ವಚನ ದರ್ಶನ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ: ಜೆ.ಎಸ್.ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

‘ಇಂದು ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯ ರಕ್ಷಿಸಲು ದೊಡ್ಡ ಮಟ್ಟದ ಜನಾಂದೋಲನ ನಡೆಸಬೇಕಾದ ಅಗತ್ಯವಿದೆ’ ಎಂದು ಸಾಹಿತಿ ಜೆ.ಎಸ್‌. ಪಾಟೀಲ ಸೋಮವಾರ ಅಭಿಪ್ರಾಯ ಪಟ್ಟರು.

ಶರಣ ಸಂಸ್ಕೃತಿ, ವಚನ ಸಾಹಿತ್ಯ ನಾಶಗೊಳಿಸುವ ಹುನ್ನಾರ ನಿರಂತರವಾಗಿ ನಡೆಸಲಾಗುತ್ತಿದೆ. ವಚನ ಸಾಹಿತ್ಯವನ್ನು ಮಲೀನಗೊಳಿಸುವ ಉದ್ದೇಶದಿಂದಲೇ ‘ವಚನ ದರ್ಶನ’ ಎಂಬ ಕೊಳಕು ಪುಸ್ತಕವನ್ನು ಪ್ರಕಟಿಸಲಾಗಿದೆ. ಇಂತಹ ಶಕ್ತಿಗಳ ವಿರುದ್ಧ ವಚನ ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿ, ವಚನ ಸಾಹಿತ್ಯದ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಕೊಳಕು ವಚನ ದರ್ಶನ ಪುಸ್ತಕದ ಮೂಲಕ ವಚನ ಸಾಹಿತ್ಯವನ್ನು ಮಲೀನಗೊಳಿಸುವ ಕಾರ್ಯಕ್ಕೆ ಕೈ ಹಾಕಿದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ವಚನ ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಚನ ಸಾಹಿತ್ಯದ ಸಂರಕ್ಷಣೆ ಮಾಡಬೇಕೆಂದು ವಿಜಯಪುರದ ಶರಣ ಸಾಹಿತಿ ಡಾ. ಜೆ.ಎಸ್.ಪಾಟೀಲ ತಿಳಿಸಿದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೀದರ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ಡಾ. ಎಸ್.ಎಸ್.ಸಿದ್ದಾರೆಡ್ಡಿ ವೇದಿಕೆಯಲ್ಲಿ ಆಯೋಜಿಸಿದ 5ನೇ ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯ ಸರ್ವಾಂಗೀಣ ಚಳುವಳಿಯ ಉಪ ಉತ್ಪನ್ನಗಳಾಗಿವೆ. ಸಾಹಿತ್ಯೇತರ ಉದ್ದೇಶದಿಂದ ವಚನ ಸಾಹಿತ್ಯ ಹುಟ್ಟಿಕೊಂಡಿದೆ. ಜಾತಿ ವರ್ಣ ವರ್ಗರಹಿತವಾದ ಕಲ್ಯಾಣ ರಾಜ್ಯದ ನಿರ್ಮಾಣಕ್ಕಾಗಿ ಹುಟ್ಟಿಕೊಂಡ ವಚನ ಸಾಹಿತ್ಯವನ್ನು ಮಲೀನಗೊಳಿಸಲು ಹಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. 47 ವಚನಗಳಲ್ಲಿ ವೀರಶೈವ ಪದ ಸೇರಿವೆ. ಸಾವಿರಾರು ವಚನಗಳಲ್ಲಿ ಸಂಸ್ಕೃತಿ ಪದಗಳು ಸೇರಿಕೊಂಡಿವೆ.

1930ರ ನಂತರ ವಚನಗಳು ಉಪನಿಷತ್‌ನ ಒಂದು ಭಾಗ ಎಂದು ಹೇಳಲಾಯಿತು. 2015ರಲ್ಲಿ ಶಿವಮೊಗ್ಗದ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯವು ಸನಾತನ ಸಂಸ್ಕೃತಿಯ ಭಾಗ ಎಂದು ಹೇಳಲಾಯಿತು. ಈ ರೀತಿ ವಚನಗಳ ಮೇಲೆ ವಕ್ರದೃಷ್ಟಿ ಹಾಕುವವರ ವಿರುದ್ಧ ಪರಿಷತ್ತು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಬೇಕು. ಬಸವ ಪ್ರಜ್ಞಾಧಾರೆಗೆ ರಾಜ್ಯದಾದ್ಯಂತ ಪ್ರಚಾರ ಮಾಡುವ ಅವಶ್ಯಕತೆ ಇದೆ ಎಂದು ಪಾಟೀಲ ಅಭಿಪ್ರಾಯಪಟ್ಟರು.

ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸಿ.ಸೋಮಶೇಖರ ಮಾತನಾಡಿ ವಚನ ಸಾಹಿತ್ಯವೆಂದರೆ ನಡೆ-ನುಡಿಗಳನ್ನು ಒಂದಾಗಿಸುವ ಸಾಹಿತ್ಯ. ಹೃದಯ ಅರಳಿಸುವ ಅನುಭಾವದ ಔತಣ, ಶೋಷಣೆ, ಮೂಢನಂಬಿಕೆ, ಕಂದಾಚಾರ, ವರ್ಣಭೇದ, ವರ್ಗಭೇದವೆಂಬ ಸಾಮಾಜಿಕ ಸಾಂಕ್ರಾಮಿಕ ರೋಗವನ್ನು ಜಗತ್ತಿನಿಂದಲೇ ನಿರ್ಮೂಲನೆ ಮಾಡಲು ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲ ಎರೆದು ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ಸಾಹಿತ್ಯವಾಗಿದೆ. ವಚನಗಳು ಜಗತ್ತಿನ ಜನರಿಗೆ ನೀಡಿದ ಜೀವನ ಸಂವಿಧಾನ. ಆಡಳಿತಾತ್ಮಕ ಸಂವಿಧಾನ ತಿದ್ದುಪಡಿ ಮಾಡಬಹುದು.

ಆದರೆ ಬಸವಾದಿ ಶರಣರ ಜೀವಪರ ಸಂವಿಧಾನವೆಂಬ ವಚನ ಸಾಹಿತ್ಯವನ್ನು ತಿದ್ದಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಾಯಕ ಮತ್ತು ದಾಸೋಹದ ಮೂಲಕ ಗುಣಾತ್ಮಕ ಬದುಕು ಕಟ್ಟಿಕೊಳ್ಳಬೇಕೆಂದು ಶ್ರೀಮಂತ ಸಂಸ್ಕೃತಿಗೆ ನಾಂದಿ ಹಾಡಿದ ವಚನ ಸಾಹಿತ್ಯ ಜನ ಬದುಕಲಿ, ಜಗ ಬದುಕಲಿ ಎಂಬ ಸತ್‌ಸಂಕಲ್ಪ ಹೊತ್ತುಕೊಂಡು ರಚನೆಯಾಗಿವೆ. ಶರಣರು ನೈತಿಕ ಧಾರ್ಮಿಕ, ಆಧ್ಯಾತ್ಮಿಕತೆ ಜೊತೆಗೆ ಆರ್ಥಿಕ ಸಮಾನತೆ ನೀಡಿದರು. ಶರಣರು ನೀಡಿದ ಅಸಂಗ್ರಹ ಸೂತ್ರವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡರೆ ಸರ್ವರಿಗೂ ಸಮಬಾಳು ಸಮಪಾಲು ನೀತಿ ಜಾರಿಗೆ ಬಂದಂತಾಗುತ್ತದೆ.

