೆ ಉತ್ತರವಾಗಿ ಬಂದಿರುವ ‘ವಚನ ದರ್ಶನ ಮಿಥ್ಯ ಸತ್ಯ’ ಪುಸ್ತಕ ಜಿಲ್ಲೆಯ ಬಸವ ಸಂಘಟನೆಗಳ ಸಹಯೋಗದಲ್ಲಿ ಏಪ್ರಿಲ್ 6 ಲೋಕಾರ್ಪಣೆಯಾಗಲಿದೆ.
ನಟರಾಜ ಸಭಾ ಭವನದಲ್ಲಿ ಬೆಳಗ್ಗೆ 11ಗಂಟೆಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್, ಲಿಂಗಾಯತ ಸಾಂಸ್ಕೃತಿಕ ಸಮಿತಿ ಮತ್ತು ಇತರ ಬಸವ ಸಂಘಟನೆಗಳು ಭಾಗವಹಿಸುತ್ತಿವೆ.

“ಮೈಸೂರಿನಲ್ಲಿ ಇಷ್ಟೊಂದು ಸಂಘಟನೆಗಳು ಒಂದೇ ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ. ವಚನಗಳನ್ನು ತಿರುಚುವ, ಲಿಂಗಾಯತರ ಮೇಲೆ ದಾಳಿ ಮಾಡುವ ಕೆಲಸ ನಡೆದರೆ ನಾವೆಲ್ಲ ಹೇಗೆ ನಮ್ಮ ಬಿನ್ನಾಭಿಪ್ರಾಯ ಬಿಟ್ಟು ಒಂದಾಗುತ್ತೇವೆ ಎಂದು ಇದು ತೋರಿಸುತ್ತದೆ. ಇವೆಲ್ಲಾ ಸಂಘಟನೆಗಳಿಗೆ ಬೇರೆ ಬೇರೆ ಆದ್ಯತೆಗಳಿದ್ದರೂ ಎಲ್ಲರಲ್ಲಿಯೂ ಬಸವ ಭಕ್ತರೇ ಇದ್ದಾರೆ,” ಎಂದು ಜೆಎಲ್ಎಂ ಜಿಲ್ಲಾಧ್ಯಕ್ಷ ಮಹದೇವಪ್ಪ ಹೇಳಿದರು.
“ಈಗಿನ ಲಿಂಗಾಯತರು 2018ರ ಮುಂಚೆ ಇದ್ದ ಲಿಂಗಾಯತರಲ್ಲ. ಸ್ವತಂತ್ರ ಧರ್ಮ ಚಳುವಳಿ ಶುರುವಾದ ಮೇಲೆ ಸಮಾಜದಲ್ಲಿ ಬಹಳ ದೊಡ್ಡ ಜಾಗೃತಿಯುಂಟಾಗಿದೆ. ಬಸವ ತತ್ವದ ಮೇಲೆ ಯಾವುದೇ ದಾಳಿ ನಡೆದರೆ ತಕ್ಷಣ ಪ್ರತಿಕ್ರಿಯೆ ಜನಸಾಮಾನ್ಯರಿಂದಲೇ ಬರುತ್ತಿದೆ. ಸಂಘಟನೆಯ ದೃಷ್ಟಿಯಿಂದ ಇದು ಬಹಳ ಒಳ್ಳೆಯ ಬೆಳವಣಿಗೆ,” ಎಂದು ಹೇಳಿದರು.
ಈಗಿನ ಲಿಂಗಾಯತರು 2018ರ ಮುಂಚೆ ಇದ್ದ ಲಿಂಗಾಯತರಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷರಾಗಿ ಜೆಎಲ್ಎಂ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್, ಮುಖ್ಯ ಅತಿಥಿಗಳಾಗಿ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಬರಲಿದ್ದಾರೆ. ಮಿಥ್ಯ ಸತ್ಯದ ಸಂಪಾದಕ ಟಿ ಆರ್ ಚಂದ್ರಶೇಖರ್ ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ.
