ಬೆಳಗಾವಿ
ಉಪಚುನಾವಣಾ ಪ್ರಚಾರ ಕಾರ್ಯಕ್ಕೆ ಹೋಗುವುದಿಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರ ನನ್ನನ್ನು ಕರೆದರೂ ಹೋಗುವುದಿಲ್ಲ. ಅವರ ಮುಖವನ್ನೂ ನೋಡುವುದಿಲ್ಲ. ಅಷ್ಟಕ್ಕೂ ನನ್ನನ್ನು ಪ್ರಚಾರಕ್ಕೆ ಕರೆಯಲು ವಿಜಯೇಂದ್ರ ಯಾರು. ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವವರೆಗೂ ಯಾವುದೇ ಕಡೆ ಪ್ರಚಾರಕ್ಕೆ ಹೋಗುವುದಿಲ್ಲ,’ ಎಂದರು.
‘ಪಕ್ಷಕ್ಕೆ ಶುಭ ಹಾರೈಸುತ್ತೇನೆ. ಆದರೆ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಪಕ್ಷದ ಹೈಕಮಾಂಡ್ ಪ್ರಚಾರಕ್ಕೆ ಹೋಗುವಂತೆ ತಿಳಿಸಿದರೆ ಹೋಗುವೆ. ಆದರೆ, ಈವರೆಗೂ ಯಾರೂ ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ’ ಎಂದರು.
ಡಿ.ಕೆ.ಶಿವಕುಮಾರ್ ಅವರು ಬ್ಲ್ಯಾಕ್ ಮೇಲ್ ಮಾಡಿ ಯೋಗೇಶ್ವರ ಅವರನ್ನು ಸೆಳೆದಿದ್ದಾರೆ ಎನ್ನುವ ಆರೋಪ ಸುಳ್ಳು. ಅವರಾಗಿಯೇ ಕಾಂಗ್ರೆಸ್ ಗೆ ಹೋಗಿದ್ದಾರೆ ಎಂದರು.
‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಿ.ಪಿ. ಯೋಗೇಶ್ವರ್ ಕಾರಣ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ, ‘ಇದು ಖಂಡಿತ ನಿಜ. ನಾನು, ಸಿ.ಪಿ.ಯೋಗೇಶ್ವರ್ ಮತ್ತು ಎನ್.ಆರ್.ಸಂತೋಷ ಮುಂಚೂಣಿಯಲ್ಲಿ ಇದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ ನಾನು, ಆರ್.ಶಂಕರ ಸಚಿವರಾದೆವು. ಆದರೂ ಸರ್ಕಾರ ಪತನಗೊಳಿಸಿದ್ದೆವು. ಇಷ್ಟೆಲ್ಲ ಮಾಡಿದ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಯತ್ನ ಮಾಡಿದರೂ ಸಾಧ್ಯವಾಗಲಿಲ್ಲ’ ಎಂದರು.
ಡಿ.ಕೆ.ಶಿವಕುಮಾರ್ ಪಾರ್ಟ್ ಟೈಂ ಜಲಸಂಪನ್ಮೂಲ ಮಂತ್ರಿ. ಫುಲ್ ಟೈಮ್ ಬಿಬಿಎಂಪಿ ಮಂತ್ರಿ. ರಾಜ್ಯದ ಹಿತದೃಷ್ಟಿಯಿಂದ ಅವರು ಜಲಸಂಪನ್ಮೂಲ ಖಾತೆ ಬಿಟ್ಟು ಕೊಡಬೇಕು ಎಂದರು.