ಇಂದಿನ ಕಾಲದಲ್ಲಿ ಸಾರ್ವಜನಿಕ ಹುದ್ದೆಗಳನ್ನು ತಮ್ಮ ಕುಟುಂಬಸ್ಥರಿಗೆ ಮಾರಾಟವಾಗುತ್ತಿವೆ. ಆದ್ದರಿಂದ ರಾಜಕಾರಣದಲ್ಲಿ ಧರ್ಮದ ಅವಶ್ಯಕತೆ ಇದೆ. ಜಗತ್ತಿನ ಎಲ್ಲಾ ತಲ್ಲಣಗಳಿಗೆ ವಚನ ಸಾಹಿತ್ಯ ಸಿದ್ದೌಷಧಿಯಾಗಿದೆ. ದೇವರಿಗೂ ಮತ್ತು ಮನುಷ್ಯರಿಗೂ ನೇರಸಂಪರ್ಕ ಕಲ್ಪಿಸಿದ ಬಸವಾದಿ ಶರಣರು ಇಷ್ಟಲಿಂಗವನ್ನು ಪೂಜಿಸಲು ಆಧ್ಯಾತ್ಮಿಕ ಸ್ವಾತಂತ್ರö್ಯ ನೀಡಿದ್ದಾರೆ. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಹಂಕಾರ, ಅಧಿಕಾರದ ಮದ, ಕೀರ್ತಿವಾರ್ತೆಗಳಿಂದ ದೂರ ಉಳಿಯಬೇಕೆಂದು ಸೋಮಶೇಖರ ಸಲಹೆ ನೀಡಿದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ ಆಶಯ ನುಡಿಗಳನ್ನಾಡಿ ನಿರ್ಲಕ್ಷಿತ ವಚನಕಾರರನ್ನು ಮತ್ತು ಅವರು ರಚಿಸಿದ ವಚನಗಳನ್ನು ಬೆಳಕಿಗೆ ತರುವುದೇ ಪರಿಷತ್ತಿನ ಮೂಲ ಧ್ಯೇಯವಾಗಿದೆ. ವಚನ ಸಾಹಿತ್ಯ ಕೆಲವರಿಂದ ರಚನೆಯಾದವುಗಳಲ್ಲ. ಅದೊಂದು ಆಕಾಶವಿದ್ದಂತೆ. ಅದರ ಪರಿಕಲ್ಪನೆ ವಿಶಾಲವಾಗಿದೆ. ನಡೆ-ನುಡಿ ಒಂದಾಗಿಸಿಕೊಂಡು ವಚನಗಳನ್ನು ಶರಣರು ರಚಿಸಿದ್ದಾರೆ. ಹೀಗಾಗಿ ಅವರು ಜನರ ಮನಗಳಿಗೆ ತಲುಪಿವೆ. ನಾನು ಆಧುನಿಕ ವಚನಗಳ ವಿರೋಧಿಯಲ್ಲ. ಆದರೆ ನಮಗೆ ಆಧುನಿಕ ವಚನಗಳು ಬೇಡ. ಏಕೆಂದರೆ ಅವುಗಳಲ್ಲಿ ನಡೆ-ನುಡಿ ಒಂದಾಗಿರುವುದಿಲ್ಲ. ಆದ್ದರಿಂದ ಬಸವಾದಿ ಶರಣರ ಮೂಲ ವಚನಗಳನ್ನು ಶಾಲಾ ಕಾಲೇಜಿನ ಮಕ್ಕಳಿಗೆ ತಲುಪಿಸುವ ಅವಶ್ಯಕತೆ ಇದೆ. ಮಕ್ಕಳಿಗೆ ವಚನ ಓದಿಸಿದರೆ ಅವು ಅವರ ಹೃದಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನಿತಾ ಎಸ್.ದಾಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ವಹಿಸಿದ್ದರು. ಸಮ್ಮುಖವನ್ನು ಹುಲಸೂರಿನ ಪೂಜ್ಯ ಶ್ರೀ ಡಾ. ಶಿವಾನಂದ ಸ್ವಾಮಿಗಳು, ಡಾ. ಸಿದ್ಧರಾಮ ಬೆಲ್ದಾಳ ಶರಣರು ವಹಿಸಿದ್ದರು. ಅಧ್ಯಕ್ಷತೆಯನ್ನು ಪರಿಷತ್ತಿನ ಗೌರವಾಧ್ಯಕ್ಷೆ ಡಾ. ಗುರಮ್ಮಾ ಸಿದ್ದಾರೆಡ್ಡಿ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ, ಚನ್ನಬಸವ ಬಳತೆ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ.ಶೆಟಕಾರ, ಹಾಸನದ ರವಿ ನಾಕಲಗೂಡು, ಬಾಗಲಕೋಟೆಯ ಶ್ರೀಶೈಲ ಕರಿಶಂಕರ, ಚಿಕ್ಕಬಳ್ಳಾಪುರದ ಕೆ.ಪಿ.ನವಮೋಹನ, ಗದಗದ ಮಹಾಂತೇಶ ಗಜೇಂದ್ರಗಡ, ಆರ್.ಬಿ.ವೆಂಕಟೇಶ ಉಪಸ್ಥಿತರಿದ್ದರು.

ಭಾನುಪ್ರಿಯಾ ಅರಳಿ ತಂಡದವರಿಂದ ನಾಡಗೀತೆ ಜರುಗಿತು. ಹಿರಿಯ ಸಾಹಿತಿ ಡಾ. ರಘುಶಂಖ ಭಾತಂಬ್ರಾ ಸ್ವಾಗತಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ವಚನ ನೃತ್ಯ ಜರುಗಿತು. ಪುಟ್ಟರಾಜ ಶರಣಯ್ಯ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ದೀಪಕ ಥಮಕೆ ಮತ್ತು ಶ್ರೀದೇವಿ ಪಾಟೀಲ ನಿರೂಪಿಸಿದರು. ಶೈಲಜಾ ಚಳಕಾಪುರೆ ವಂದಿಸಿದರು. ಶಿವಲಿಂಗ ಹೆಡೆ, ಬಸವರಾಜ ಮೂಲಗೆ, ಸರಿತಾ ಹುಡಗಿಕರ ವೇದಿಕೆ ಸಮನ್ವಯ ಮಾಡಿದರು.

Share This Article
Leave a comment

Leave a Reply

Your email address will not be published. Required fields are marked *