ಜೆಎಲ್ಎಂ ಜಿಲ್ಲಾಧ್ಯಕ್ಷ ಮಹದೇವಪ್ಪ ಅವರಿಂದ ಸ್ವಾಗತ ಭಾಷಣ, ಕಾರ್ಯದರ್ಶಿ ಎಂ ಮಾರಪ್ಪ ಅವರಿಂದ ಶರಣು ಸಮರ್ಪಣೆ ನಡೆಯಲಿದೆ.
ಹೊಸ ಮಠದ ಪೂಜ್ಯ ಶ್ರೀ ಚಿದಾನಂದ ಸ್ವಾಮಿಗಳು, ನೀಲಕಂಠ ಮಠದ ಪೂಜ್ಯ ಶ್ರೀ ಸಿದ್ದಮಲ್ಲ ಸ್ವಾಮಿಗಳು, ಕುಂದೂರು ಮಠದ ಪೂಜ್ಯ ಶ್ರೀ ಶರತ್ಚಂದ್ರ ಸ್ವಾಮಿಗಳು, ಬಸವ ಜ್ಞಾನ ಮಂದಿರದ ಮಾತೆ ಪೂಜ್ಯ ಶ್ರೀ ಬಸವಾಂಜಲಿ ದೇವಿ, ಅಲ್ಲಮ ಪ್ರಭು ಶೂನ್ಯ ಪೀಠದ ಪೂಜ್ಯ ಶ್ರೀ ಗೌರಿ ಶಂಕರ ಸ್ವಾಮಿಗಳು ಇವರುಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಸವ ಜಯಂತಿ 2025ರ ಅಧ್ಯಕ್ಷ ಟಿ ಕೆ ನಾಗರಾಜು, ಮೈಸೂರು ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ ಶಿವಕುಮಾರ್ ದೂರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮ ಗು ಸದಾನಂದಯ್ಯ ಉಪಸ್ಥಿತರಿರುತ್ತಾರೆ.
ಲಿಂಗಾಯತ ಧರ್ಮದ ಹೋರಾಟವನ್ನು ವಿರೋಧಿಸಲು ಸಂಘ ಪರಿವಾರ ಹೊರತಂದಿದ್ದ ವಚನ ದರ್ಶನ ಪುಸ್ತಕ ಹಲವಾರು ನಗರಗಳಲ್ಲಿ ಬಿಡುಗಡೆಯಾಗಿತ್ತು. ಅದಕ್ಕೆ ಪ್ರತಿಯಾಗಿ ಬಸವ ಸಂಘಟನೆಗಳು ಪ್ರಕಟಿಸಿರುವ ‘ವಚನ ದರ್ಶನ ಮಿಥ್ಯ ಸತ್ಯ’ ಅದಕ್ಕಿಂತ ಹೆಚ್ಚಿನ ಊರುಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಂಪಾದಕರು ಹೇಳಿದ್ದಾರೆ.
ಮೈಸೂರಿನ ನಂತರ ಚಾಮರಾಜನಗರದಲ್ಲಿ ‘ವಚನ ದರ್ಶನ ಮಿಥ್ಯ ಸತ್ಯ’ ಬಿಡುಗಡೆಯಾಗಲಿದೆ.
ಶುಭಾವಾಗಲಿ🌹🌹🌹🙏🙏🙏
ವಚನ ದರ್ಶನ ಮಿಥ್ಯ ಸತ್ಯ’ ಪುಸ್ತಕವು ಎಪ್ರಿಲ್ 6 ರಂದು ಬಸವ ಸಂಘಟನೆಗಳ ಸಹಯೋಗದಲ್ಲಿ ಲೋಕಾರ್ಪಣೆಯಾಗಲಿರುವ ಈ ಗ್ರಂಥವು ವಚನ ಪರಂಪರೆಯ ಸತ್ಯವನ್ನು ವೈಜ್ಞಾನಿಕ ಹಾಗೂ ತಾತ್ತ್ವಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ ಮಹತ್ವದ ಪ್ರಬಂಧವಾಗಲಿ.